ಬನ್ನಿಕೋಡು ಗ್ರಾಪಂ ಖಜಾನೆ ಲೂಟಿ ವಿರುದ್ಧ ಕ್ರಮವಾಗಲಿ

KannadaprabhaNewsNetwork |  
Published : Jul 02, 2026, 02:00 AM IST
30 ಹೆಚ್.ಆರ್.ಆರ್ 01 ಹರಿಹರ: ತಾಲೂಕಿನ ಬನ್ನಿಕೋಡು ಗ್ರಾಮಅವ್ಯವಹಾರದ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ಪಡೆದಿರುವ 5 ಸಾವಿರ ಪುಟಗಳ ಮಾಹಿತಿಯನ್ನು ಹೆಚ್.ಎನ್ ಶಿವಪ್ಪ ಹಾಗೂ ಮುಖಂಡರು ಪ್ರದರ್ಶಿಸಿ ಮಾತನಾಡಿದರು.  | Kannada Prabha

ಸಾರಾಂಶ

ಬನ್ನಿಕೋಡು ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಶಿವಪ್ಪ ಹಾಗೂ ಮುಖಂಡರು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಪ್ರದರ್ಶಿಸಿ, ಗ್ರಾಪಂನಲ್ಲಿ ಖೊಟ್ಟಿ ಬಿಲ್‌ ನೀಡಿ ವರ್ಷಗಳಿಂದ ಅವ್ಯವಹಾರ ನಡೆಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕಿನ ಬನ್ನಿಕೋಡು ಗ್ರಾಮ ಪಂಚಾಯಿತಿಯ 2020-21 ರಿಂದ 2025-26ನೇ ಸಾಲಿನವರೆಗೆ ಆಡಳಿತ ನಡೆಸಿರುವ, ಚುನಾಯಿತ ಅಧ್ಯಕ್ಷ, ಅಭಿವೃದ್ಧಿ ಅಧಿಕಾರಿಗಳು ಕೋಟ್ಯಂತರ ರು.ಗಳ ಖೊಟ್ಟಿ ಬಿಲ್‌ಗಳ ಮೂಲಕ ಗ್ರಾ.ಪಂ. ಖಜಾನೆ ಲೂಟಿ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ, ಸದಸ್ಯರು, ಮುಖಂಡರು ಆಗ್ರಹಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಶಿವಪ್ಪ ಅವರು ಬನ್ನಿಕೋಡು ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿರುವ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಹಾಗೂ ಕೆಲ ಸದಸ್ಯರ ತಾಳಕ್ಕೆ ತಕ್ಕಂತೆ ಕುಣಿದು ಖೊಟ್ಟಿ ದಾಖಲೆಗಳ ಮೂಲಕ ಗ್ರಾಪಂ ಖಜಾನೆಗೆ ಕನ್ನ ಹಾಕಿದ್ದಾರೆ. ಈ ಕುರಿತು ಮಾಹಿತಿ ಹಕ್ಕಿನಡಿಯಲ್ಲಿ ₹20 ಸಾವಿರ ಭರಿಸಿ ಪಡೆದ 5000 ಪುಟಗಳ ಈ ಮಾಹಿತಿಯೇ ಸಾಕ್ಷಿ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

5 ವರ್ಷಗಳ ಅವಧಿಯಲ್ಲಿ ನಮ್ಮೂರಿನ ಗ್ರಾಮ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಚುನಾಯಿತ ಅಧ್ಯಕ್ಷರಾದ ರೇಣುಕಮ್ಮ, ಶಿನವಹಳ್ಳಿಯ ಮೀನಾಕ್ಷಮ್ಮ, ಬನ್ನಿಕೋಡು ಸಾಕಮ್ಮ, ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಶಿವಪ್ಪ ಬಿರಾದಾರ್, ರೇಣುಕಾ ಬಾಯಿ, ಸೌಭಾಗ್ಯಮ್ಮ, ರಮೇಶ್, ತುಕ್ಕಾನಾಯ್ಕ ಅವರು ಗ್ರಾಮದ ಅಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು, ಅಧ್ಯಕ್ಷರ ಕೆಲ ಸದಸ್ಯರ ಕೈಗೊಂಬೆಗಳಾಗಿ ಕೋಟ್ಯಂತರ ರು.ಗಳ ಭ್ರಷ್ಟಾಚಾರ ನಡೆಸಿದ್ದಾರೆ.

ನಮ್ಮೂರಿನ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು 25 ಬೋರ್‌ವೆಲ್‌ಗಳಿವೆ. ಆದರೆ, ಅವುಗಳಿಗೆ ನೀರೆತ್ತುವ 200 ಮೋಟಾರ್ ಖರೀದಿಸಿದ್ದೇವೆ ಎಂದು ಬಿಲ್ ಪಾಸ್ ಮಾಡಿಕೊಂಡಿದ್ದಾರೆ. ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಒಣಕಸ-ಹಸಿಕಸವನ್ನು ಮನೆ ಮನೆಯಲ್ಲಿಯೇ ಬೇರ್ಪಡಿಸಿ ಸಂಗ್ರಹಿಸುವುದಕ್ಕಾಗಿ ಡಸ್ಟ್ ಬಿನ್ ಖರೀದಿಯಲ್ಲಿ ಪಂಚಾಯಿತಿ ಲೆಕ್ಕಕ್ಕೆ ಮಣ್ಣೆರಚಿದ್ದಾರೆ ಎಂದರು.

ಗ್ರಾಮದ ಓಣಿ ಓಣಿಗಳಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲು ಲೈಟ್ ಖರೀದಿಗಾಗಿ, ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬಣ್ಣ, ಕುಡಿಯುವ ನೀರು ಪೈಪ್‌ಗಳ ಖರೀದಿ, ಗ್ರಾಮದ 9 ಅಂಗನವಾಡಿ ಕೇಂದ್ರಗಳಿಗೆ ಹಾಗೂ ಗ್ರಾಪಂ ಕಾರ್ಯಾಲಯಕ್ಕೆ ಸೇರಿದಂತೆ ಒಟ್ಟು 10 ಕುಡಿಯುವ ನೀರು ಶುದ್ಧೀಕರಿಸುವ ಯಂತ್ರಗಳನ್ನು ಖರೀದಿಸಲು ಪಾಸ್ ಮಾಡಿರುವ ಠರಾವು ಪ್ರಕಾರ ಸಾಮಗ್ರಿಗಳನ್ನು ಖರೀದಸದೇ, ₹8 ರಿಂದ ₹10 ಲಕ್ಷಗಳ ಖೊಟ್ಟಿ ಬಿಲ್‌ಗಳ ಮೂಲಕ ಭಾರಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.

ಈ ಕುರಿತು ಕಾನೂನು ಕ್ರಮ ಕೈಗೊಳುವಂತೆ ಒತ್ತಾಯಿಸಿ ಜಿಪಂ ಸಿಇಒ, ಮುಖ್ಯ ಲೆಕ್ಕಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಲೋಕಾಯುಕ್ತರಿಗೆ ಮನವಿ ಸಲ್ಲಿಸಲು ಸಮಗ್ರ ದಾಖಲಾತಿಗಳೊಂದಿಗೆ ತೆರಳಿದ್ದ ಸಮಯದಲ್ಲಿ, ಕೆಲವು ಪ್ರಕರಣಕ್ಕೆ ಮಾತ್ರ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಕ್ರಮಕ್ಕಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ, ಸಚಿವಾಲಯಕ್ಕೆ ಅರ್ಜಿ ಸಲ್ಲಿಸುತ್ತೆವೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ರೇವಣಪ್ಪ ಹುಲ್ಮನಿ, ಹಿರಿಯ ಮುಖಂಡ ಎಂ.ರಂಗಪ್ಪ, ಬೀರಪ್ಪ ಹುಲ್ಮನಿ, ನಿಂಗರಾಜ ಎಂ.ಟಿ, ಎಂ.ಬಿ ನಾಗರಾಜ್, ಸಿದ್ದಪ್ಪ ಕೆ.ಎಂ, ನಾಗರಾಜ ಕೆ.ಹೆಚ್ ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಲಪತಿ ನೇಮಕಾತಿ ಶೋಧನಾ ಸಮಿತಿ ರದ್ದುಗೊಳಿಸಲು ಆಗ್ರಹ
ವರದಕ್ಷಿಣೆ ಕಿರುಕುಳ, ದಪ್ಪವಾಗಿದ್ದೀಯಾ ಎಂದು ಹಂಗಿಸಿ ಪತ್ನಿ ಹತ್ಯೆಗೈದ ಪತಿ