ವಿಜಯಪುರ: ೧೨ನೇ ಶತಮಾನದ ವಚನ ಸಾಹಿತ್ಯ ಚಳವಳಿ ಕೇವಲ ಧಾರ್ಮಿಕ ಕ್ರಾಂತಿಯಲ್ಲ, ಅದು ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಜಗತ್ತಿನ ಮೊದಲ ಸಾಮಾಜಿಕ ಮತ್ತು ನೈತಿಕ ಆಂದೋಲನ ಎಂದು ಶಿಕ್ಷಕಿ ಎಂ.ಗಿರಿಜಾಂಬ ಅಭಿಪ್ರಾಯಪಟ್ಟರು.
ಇತಿಹಾಸದ ಪುಟಗಳಲ್ಲಿ ಮತ್ತು ಮುಖ್ಯವಾಹಿನಿಯ ಚರ್ಚೆಗಳಲ್ಲಿ ಬೆಳಕಿಗೆ ಬಾರದೆ ಶಿವಶರಣೆಯರು, ವಚನಕಾರ್ತಿಯರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಕ್ಕಮಹಾದೇವಿ, ನೀಲಾಂಬಿಕೆಯವರಷ್ಟೇ ಅಲ್ಲದೆ ಆಯ್ದಕ್ಕಿ ಲಕ್ಕಮ್ಮ, ಗೊಗ್ಗವ್ವೆ, ಸಂಕವ್ವೆ, ಕಾಳವ್ವೆ ಸೇರಿ ಅನೇಕ ಶರಣೆಯರು ತಮ್ಮ ವಚನಗಳ ಮೂಲಕ ಸಾಮಾಜಿಕ ಅನಿಷ್ಟಗಳು, ಮೂಢನಂಬಿಕೆಗಳನ್ನು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಉಪೇಕ್ಷಿತ ವಚನಕಾರ್ತಿಯರು ಕೇವಲ ಪುರುಷ ಪ್ರಧಾನ ವ್ಯವಸ್ಥೆ ಮಾತ್ರವಲ್ಲದೆ, ಅಂದಿನ ಧಾರ್ಮಿಕ ಕಟ್ಟುಪಾಡುಗಳನ್ನು ಧೈರ್ಯವಾಗಿ ಎದುರಿಸಿದ್ದರು. ಶರಣೆಯರ ವಚನಗಳಲ್ಲಿ ಸ್ತ್ರೀವಾದಿ ಚಿಂತನೆಗಳು, ಆತ್ಮಾಭಿಮಾನ ಮತ್ತು ಸಾಮಾಜಿಕ ಸುಧಾರಣೆಯ ತೀವ್ರ ಹಂಬಲ ಎದ್ದು ಕಾಣುತ್ತಿತ್ತು ಎಂದರು.
ಅಕ್ಕನಬಳಗ ಸೇವಾಟ್ರಸ್ಟ್ ಅಧ್ಯಕ್ಷ ವಿ.ಅನಿಲ್‌ಕುಮಾರ್ ಮಾತನಾಡಿ, ವಚನ ಸಾಹಿತ್ಯದ ಆಳವಾದ ಅಧ್ಯಯನ ಇಂದಿನ ಯುವ ಪೀಳಿಗೆಗೆ ಅಗತ್ಯವಾಗಿದೆ ಎಂದರು.ಗೋಷ್ಠಿ ಬಳಗದ ಕಾರ್ಯದರ್ಶಿ ಮ.ಸುರೇಶ್‌ಬಾಬು, ಅನಿತಾ ಸುಮಂತ್, ಅರಿವಿನ ಮನೆಯ ಕೃಷ್ಣಾನಂದ್, ಅಂಬಾ ಭವಾನಿ, ಮಹದೇವಮ್ಮ, ವಿಮಲಾಂಬ, ಮೀನಾ ಸುರೇಶ್, ದಾಕ್ಷಾಯಿಣಮ್ಮ, ರಾಷ್ಟ್ರೀಯ ಬಸವದಳದ ಮ.ಜಯದೇವ್, ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್, ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ, ಬಿ.ಪುಟ್ಟರಾಜಣ್ಣ, ವಿ.ಆರ್.ಮಹದೇವ್ ಇತರರಿದ್ದರು.