₹ 2.79 ಕೋಟಿ ಮೊತ್ತದ ರೊಬೋಟಿಕ್ ಮಷಿನ್ ಕೆಎಂಸಿಆರ್‌ಐನಲ್ಲಿ ಅಳವಡಿಸಲಾಗಿದೆ. ಸೋಮವಾರ 55 ವರ್ಷದ ಮಹಿಳೆಗೆ ಎರಡೂವರೆ ಗಂಟೆಯಲ್ಲಿ ಯಶಸ್ವಿ ಚಿಕಿತ್ಸೆ ಮಾಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಗೆ ₹ 3ರಿಂದ ₹3.30 ಲಕ್ಷ ವೆಚ್ಚ ತಗುಲಲಿದೆ.
ಹುಬ್ಬಳ್ಳಿ:
ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಎಂಸಿಆರ್‌ಐ ಅಸ್ಥಿ ಚಿಕಿತ್ಸಾ ವಿಭಾಗವು ಅತ್ಯಾಧುನಿಕ ರೋಬೋಟಿಕ್ ನೀ ರಿಪ್ಲೇಸ್‌ಮೆಂಟ್ (ಮೊಣಕಾಲು ಕೀಲು ಬದಲಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೆ.ಎಫ್. ಕಮ್ಮಾರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ₹ 2.79 ಕೋಟಿ ಮೊತ್ತದ ರೊಬೋಟಿಕ್ ಮಷಿನ್ ಕೆಎಂಸಿಆರ್‌ಐನಲ್ಲಿ ಅಳವಡಿಸಲಾಗಿದೆ. ಸೋಮವಾರ 55 ವರ್ಷದ ಮಹಿಳೆಗೆ ಎರಡೂವರೆ ಗಂಟೆಯಲ್ಲಿ ಯಶಸ್ವಿ ಚಿಕಿತ್ಸೆ ಮಾಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಗೆ ₹ 3ರಿಂದ ₹3.30 ಲಕ್ಷ ವೆಚ್ಚ ತಗುಲಲಿದೆ, ಇಲ್ಲಿ ಸಂಪೂರ್ಣ ಉಚಿತವಾಗಿ ನಿರ್ವಹಿಸಲಾಗಿದೆ ಎಂದರು.
ಅಸ್ಥಿ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೂ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯಬೇಕು ಎಂಬ ಸರ್ಕಾರದ ಆಶಯದಂತೆ ರೋಬೋಟಿಕ್ ಶಸ್ತ್ರಚಿಕಿತ್ಸೆ ಆರಂಭಿಸಲಾಗಿದೆ. ಇದಕ್ಕಾಗಿ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿ, ರೊಬೋಟಿಕ್ ವ್ಯವಸ್ಥೆ ಅಳವಡಿಸಲಾಗಿದ್ದು, ಪರೀಕ್ಷೆಗಳ ನಂತರ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.ಶಸ್ತ್ರಚಿಕಿತ್ಸೆಗೆ ಒಳಗಾದ 55 ವರ್ಷ ವಯಸ್ಸಿನ ಮಹಿಳೆಗೆ ತೀವ್ರ ಮೊಣಕಾಲಿನ ಸಂಧಿವಾತ (ಗ್ರೇಡ್–4 ಆಸ್ಟಿಯೋಆರ್ಥ್ರೈಟಿಸ್) ಇತ್ತು. ಎಕ್ಸ್-ರೇ ಮತ್ತು ಸ್ಕ್ಯಾನೋಗ್ರಾಂ ಪರೀಕ್ಷೆಗಳಲ್ಲಿ ಸಂಧಿಯ ಅಂತರ ಸಂಪೂರ್ಣವಾಗಿ ಕಡಿಮೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ರೊಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಚೇತರಿಸಿಕೊಳ್ಳುತ್ತಿದ್ದು, ದೈನಂದಿನ ಚಟುವಟಿಕೆ ಆರಂಭಿಸಿದ್ದಾರೆ ಎಂದು ತಿಳಿಸಿದರು.
ಈ ರೊಬೋಟಿಕ್ ತಂತ್ರಜ್ಞಾನದ ಪ್ರಮುಖ ಪ್ರಯೋಜನವೆಂದರೆ ಅತ್ಯಂತ ನಿಖರವಾಗಿ ಮೂಳೆ ಕತ್ತರಿಸುವುದು, ಕೃತಕ ಸಂಧಿಯನ್ನು ಸರಿಯಾದ ಸ್ಥಾನದಲ್ಲಿ ಅಳವಡಿಸುವುದು ಹಾಗೂ ಪ್ರತಿಯೊಬ್ಬ ರೋಗಿಯ ದೇಹರಚನೆಗೆ ಅನುಗುಣವಾಗಿ ಚಿಕಿತ್ಸಾ ಯೋಜನೆ ರೂಪಿಸುತ್ತದೆ. ಇದರಿಂದ ಶಸ್ತ್ರಚಿಕಿತ್ಸೆಯ ನಿಖರತೆ ಹೆಚ್ಚುವುದರೊಂದಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದರು.ಮೊಣಕಾಲು ನೋವಿನ ಆರಂಭಿಕ ಹಂತಗಳಲ್ಲಿ ಔಷಧಿ, ಫಿಸಿಯೋಥೆರಪಿ, ಪಿಆರ್‌ಪಿ ಇಂಜೆಕ್ಷನ್ ಸೇರಿದಂತೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಗ್ರೇಡ್- 4 ಹಂತ ತಲುಪಿದಾಗ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯೇ ಸೂಕ್ತ ಚಿಕಿತ್ಸೆಯಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಡಾ. ವಿನಯ ಪವಾರ, ಡಾ. ರಾಜಶೇಖರ ದ್ಯಾಬೇರಿ, ಡಾ. ವೆಂಕಟೇಶ ಮೂಲಿಮನಿ, ಡಾ. ಎ.ಎ. ಹೊಸಂಗಡಿ, ಡಾ. ಲಕ್ಷ್ಮಿಕಾಂತ ಸೇರಿದಂತೆ ಹಲವರಿದ್ದರು.