ಜಡೇಕುಂಟೆ ಮಂಜುನಾಥ್
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಎರಡೂವರೆ ದಶಕಗಳ ಹೋರಾಟಕ್ಕೆ ಇನ್ನೂ ಫಲ ಸಿಕ್ಕಿಲ್ಲ. ವಿವಿಧ ಜನಪರ ಸಂಘಟನೆಗಳು, ರೈತ, ಕನ್ನಡಪರ, ದಲಿತ, ನವಜಾಗೃತಿ ಯುವ ವೇದಿಕೆ ಹಾಗೂ ಪರಶುರಾಂಪುರ ತಾಲೂಕು ಹೋರಾಟ ಸಮಿತಿ ಹೀಗೆ ವಿವಿಧ ಸಂಘಟನೆಗಳ ಬಹುದಿನಗಳ ಹೋರಾಟ ಇದೀಗ ಸರ್ಕಾರದ ಅಂಗಳಕ್ಕೆ ಬಂದು ನಿಂತಿದೆ.
90ರ ದಶಕದ ಕೊನೆಯಲ್ಲಿ ಶುರುವಾದ ತಾಲೂಕು ಹೋರಾಟ ಸಮಿತಿ ಆರಂಭದಲ್ಲಿ ಧರಣಿ ನಡೆಸುವುದು, ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವುದು ಸೇರಿದಂತೆ ಎಲ್ಲಾ ಜನಸಮುದಾಯಗಳನ್ನು, ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. 1999ರಲ್ಲಿ ಮುಖ್ಯಮಂತ್ರಿ ಆಗಿದ್ದ ಎಸ್.ಎಂ.ಕೃಷ್ಣ ಅವಧಿಯಲ್ಲಿ ಸುಮಾರು 48 ಬಸ್‌ಗಳಲ್ಲಿ ಜನರು ಸಿಎಂ ಮನೆಯ ಮುಂದೆ ಜಮಾಯಿಸಿದ್ದರು. ಇದಾದ ನಂತರವೂ ಹೋರಾಟ ಮುಂದುವರಿದೇ ಇತ್ತು. ಇವತ್ತಿಗೂ ಈ ಕೂಗು ನಿಂತಿಲ್ಲ. ಮೊದಲು ಜನರು ಬೀದಿಯಲ್ಲಿ ಅಧಿಕಾರಿಗಳ ಮುಂದೆ ನಿಂತು ಧ್ವನಿ ಎತ್ತಿದ್ದರು. ಈಗ ಜನರೇ ಆರಿಸಿ ಕಳಿಸಿದ ಜನಪ್ರತಿನಿಧಿ ಶಾಸನ ಸಭೆಯಲ್ಲಿ ಧ್ವನಿ ಎತ್ತುತ್ತಿದ್ದಾರೆ.ಕಳೆದ ಮೂರು ಅವಧಿಯಲ್ಲಿ ಹ್ಯಾಟ್ರಿಕ್ ಗೆಲುವು ಪಡೆಯುವ ಮೂಲಕ ಶಾಸಕರಾಗಿರುವ ಟಿ.ರಘುಮೂರ್ತಿ ಅವರು ಸದನದಲ್ಲಿ ಮೂರು ನಾಲ್ಕು ಬಾರಿ ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿ ಮಾಡಲೇಬೇಕು ಎಂಬ ಒತ್ತಡಪೂರ್ವಕ ಮನವಿಯನ್ನು ಮಾಡಿದ್ದಾರೆ. ಶೂನ್ಯ ವೇಳೆಯಲ್ಲಿ ಸುದೀರ್ಘ ಚರ್ಚೆಗಳೂ ನಡೆದಿವೆ. ಅಲ್ಲದೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಕೃಷ್ಣಬೈರೇಗೌಡ ಅವರೊಂದಿಗೆ ಸದನದಲ್ಲಿ ಎಂ.ಬಿ.ಪ್ರಕಾಶ್ ನೇತೃತ್ವದ ತಾಲೂಕು ರಚನಾ ಸಮಿತಿಯ ವರದಿ ಹಾಗೂ ಹುಂಡೇಕರ್ ನೇತೃತ್ವದ ವರದಿ ಕುರಿತ ವಿಶ್ಲೇಷಣೆ ಮಾಡಿದ್ದಾರೆ. ಕ್ಷೇತ್ರದ ಜನತೆಗೆ ನಾನು ಮಾತು ಕೊಟ್ಟಿದ್ದೇನೆ. ಈ ಕೆಲಸ ಮಾಡಲೇಬೇಕು ಎಂಬ ಒತ್ತಡ ತಂತ್ರವನ್ನು ಮಾಡಿದ್ದಾರೆ. ಶಾಸಕರ ಒತ್ತಡಪೂರ್ವಕ ಮನವಿಯನ್ನು ಆಲಿಸಿ ಸರ್ಕಾರದ ಪರ ಉತ್ತರ ನೀಡಿದ ಕೃಷ್ಣಬೈರೇಗೌಡರು, ಆದ್ಯತೆ ಮೇಲೆ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಗುವುದು ಎಂದಿದ್ದರು.
ಇದೀಗ ಬದಲಾದ ರಾಜಕೀಯ ಸ್ಥಿತ್ಯಂತರಗಳಿಂದ ಸಿಎಂ ಬದಲಾವಣೆ ಆಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದಾರೆ. ಕಂದಾಯ ಮಂತ್ರಿಯೂ ಬದಲಾಗಿದ್ದಾರೆ. ಡಾ.ಜಿ.ಪರಮೇಶ್ವರ್‌ಗೆ ಉಪಮುಖ್ಯಮಂತ್ರಿ ಜೊತೆಗೆ ಕಂದಾಯ ಖಾತೆ ಸಿಕ್ಕಿದೆ. ಚಿತ್ರದುರ್ಗ ಜಿಲ್ಲೆಯ ಸಮಗ್ರ ಚಿತ್ರಣ ಅರಿತವರು ಪರಮೇಶ್ವರ್, ಈಗಲಾದರೂ ಪರಶುರಾಂಪುರ ತಾಲೂಕು ರಚನೆಗೆ ಚಾಲನೆ ಸಿಗಬಹುದೇ? ಆಂಧ್ರದ ಗಡಿಯಂಚಿನ ಗ್ರಾಮಗಳು ಸೇರಿದಂತೆ ಹೋಬಳಿಯ ಜನಸಂಖ್ಯೆ 1,10,000 ಜನಸಂಖ್ಯೆ ಇದೆ. ಇದು ಮುಂಬರುವ ಜನಗಣತಿ ಬಹಿರಂಗದ ನಂತರ ಮತ್ತಷ್ಟು ಹೆಚ್ಚಳವೂ ಆಗಬಹುದು.