ಜಿಲ್ಲಾ ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠ ಸಂಚಾಲಕ ಉಮೇಶ್ ಬಾಪಟ್ ಆಗ್ರಹ ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಗ್ನಿಪಥ ಯೋಜನೆ ಕುರಿತು ಹಗುರವಾಗಿ ಮಾತನಾಡಿದ್ದು, ಇದು ಸೈನಿಕರಿಗೆ ಮಾಡಿದ ಅವಮಾನವಾಗಿದೆ. ಕೂಡಲೆ ಅವರು ಯುವ ಜನತೆಯ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠದ ಸಂಚಾಲಕ ಉಮೇಶ್ ಬಾಪಟ್ ಆಗ್ರಹಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗ್ನಿಪಥ ಯೋಜನೆಯು ಭಾರತದ ಸೈನ್ಯವನ್ನು ಬಲಪಡಿಸುವ ಹಾಗೂ ದೇಶ ಕಾಪಾಡುವ ದೇಶ ಸೇವೆಯೇ ಪರಮೋಚ್ಛ ಎಂದು ಬಿಂಬಿಸುವ ಯೋಜನೆಯಾಗಿದೆ. ಆದರೆ, ಕಾಂಗ್ರೆಸ್ಸಿಗರು ಅದರಲ್ಲೂ ರಾಹುಲ್ ಗಾಂಧಿಯವರು ಈ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಧಾನಿ ಮೋದಿಯವರು ಭಾರತೀಯ ಸೈನ್ಯಕ್ಕೆ ಬಲ ತುಂಬುತ್ತಿದ್ದಾರೆ. ಸೈನಿಕರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಯುವ ಸೈನಿಕರು ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಅಗ್ನಿಪಥ ಯೋಜನೆ ಜಾರಿಗೆ ತಂದಿದ್ದಾರೆ. ಈಗಾಗಲೇ ಸುಮಾರು 80 ಸಾವಿರ ಯುವಕರು ಈ ಯೋಜನೆಯಡಿ ದೇಶ ಸೇವೆ ಮಾಡುತ್ತಿದ್ದಾರೆ ಎಂದರು.18 ವರ್ಷ ಮೇಲ್ಪಟ್ಟವರು, ಈ ಯೋಜನೆಯಡಿ ಸೈನ್ಯಕ್ಕೆ ಸೇರಬಹುದು. ತರಬೇತಿಗಾಗಿಯೇ 1ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದು 4 ವರ್ಷದ ಅವಧಿಗೆ ಇರುತ್ತದೆ. ವಾಪಾಸ್ಸು ಬಂದ ಮೇಲೆ ಡಿಗ್ರಿ ಪ್ರಮಾಣ ಪತ್ರ ಜೊತೆಗೆ ₹12 ಲಕ್ಷ ನಗದು ನೀಡಲಾಗುತ್ತದೆ. ಇದರ ಜೊತೆಗೆ ಪ್ರತಿ ತಿಂಗಳು 35 ರಿಂದ 45 ಸಾವಿರದವರೆಗೆ ವೇತನ ನೀಡಲಾಗುತ್ತದೆ. ಇದೊಂದು ದೇಶದ ಸೇವೆಗೆ ಜೊತೆಗೆ ಯುವಕರಲ್ಲಿ ಆರ್ಥಿಕ ಬಲ ತುಂಬುವ ಮಹತ್ವದ ಯೋಜನೆಯಾಗಿದೆ ಎಂದು ತಿಳಿಸಿದರು.
ಯುವಕರಿಗೆ ಆಸರೆಯಾಗಿರುವ, ದೇಶ ಪ್ರೇಮ ಬೆಳೆಸುವ ಯೋಜನೆ ಕುರಿತು ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುತ್ತಿದ್ದು, ಸರಿಯಲ್ಲ ಎಂದರು. ಈ ವೇಳೆ ಪ್ರಮುಖರಾದ ಎಸ್.ದತ್ತಾತ್ರಿ, ಋಷಿಕೇಶ್ ಪೈ, ಶ್ರೀನಿವಾಸ್ ರೆಡ್ಡಿ, ಕೆ.ವಿ.ಅಣ್ಣಪ್ಪ ಇದ್ದರು.