ನವಲಗುಂದ:

ತಾಲೂಕಿನ ಹನಸಿ ಗ್ರಾಮದಲ್ಲಿ ಮಹಿಳೆಯೋರ್ವಳನ್ನು ಅವಳ ಪತಿ ಹಾಗೂ ಮನೆಯವರೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆಂದು ಯುವತಿಯ ತಾಯಿ ದೂರು ನೀಡಿದ್ದಾಳೆ. ಈ ದೂರಿನ ಹಿನ್ನೆಲೆಯಲ್ಲಿ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಪ್ರಿಯಾಂಕಾ ಕಮಲಾಕರ (29) ಹತ್ಯೆಯಾದ ಮಹಿಳೆ. ಜೂ.29 ರ ರಾತ್ರಿ ಈ ಘಟನೆ ನಡೆದಿದೆ.

ನನ್ನ ಮಗನಿಗಿಂತ ನೀನು ದಪ್ಪವಾಗಿದ್ದೀಯ. ಮದುವೆಯಾಗಿ ಎರಡು ವರ್ಷ ಕಳೆದರೂ ಮಕ್ಕಳಾಗಿಲ್ಲ. ತವರಿನಿಂದ ನೀನು ಆಭರಣ ತಂದಿಲ್ಲವೆಂದು ಹಿಂಸೆ ನೀಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಮೃತಳ ತಾಯಿ ದೂರು ನೀಡಿದ್ದಾಳೆ

ಆರೋಪಿಗಳಾದ ಬಸವರಾಜ ವಡ್ಡರ ಹಾಗೂ ರೇಣವ್ವ ವಡ್ಡರ, ಸುಭಾಸ ವಡ್ಡರ ಹಾಗೂ ಸಿದ್ದರಾಮೇಶ ವಡ್ಡರ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಕಲಬುರ್ಗಿ ಜಿಲ್ಲೆ ಚಿಂಚೊಳಿ ತಾಲೂಕಿನ ಚಂದಾಪುರ ಗ್ರಾಮದ ಪ್ರಿಯಾಂಕಾ ಕಮಲಾಕರ ಅವರನ್ನು ಹನಸಿ ಗ್ರಾಮದ ಬಸವರಾಜ ವಡ್ಡರನೊಂದಿಗೆ ಡಿ. 13, 2024ರಲ್ಲಿ ವಿವಾಹ ಮಾಡಿ ಕೊಡಲಾಗಿತ್ತು. ಪ್ರಿಯಾಂಕಾ ಸ್ಟಾಪ್‌ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು.

ಮದುವೆಯಾದ ಒಂದು ತಿಂಗಳಿನ ನಂತರ ಪತಿ ಹಾಗೂ ಅವರ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಜನವರಿಯಲ್ಲಿ ನನ್ನ ಮಗಳು ತವರು ಮನೆಗೆ ಬಂದಾಗ ದೂರವಾಣಿ ಕರೆ ಮಾಡಿ ಕಿರುಕುಳ ನೀಡಿದ್ದರು. ಪದೇ ಪದೇ ನನ್ನ ಮಗನಿಗಿಂತಲೂ ದಪ್ಪವಾಗಿದ್ದೀಯಾ, ನಿನಗೆ ಮಕ್ಕಳಾಗುತ್ತಿಲ್ಲ, ತವರು ಮನೆಯಿಂದ ಆಭರಣ ತರುವಂತೆ ಕಿರುಕುಳ ನೀಡುತ್ತಿದ್ದರು. ಅದನ್ನು ನನ್ನ ಮಗಳು ಸಹಿಸಿಕೊಂಡಿದ್ದಳು. ಆದರೆ, ಜೂ. 29ರ ರಾತ್ರಿ ಪ್ರಿಯಾಂಕಾಳ ಕತ್ತು ಹಿಚುಕಿ ಕೊಲೆ ಮಾಡಿದ್ದಾರೆ ಎಂದು ಮೃತಳ ತಾಯಿ ನವಲಗುಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಪಿಐ ರವಿಕುಮಾರ ಕಪ್ಪತ್ತನವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಜನಾರ್ದನ ಬಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.