ರಾಜ್ಯದ ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳ ವಿವಿಗಳಲ್ಲಿ ಪಾರದರ್ಶಕತೆ, ನಿಷ್ಪಕ್ಷಪಾತತೆ ಹಾಗೂ ಸಾರ್ವಜನಿಕ ವಿಶ್ವಾಸ ಮತ್ತಷ್ಟು ಬಲಪಡಿಸಬೇಕು. ಆದರೆ, ಆಡಳಿತ ವ್ಯವಸ್ಥೆಯೇ ಅದನ್ನು ಕುಗ್ಗಿಸುವ ರೀತಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಲೋಕಾಯುಕ್ತ ಪ್ರಕರಣ ಎದುರಿಸುತ್ತಿರುವವರನ್ನು ಕುಲಪತಿ ನೇಮಕಾತಿಯ ಶೋಧನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ.
ಧಾರವಾಡ:
ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ವ್ಯಕ್ತಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಮತ್ತು ಯುಜಿಸಿ ನಿಯಮ ಬಾಹಿರವೂ ಆಗಿರುವ ಧಾರವಾಡ ಕೃಷಿ ವಿವಿ ಹಾಗೂ ಶಿವಮೊಗ್ಗ ಕೃಷಿ, ತೋಟಗಾರಿಕಾ ವಿಜ್ಞಾನಗಳ ವಿವಿ ಕುಲಪತಿ ಆಯ್ಕೆ ಶೋಧನಾ ಸಮಿತಿಗಳನ್ನು ರದ್ದುಗೊಳಿಸಿ, ನಿಷ್ಪಕ್ಷಪಾತ ಮತ್ತು ಸ್ವತಂತ್ರ ಶೋಧನಾ ಸಮಿತಿ ರಚಿಸಲು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಬೆಂಗಳೂರು ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಎನ್. ಪ್ರಕಾಶ ಕಮ್ಮರಡಿ ಆಗ್ರಹಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಮೇತ ಮಾಹಿತಿ ನೀಡಿದ ಅವರು, ರಾಜ್ಯದ ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳ ವಿವಿಗಳಲ್ಲಿ ಪಾರದರ್ಶಕತೆ, ನಿಷ್ಪಕ್ಷಪಾತತೆ ಹಾಗೂ ಸಾರ್ವಜನಿಕ ವಿಶ್ವಾಸ ಮತ್ತಷ್ಟು ಬಲಪಡಿಸಬೇಕು. ಆದರೆ, ಆಡಳಿತ ವ್ಯವಸ್ಥೆಯೇ ಅದನ್ನು ಕುಗ್ಗಿಸುವ ರೀತಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಲೋಕಾಯುಕ್ತ ಪ್ರಕರಣ ಎದುರಿಸುತ್ತಿರುವವರನ್ನು ಕುಲಪತಿ ನೇಮಕಾತಿಯ ಶೋಧನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯೇ ಎಂದು ಕಮ್ಮರಡಿ ಪ್ರಶ್ನಿಸಿದ್ದಾರೆ.
ಧಾರವಾಡ ಕೃಷಿ ವಿವಿಗೆ ಡಾ. ರಾಜೇಂದ್ರ ಪ್ರಸಾದ ಹಾಗೂ ಶಿವಮೊಗ್ಗ ವಿವಿಗೆ ಡಾ. ಸುರೇಶ ಅವರನ್ನು ಶೋಧನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರಿಬ್ಬರೂ ಆಯಾ ವಿವಿಯಲ್ಲಿ ಸೇವೆ ಸಲ್ಲಿಸಿದವರು. ಯುಜಿಸಿ ನಿಯಮಾವಳಿ ಈ ಅಂಶವನ್ನು ಒಪ್ಪುವುದಿಲ್ಲ. ಜತೆಗೆ ಇವರಿಬ್ಬರ ಮೇಲೂ ಗಂಭೀರ ಸ್ವರೂಪದ ಆರೋಪಗಳಿವೆ. ರಾಜ್ಯದ ಕೃಷಿ ವಿವಿಗಳ ನಿವೃತ್ತ ಪ್ರಾಧ್ಯಾಪಕರು, ಹಳೆಯ ವಿದ್ಯಾರ್ಥಿಗಳು ಒಕ್ಕೂಟ ರಚಿಸಿಕೊಂಡು ಈ ಕುರಿತು ರಾಜ್ಯಪಾಲರ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ. ಲೋಕಾಯುಕ್ತಕ್ಕೂ ಸಹ ದೂರು ಸಲ್ಲಿಸಲಾಗಿದೆ ಎಂದರು.ತಾವು ಮಾರ್ಗದರ್ಶಕರಾಗಿ ಸ್ವಯಂ ಪ್ರೇರಿತರಾಗಿ ಸಮಿತಿಯಿಂದ ಹೊರಬರಬೇಕೆಂಬ ಮನವಿ ಸಹ ಮಾಡಿಕೊಂಡಿದ್ದೇವೆ. ಜತೆಗೆ ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಮೇ 23ರಂದು ಮುಖ್ಯಮಂತ್ರಿಗೆ ನೇರವಾಗಿ ಪತ್ರ ಬರೆದು ಶೋಧನಾ ಸಮಿತಿಯ ನೇಮಕಾತಿ ಮರುಪರಿಶೀಲಿಸಲು ಆಗ್ರಹಿಸಿರುವುದನ್ನು ಸಹ ಇಲ್ಲಿ ಸ್ಮರಿಸಬಹುದು ಎಂದು ಹೇಳಿದರು.
ಶೋಧನಾ ಸಮಿತಿ ಅಧ್ಯಕ್ಷರ ಮೇಲೆ ಇಷ್ಟೆಲ್ಲ ಆಕ್ಷೇಪಣೆ, ಮನವಿ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಿದ ಮಧ್ಯೆಯೂ ಈ ಎರಡು ವಿವಿಗಳ ಕುಲಪತಿ ಆಯ್ಕೆಗೆ ಜು. 3ರಂದು ಸಮಿತಿ ಸಭೆ ನಡೆಸಲು ರಾಜ್ಯಪಾಲರು ತರಾತುರಿಯಲ್ಲಿ ದಿನಾಂಕ ನಿಗದಿಪಡಿಸಿದ್ದಾರೆ. ಉದ್ಭವಿಸಿರುವ ಆಕ್ಷೇಪಣೆ ಬಗ್ಗೆ ಸೂಕ್ತ ಪರಿಶೀಲನೆ ಮಾಡಿ ಶೋಧನಾ ಸಮಿತಿ ರದ್ದುಗೊಳಿಸಬೇಕು. ಇಲ್ಲದೇ ಹೋದಲ್ಲಿ ವಿವಿಗಳ ಪಾರದರ್ಶಕತೆ, ನೈತಿಕತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಕಮ್ಮರಡಿ ಸರ್ಕಾರಕ್ಕೆ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಕೃಷಿ ವಿವಿ ನಿವೃತ್ತ ಕುಲಪತಿ ಡಾ. ಡಿ.ಪಿ. ಬಿರಾದಾರ, ಗ್ರಾಮೀಣಾಭಿವೃದ್ಧಿ ತಜ್ಞ ಡಾ. ಪ್ರಕಾಶ ಭಟ್, ಡಾ. ಎಸ್.ಎಂ. ಮಂಟೂರ ಇದ್ದರು.