ಹುಬ್ಬಳ್ಳಿ:
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ನಗರದಲ್ಲಿ ಬುಧವಾರದಿಂದ ಪುನರ್ ಪರಿಶೀಲನೆ ಕಾರ್ಯ ಆರಂಭಗೊಂಡಿದೆ. ಹೆಸ್ಕಾಂ ಸಿಬ್ಬಂದಿ ಬೆಳಗ್ಗೆಯಿಂದಲೇ ಮನೆ-ಮನೆಗೆ ತೆರಳಿ ಫಲಾನುಭವಿಗಳ ವಿವರ ಪರಿಶೀಲಿಸಿ, ಅಗತ್ಯ ಮಾಹಿತಿ ಸಂಗ್ರಹಿಸಿದರು.ಇಲ್ಲಿನ ಕೇಶ್ವಾಪುರ, ಗೋಪನಕೊಪ್ಪ, ಬೆಂಗೇರಿ ಸೇರಿದಂತೆ ವಿವಿಧೆಡೆ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ, ಗ್ರಾಹಕರ ವಿವರ ಹಾಗೂ ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿರುವ ಮಾಹಿತಿ ಪರಿಶೀಲಿಸಿದರು. ಮನೆ ಮಾಲೀಕರು ಅಥವಾ ಬಾಡಿಗೆದಾರರಿಂದ ಮಾಹಿತಿ ಪಡೆದು ಸೇವಾ ಸಿಂಧು ತಂತ್ರಾಂಶದಲ್ಲಿ ದಾಖಲಿಸಲಿದರು.
ಪಡಿತರ ಚೀಟಿ ಇದ್ದರೆ ಇದೆ ಎಂಬ ಮಾಹಿತಿ ನೀಡಬೇಕು. ಎಪಿಎಲ್ ಇದ್ದರೆ ಎಪಿಎಲ್ ಕಾರ್ಡ್ ನಂಬರ್ ಅಥವಾ ಬಿಪಿಎಲ್ ಇದ್ದರೆ ಬಿಪಿಎಲ್ ಕಾರ್ಡ್ ನಂಬರ್ ನೀಡಬೇಕು. ಯಾವುದೇ ಕಾರ್ಡ್ ಇಲ್ಲದಿದ್ದರೆ, ಅದನ್ನೂ ತಿಳಿಸಬೇಕು. ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಫಲಾನುಭವಿ ಗ್ರಾಹಕರು ಮೀಟರ್ ರೀಡರ್‌ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲು ಹೆಸ್ಕಾಂ ಮನವಿ ಮಾಡಿದೆ.ಪರಿಶೀಲನೆ ವೇಳೆ ಫಲಾನುಭವಿಗಳಿಂದ ಅಗತ್ಯ ದಾಖಲೆ ಹಾಗೂ ಮಾಹಿತಿ ಪಡೆದು, ಅವುಗಳನ್ನು ವಿಶೇಷ ಮೊಬೈಲ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಮಾಹಿತಿ ಯಶಸ್ವಿಯಾಗಿ ಅಪ್‌ಲೋಡ್ ಆದ ನಂತರ ಅದರ ಸ್ವೀಕೃತಿ (ರಿಸೀವ್) ಪ್ರತಿಯನ್ನು ಫಲಾನುಭವಿಗಳಿಗೆ ಸಿಬ್ಬಂದಿ ವಿತರಿಸುತ್ತಿದ್ದಾರೆ.
ಯೋಜನೆಯ ನೈಜ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳುವುದು ಹಾಗೂ ದಾಖಲೆಗಳಲ್ಲಿರುವ ವ್ಯತ್ಯಾಸ ಸರಿಪಡಿಸುವ ಉದ್ದೇಶದಿಂದ ಈ ಪುನರ್ ಪರಿಶೀಲನೆ ಕೈಗೊಳ್ಳಲಾಗಿದೆ. ಮಾಹಿತಿ ಸಂಗ್ರಹಣೆಯ ಬಳಿಕ ಅಗತ್ಯವಿದ್ದರೆ ದಾಖಲೆ ನವೀಕರಿಸುವ ಪ್ರಕ್ರಿಯೆಯೂ ನಡೆಯಲಿದೆ.
ಫಲಾನುಭವಿಗಳು ಪರಿಶೀಲನೆ ವೇಳೆ ಸಿಬ್ಬಂದಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆ ಒದಗಿಸಿ ಸಹಕರಿಸುವಂತೆ ಮನವಿ ಮಾಡಿದೆ. ಪರಿಶೀಲನಾ ಕಾರ್ಯ ಪೂರ್ಣಗೊಂಡ ಬಳಿಕ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮತ್ತಷ್ಟು ನಿಖರಗೊಳಿಸಲು ಸಹಕಾರಿಯಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶೀಲನೆ:ಸರ್ಕಾರದ ಆದೇಶದನ್ವಯ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನಾ ಕಾರ್ಯ ಹೆಸ್ಕಾಂ ವ್ಯಾಪ್ತಿಯಲ್ಲಿ ಬುಧವಾರದಿಂದ ಪ್ರಾರಂಭಗೊಂಡಿದೆ. ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫಲಾನುಭವಿಗಳ ಪರಿಶೀಲನಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಮ್ಮ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.