ರಹೀಂ ಹತ್ಯೆ ವಿರುದ್ಧ ದ.ಕ. ಉದ್ವಿಗ್ನ: ಅಲ್ಲಲ್ಲಿ ಕಲ್ಲೆಸೆತ

KannadaprabhaNewsNetwork |  
Published : May 29, 2025, 01:14 AM ISTUpdated : May 29, 2025, 05:40 AM IST
ಬಿ.ಸಿ.ರೋಡ್‌ನ ಪೊಳಲಿ ಕ್ರಾಸ್‌ ಬಳಿ ಮೃತ ಅಬ್ದುಲ್‌ ರಹೀಂ ಪಾರ್ಥೀವ ಶರೀರ ಆಗಮಿಸಿದ ಸಂದರ್ಭ ರಸ್ತೆ ತಡೆ ಪ್ರತಿಭಟನೆ  | Kannada Prabha

ಸಾರಾಂಶ

ಬಂಟ್ವಾಳದ ಪಿಕಪ್‌ ಚಾಲಕ ಅಬ್ದುಲ್‌ ರಹೀಂ (34) ಹತ್ಯೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟು ಬಂದ್‌ ಮಾಡಿ ಹರತಾಳ ನಡೆಸಿದ್ದಾರೆ, ಸುರತ್ಕಲ್‌ನಲ್ಲಿ ಖಾಸಗಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

 ಮಂಗಳೂರು : ಬಂಟ್ವಾಳದ ಪಿಕಪ್‌ ಚಾಲಕ ಅಬ್ದುಲ್‌ ರಹೀಂ (34) ಹತ್ಯೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟು ಬಂದ್‌ ಮಾಡಿ ಹರತಾಳ ನಡೆಸಿದ್ದಾರೆ, ಸುರತ್ಕಲ್‌ನಲ್ಲಿ ಖಾಸಗಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್‌ನ ಮುಂಭಾಗದ ಗ್ಲಾಸು ಹಾನಿಗೀಡಾಗಿದೆ. ಬಿ.ಸಿ.ರೋಡ್‌ನಲ್ಲಿ ಶವಯಾತ್ರೆಗೆ ಮುನ್ನ ಬೈಕ್‌ ಶೋರೂಂ ಬಂದ್‌ ಮಾಡದಕ್ಕೆ ಕಲ್ಲು ತೂರಾಟ ನಡೆಸಿ ಗಾಜು ಹಾನಿಗೊಳಿಸಿದ್ದಾರೆ. ಖಾಸಗಿ ಬಸ್‌ಅನ್ನು ಆಟೋದಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ ಘಟನೆಯೂ ನಡೆದಿದೆ.

ಹತ್ಯೆಗೀಡಾದ ಅಬ್ದುಲ್‌ ರಹೀಂ ಮೃತದೇಹದ ಮೆರವಣಿಗೆ ವೇಳೆ ಫರಂಗಿಪೇಟೆ ಹಾಗೂ ಬಿ.ಸಿ.ರೋಡ್‌ಗಳಲ್ಲಿ ಆಕ್ರೋಶಿತ ಗುಂಪು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತು. ಮೃತನ ಶವ ಇದ್ದ ಆ್ಯಂಬುಲೆನ್ಸ್‌ಅನ್ನು ತಡೆದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿತು. ಈ ವೇಳೆ ಮಾಧ್ಯಮ ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೆಳಗ್ಗೆ ಕುತ್ತಾರಿನಲ್ಲಿ ಪೊಲೀಸರ ವಿರುದ್ಧವೂ ಗುಂಪೊಂದು ಆಕ್ರೋಶ ವ್ಯಕ್ತಪಡಿಸಿದೆ.

ಅಘೋಷಿತ ಬಂದ್‌:

ಹತ್ಯೆಗೊಳಗಾದ ಅಬ್ದುಲ್ ರಹೀಂ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನತೆ ಭಾಗವಹಿಸಿದ್ದರು. ಅಂತಿಮ ಯಾತ್ರೆಯ ಸಾಗುವ ವೇಳೆ ಫರಂಗಿಪೇಟೆ ಹಾಗೂ ಬಿ.ಸಿ.ರೋಡ್‌ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ಕುತ್ತಾರ್‌ ಮದನಿ ನಗರ ಮಸೀದಿಯಲ್ಲಿ ಅಬ್ದುಲ್‌ ರಹೀಂ ಪಾರ್ಥೀವ ಶರೀರಕ್ಕೆ ಮಯ್ಯತ್‌ ಸ್ನಾನ ಮಾಡಿಸಲಾಯಿತು. ನಂತರ ಮಯ್ಯತ್‌ ನಮಾಝ್‌ ಬಳಿಕ ಪೊಲೀಸ್‌ ಬಂದೋಬಸ್ತ್‌ನಲ್ಲಿ ಮೃತ ಶರೀರವನ್ನು ಬಂಟ್ವಾಳಕ್ಕೆ ಕೊಂಡೊಯ್ಯಲಾಯಿತು. ಉಳ್ಳಾಲ ತಾಲೂಕಿನ ಕುತ್ತಾರಿನಿಂದ ಹೊರಟ ಅಂತಿಮ ಯಾತ್ರೆ ಮಂಗಳೂರಿನ ಹೊರವಲಯದ ನಂತೂರು, ಪಡೀಲ್ ಅಡ್ಯಾರ್ ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಸಾಗಿತು.

ಅಂಗಡಿಗಳು ಬಂದ್:

ಅಬ್ದುಲ್‌ ರಹೀಂ ಅವರ ಪಾರ್ಥಿವ ಶರೀರವನ್ನು ಹೊತ್ತ ಆ್ಯಂಬುಲೆನ್ಸ್ ಫರಂಗಿಪೇಟೆಯ ಬಳಿ ಸಾಗುತ್ತಿದ್ದಂತೆಯೇ ಅಲ್ಲಿ

ಸೇರಿದ್ದವರು ಅಂತಿಮ ನಮನ ಸಲ್ಲಿಸಿದರು. ಫರಂಗಿಪೇಟೆಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಿ.ಸಿ.ರೋಡ್‌ನ

ಮಿತ್ತಬೈಲ್ ಜುಮ್ಮಾ ಮಸೀದಿ ಬಳಿ ತಲುಪುವಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಿ.ಸಿ.ರೋಡ್‌ನಲ್ಲೂ ಬಹುತೇಕ ಅಂಗಡಿ ಮಳಿಗೆಗಳು ಮುಚ್ಚಿದ್ದವು. ತೆರೆದಿದ್ದ ಕೆಲವು ಮಳಿಗೆಗಳನ್ನು ಕೆಲವು ಆಕ್ರೋಶಿತ ಯುವಕರು ಬಲವಂತದಿಂದ ಮುಚ್ಚಿಸಿದರು. ಕೆಲಕಾಲ ರಸ್ತೆ ತಡೆ ನಡೆಸಿದರು. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು ಕಠಿಣ ಕ್ರಮಕ್ಕೆ ಸೂಚಿಸುತ್ತಿಲ್ಲ. ಇದರಿಂದಾಗಿಯೇ ಅಮಾಯಕ ಮುಸ್ಲಿಮರ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಆಕ್ರೋಶಿತ ಮಂದಿ ಘೋಷಣೆ ಕೂಗಿದರು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿ ಮುಸ್ಲಿಮರಿಗೆ ಭದ್ರತೆ ಒದಗಿಸುವ ಬಗ್ಗೆ ವಾಗ್ದಾನ ನೀಡಬೇಕು ಎಂದು ಪಟ್ಟುಹಿಡಿದರು.

ಫರಂಗಿಪೇಟೆ ಹಾಗೂ ಬಿ.ಸಿ.ರೋಡ್‌ನಲ್ಲಿ ಅಂತಿಮಯಾತ್ರೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಮತ್ತು ಮಂಗಳೂರು ನಡುವೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಬಂಟ್ವಾಳ ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿ ಅಬ್ದುಲ್‌ ರಹೀಂ ಮನೆಗೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು. ಭಾರಿ ಮಳೆ ಸುರಿಯುತ್ತಿದ್ದರೂ ಸಾವಿರಾರು ಮಂದಿ ಸೇರಿದ್ದು, ಅಲ್ಲಿನ ಮಸೀದಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಅಂತ್ಯಕ್ರಿಯೆ ನೆರವೇರಿತು.

ಸುರತ್ಕಲ್‌ನಲ್ಲಿ ಬಸ್‌ಗಳಿಗೆ ಕಲ್ಲು:

ಸುರತ್ಕಲ್ ಮಂಗಳೂರು- ಸುರತ್ಕಲ್, ಮುಕ್ಕ ಹಳೆಯಂಗಡಿ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಬಸ್‌ಗೆ ಹಾಗೂ ಮಂಗಳೂರು-ಕುಂದಾಪುರ ನಡುವೆ ಸಂಚರಿಸುವ ದುರ್ಗಾಂಬ ಬಸ್‌ಗೆ ಸುರತ್ಕಲ್‌ನಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಬಸ್‌ನ ಗಾಜು ಹಾನಿಗೀಡಾಗಿದೆ. ಈ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಬೇರೆ ಬಸ್‌ನಲ್ಲಿ ತೆರಳಿದರು. ಹೀಗಾಗಿ ಮಂಗಳೂರಿನಲ್ಲಿ ಕೆಲವು ಸಿಟಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿ.ಸಿ.ರೋಡ್‌ ಬಳಿ ಆಟೋದಲ್ಲಿ ಖಾಸಗಿ ಬಸ್‌ಅನ್ನು ಹಿಂಬಾಲಿಸಿದ ಯುವಕರ ತಂಡ ಬಸ್‌ನ್ನು ಅಡ್ಡಗಟ್ಟಿ ಹಿಂದಕ್ಕೆ ಕಳುಹಿಸಿದ ವಿದ್ಯಮಾನ ನಡೆದಿದೆ. ಬಂದ್‌ ಮಾಡದ ಕಾರಣಕ್ಕೆ ಗುಂಪೊಂದು ಬಿ.ಸಿ.ರೋಡ್‌ನಲ್ಲಿ ದ್ವಿಚಕ್ರ ವಾಹನದ ಮಳಿಗೆಗೆ ಕಲ್ಲು ತೂರಾಟ ನಡೆಸಿದೆ.

ಸರ್ಕಾರದ ನಡೆಗೆ ಆಕ್ರೋಶ:

ಬಜಪೆಯ ಸುಹಾಸ್‌ ಶೆಟ್ಟಿ ಹತ್ಯೆ ಘಟನೆ ಬಳಿಕ ನಡೆದ ಸಮಾವೇಶದಲ್ಲಿ ಹಿಂದು ಮುಖಂಡರು ಕೋಮು ದ್ವೇಷದ ಭಾಷಣ ಮಾಡಿದ್ದು, ಅ‍ವರ ವಿರುದ್ಧ ಕೇಸು ಕೂಡ ದಾಖಲಾಗಿದೆ. ಆದರೂ ಅವರನ್ನು ಬಂಧಿಸಲು ಪೊಲೀಸ್‌ ಇಲಾಖೆ ಮುಂದಾಗಿಲ್ಲ. ಇದುವೇ ಅಬ್ದುಲ್‌ ರಹೀಂ ಹತ್ಯೆಗೆ ಪ್ರೇರಣೆಯಾಗಿದೆ ಎಂದು ಶವದ ಮೆರವಣಿಗೆಯಲ್ಲಿದ್ದ ಮಂದಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಮುಖಂಡರು ಕೂಡ ರಾಜ್ಯ ಸರ್ಕಾರದ ಮೃದು ಧೋರಣೆ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ಪತ್ರಕರ್ತರಿಗೆ ಹಲ್ಲೆ ಯತ್ನ:

ಅಬ್ದುಲ್‌ ರಹೀಂ ಅವರ ಪಾರ್ಥೀವ ಶರೀರ ಕೈಕಂಬ ತಲುಪಿದಾಗ ಭಾರೀ ಸಂಖ್ಯೆಯಲ್ಲಿ ಜನರು ಅಂತಿಮ ದರ್ಶನಕ್ಕೆ ಆಗಮಸಿದ್ದರು. ಈ ಸಂದರ್ಭ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪಾರ್ಥೀವ ಶರೀರದ ಮೆರವಣಿಗೆಯ ದೃಶ್ಯ ಸೆರೆ ಹಿಡಿಯಲು ಮುಂದಾದ ರಾಷ್ಟ್ರೀಯ ವಾಹಿನಿಯ ಕ್ಯಾಮರಾಮೆನ್‌ವೊಬ್ಬರನ್ನು ಕಾರಿನಿಂದ ಇಳಿಯಲು ಬಿಡದೆ ಮತ್ತೆ ಕಾರಿಗೆ ತಳ್ಳಿದ ಆಕ್ರೋಶಿತ ಗುಂಪೊಂದು ಬೆದರಿಕೆ ಹಾಕಿದ ಘಟನೆ ನಡೆಯಿತು.

ದೃಶ್ಯ ಚಿತ್ರೀಕರಿಸುತ್ತಿದ್ದ ಛಾಯಾಗ್ರಾಹಕರೊಬ್ಬರಿಗೆ ಧಮ್ಕಿ ಹಾಕಲಾಗಿದ್ದು, ಮೊಬೈಲ್‌ ಕಸಿದುಕೊಂಡು ಫೋಟೋಗಳನ್ನು ಬಲವಂತವಾಗಿ ಡಿಲೀಟ್‌ ಮಾಡಲಾಯಿತು. ಈ ವೇಳೆ ಕೆಲವು ಪತ್ರಕರ್ತರು ನೆರವಿಗೆ ಧಾವಿಸಿ ಆಕ್ರೋಶಿತರನ್ನು ಸಮಾಧಾನಪಡಿಸಿ ಪತ್ರಕರ್ತರಿಗೆ ರಕ್ಷಣೆ ನೀಡಿದರು. ಬಳಿಕ ತಮ್ಮದೇ ವಾಹನದಲ್ಲಿ ದೂರದ ವರೆಗೆ ಕರೆದೊಯ್ದು ಸುರಕ್ಷಿತ ಜಾಗದಲ್ಲಿ ಇಳಿಸಿದರು.

ಸದ್ಯ ದ.ಕ. ಜಿಲ್ಲೆ ಬೂದಿಮುಚ್ಚಿದ ಕೆಂಡದಂತಿದೆ. ಜಿಲ್ಲೆಯಾದ್ಯಂತ ಮೇ 30ರವರೆಗೆ ಸೆಕ್ಷನ್‌ ಜಾರಿಯಲ್ಲಿದ್ದು, ಎಲ್ಲೆಡೆ ಪೊಲೀಸ್‌ ಪಹರೆ ಮುಂದುವರಿದಿದೆ.

ಹತ್ಯೆ ಪ್ರಕರಣದಲ್ಲಿ

ನಾಲ್ವರು ವಶಕ್ಕೆ

ಬಂಟ್ವಾಳದ ಕೊಳ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ, ಪಿಕಪ್ ವಾಹನ ಚಾಲಕ ಅಬ್ದುಲ್ ರಹೀಂ (34) ಅವರ ಹತ್ಯೆ ಮತ್ತು ಖಲಂದರ್ ಶಫಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದೀಪಕ್ ಮತ್ತು ಸುಮಿತ್ ಆಚಾರ್ಯ ಸೇರಿದಂತೆ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈಗಾಗಲೇ ಶಂಕಿತ ನಾಲ್ಕೈದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''