ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರಾಗಿ ತಳಿ ಎಂ.ಎಲ್-322ನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಬುಳ್ಳೇನಹಳ್ಳಿ ಗ್ರಾಮದಲ್ಲಿ ಪ್ರಾತ್ಯಕ್ಷಿಕೆ ಮಾಡಲಾಯಿತು. ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ತಸ್ಮಿಯಾ ಕೌಸರ್ ಮಾತನಾಡಿ, ಎಂ.ಎಲ್-322 ತಳಿಯು ತಡವಾದ ಮುಂಗಾರಿಗೆ ಸೂಕ್ತವಾಗಿದ್ದು ಆಗಸ್ಟ್ ತಿಂಗಳಿನಿಂದ ಸೆ.15 ರವರೆಗೆ ಬಿತ್ತನೆ ಮಾಡಬಹುದು. ಈ ತಳಿಯು ಮಧ್ಯಮ ಅವಧಿ ತಳಿಯಾಗಿದ್ದು 105-110 ದಿನಕ್ಕೆ ಕಟಾವಿಗೆ ಬರುತ್ತದೆ. 15-20 ದಿನದವರೆಗೂ ಮಳೆ ಇಲ್ಲದೆ ಶುಷ್ಕ ಇದ್ದರು ಬರ ಸಹಿಷ್ಣತೆ ಹಾಗೂ ಸ್ವಲ್ಪ ಮಟ್ಟಿಗೆ ಬೆಂಕಿ ರೋಗ ನಿರೋಧಕತೆ ಹೊಂದಿರುತ್ತದೆ. ಇಳುವರಿಯು ಎಕರೆಗೆ 10-12 ಕ್ವಿಂಟಾಲ್ ಖುಷ್ಕಿ ಬೆಳೆಯಾಗಿ ಬೆಳೆಯುವುದರಿಂದ ಹಾಗೂ 15-20 ಕ್ವಿಂಟಾಲ್ ನೀರಾವರಿ ಬೆಳೆಯಾಗಿ ಬೆಳೆಯುವುದರಿಂದ ಪಡೆಯಬಹುದು. ರಾಗಿ ಬಿತ್ತನೆ ಮಾಡುವ 3-4 ವಾರಗಳ ಮುಂಚಿತವಾಗಿ ಎಕರೆಗೆ 3 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ಒಂದು ಎಕರೆ ಪ್ರದೇಶಕ್ಕೆ 10 ಕೆ.ಜಿ ರಾಗಿ ಬೀಜ ಬೇಕಾಗುತ್ತದೆ. ಪ್ರತಿ ಕಿ.ಗ್ರಾಂ. ಬಿತ್ತನೆ ಬೇಜಕ್ಕೆ 2 ಗ್ರಾಂ ಕಾರ್ಬನ್ಡೈಜಿಂ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೆಂಕಿ ರೋಗವನ್ನು ತಡೆಗಟ್ಟಬಹುದು. ರಸಗೊಬ್ಬರಗಳಾದ ಸಾರಜನಕ, ರಂಜಕ 15 ಕಿ.ಗ್ರಾಂ, ಪೋಟ್ಯಾಷ್ 16 ಕಿ.ಗ್ರಾಂ ಹಾಗೂ ಲಘು ಪೋಷಕಾಂಶಗಳಾದ 5 ಕಿ.ಗ್ರಾಂ ಸತುವಿನ ಸಲ್ಫೇಟ್, 4 ಕಿ.ಗ್ರಾಂ ಬೋರಾಕ್ಸ್ ಬಿತ್ತನೆ ಸಮಯದಲ್ಲೇ ಒದಗಿಸುವುದರಿಂದ ಹೆಚ್ಚು ಇಳುವರಿಯನ್ನು ಪಡೆಯಬಹುದು. ನಮ್ಮ ತುಮಕೂರು ಜಿಲ್ಲೆಯಾದ್ಯಂತ ರಾಗಿ ಬೆಳೆಯುವ ರೈತರಿಗೆ ಅತೀ ಹೆಚ್ಚು ಸಮಸ್ಯೆ ಬಂದಿರುವುದು ಅಕ್ಕಿಹುಲ್ಲು ಹಾಗೂ ಗಂಡು ರಾಗಿ ಈ ಕಳೆಯನ್ನು ಹತೋಟಿ ಮಾಡಲು ರಾಗಿ ಬಿತ್ತುವ ಒಂದು ವಾರ ಮುಂಚಿತವಾಗಿ ಪ್ಯಾರಾಕ್ವಾಟ್ ಕಳೆನಾಶಕವನ್ನು 2-5 ಎಂ.ಎಲ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಈ ಕಳೆಯನ್ನು ಹತೋಟಿ ಮಾಡಬಹುದು. ಅಲ್ಲದೆ ರಾಗಿಯಲ್ಲಿ ಅಣ್ಣೆ ಸೊಪ್ಪು ಹತೋಟಿ ಮಾಡಲು ಕೈ ಕಳೆ ತೆಗೆಯುವುದರಿಂದ ಹಾಗೂ ಡಿ-ಸೋಡಿಯಂ ಸಾಲ್ಟ್ ಕಳೆನಾಶಕ ಬಿತ್ತನೆ ಮಾಡಿದ 15-20 ದಿನಕ್ಕೆ ಎಕರೆಗೆ 200 ಲೀಟರ್ ಬ್ಯಾರಾಲ್‌ನಲ್ಲಿ ಅರ್ಧ ಕೆ.ಜಿ ಯಷ್ಟು 2,4-ಡಿ ಕಳೆನಾಶಕ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಅಣ್ಣೆ ಸೊಪ್ಪು ಹತೋಟಿ ಮಾಡಬಹುದು ಎಂದು ತಿಳಿಸಿದರು. ಪಶು ವಿಜ್ಞಾನಿ ಡಾ. ಎಚ್.ಬಿ. ಶಿವಪ್ಪ ನಾಯಕ್ ಮೇವಿನ ಲಭ್ಯತೆ, ಮೇವಿನ ಗುಣಮಟ್ಟ ಬಗ್ಗೆ ತಿಳಿಸಿದರು. ನಂತರ ರೈತರಿಗೆ ರಾಗಿ ಎಂ.ಎಲ್-322 ಬೀಜ, ಕಾರ್ಬೆಂಡೈಜಿಂ, ಸತುವಿನ ಸಲ್ಫೇಟ್ ಹಾಗೂ ಬೋರಾಕ್ಸ್ ಅನ್ನು ಕೆ.ವಿ.ಕೆ ವತಿಯಿಂದ ನೀಡಲಾಯಿತು.