ಕನ್ನಡಪ್ರಭ ವಾರ್ತೆ ರಾಯಚೂರು
ಕಟ್ಟಡ ಮತ್ತು ಇತರೆ ಕಾರ್ಮಿಕರ ನೋಂದಣಿ ಮತ್ತು ನವೀಕರಣದ ಬಗ್ಗೆ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಸರಳೀಕರಣ ಮಾಡಲು ಆಗ್ರಹಿಸಿ ರಾಯಚೂರು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಜಿಲ್ಲಾ ಕಾರ್ಮಿಕ ಇಲಾಖೆ ಮುಂದೆ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ, ಕಾರ್ಮಿಕ ಅಧಿಕಾರಿ ಮುಖಾಂತರ ಕಾರ್ಮಿಕ ಸಚಿವ ಸಂತೋಷ್ ಲಾಡ್‌ವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಿತಿ ಮುಖಂಡರು, ಕಟ್ಟಡ ಕಾರ್ಮಿಕರು ಸಾಮಾನ್ಯವಾಗಿ ಬಡತನದಿಂದ ಬಳಲುತ್ತಿದ್ದು ಅವಿದ್ಯಾವಂತರಾಗಿದ್ದಾರೆ. ಇವರು ನೋಂದಣಿಗೆ ಸರ್ಕಾರದ ವಿಧಿಸಿದ ಷರತ್ತು ಪಾಲಿಸಲು ಕಚೇರಿಗಳಿಗೆ ಅಲೆಯಬೇಕಿದೆ. ಕೆಲಸಕ್ಕಾಗಿ ನಿತ್ಯ ಅಲೆದಾಟ ಮಾಡುವ ಈ ಕಾರ್ಮಿಕರು ಪರವಾನಗೆ ಪತ್ರ, ನಕ್ಷೆ, ವೇತನ ಚೀಟಿ, ಹಾಜರಾತಿ ಪುಸ್ತಕ ಕೇಳಿರುವುದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಆರೋಪಿಸಿದರು.
ಕಾರ್ಮಿಕರು ಕೆಲಸ ಮಾಡುವ ಸ್ಥಳ ತಿಳಿಸಿದಲ್ಲಿ ಅಧಿಕಾರಿಗಳೇ ತೆರಳಿ ಮಾಹಿತಿ ಪಡೆಯಬೇಕು. ಕಾರ್ಮಿಕರ ವಿವರದ ಸತ್ಯಾಸತ್ಯತೆ ಅರಿಯುವ ಜವಾಬ್ದಾರಿ ಸಂಬಂಧಿಸಿದ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರಿಗೆ ಇರುತ್ತದೆ. ಈ ರೀತಿಯ ಕಾನೂನುಗಳನ್ನು ಜಾರಿ ಮಾಡುವುದರಿಂದ ಅನೇಕ ಕಾರ್ಮಿಕರು ಗುರುತಿನ ಚೀಟಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ವಿಧಿಸಿದ ನಿಯಮಗಳನ್ನು ಸರಳೀಕರಣಗೊಳಿಸಲು ಸೂಕ್ತ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.ಕಟ್ಟಡ ಪರವಾನಗೆ ಪತ್ರ-ನಕ್ಷೆ ಅನುಮೋದನೆ ಕೂಡಲೇ ಹಿಂಪಡೆಯಬೇಕು. ವೇತನ ಚೀಟಿ ಹಾಗೂ ಹಾಜರಾತಿ ನಿಯಮ, ವಿವಿಧ ಕಾರ್ಮಿಕರಿಗೆ ನೀಡುವ ಕಿಟ್ ಗಳಿಗಾಗಿ ವಹಿಸುವ ಟೆಂಡರ್ ರದ್ದುಪಡಿಸಬೇಕು. ಸಂಚಾರಿ ವಾಹನ ಚಿಕಿತ್ಸೆ ರದ್ದುಗೊಳಿಸಿ, ಪ್ರಸಕ್ತ ವರ್ಷದ ಶೈಕ್ಷಣಿಕ ಧನ ಸಹಾಯದ ಅರ್ಜಿಯನ್ನು ವೆಬ್‌ಸೈಟ್‌ನಲ್ಲಿ ಪ್ರಾರಂಭಿಸಿ, ನವೀಕರಣವನ್ನು ಮೊದಲಿನಂತೆ ಮೂರು ವರ್ಷದ ಅವಧಿಗೆ ವಿಸ್ತರಿಸಿ, ಮದುವೆ ಧನ ಸಹಾಯ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಬೇಕು. ಸ್ಥಗಿತಗೊಂಡಿರುವ ಮುಂದುವರಿಕೆ ಪಿಂಚಣಿ ಸೌಲಭ್ಯವನ್ನು ಕೂಡಲೇ ಪ್ರಾರಂಭಿಸಬೇಕು. 60 ವರ್ಷಗಳ ನಂತರ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಬೇಕು, ನೋಂದಾಯಿತ ಬೋಗಸ್ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಸ್ಲಂ ಬೋರ್ಡ್‌ಗೆ ನೀಡಿದ ಧನ ಸಹಾಯವನ್ನು ತನಿಖೆಗೆ ಒಳಪಡಿಸಿ, ಮಂಡಳಿಗೆ ಅನುದಾನ ಹಿಂಪಡೆಯುವುದು ಸೇರಿ ಇತರೆ ಬೇಡಿಕೆ ಈಡೇರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ತಿಮ್ಮಪ್ಪ ಸ್ವಾಮಿ, ವೀರಣ್ಣ ಹೊಸೂರು, ರಂಗಪ್ಪ ಆಸ್ಕಿಹಾಳ, ವೀರಣ್ಣ ಗೌಡ, ಆನಂದ, ನಾಗರಾಜ, ಎಂ.ಹನುಮಂತ, ಮಾರುತಿ ಸೇರಿದಂತೆ ಅನೇಕರು ಇದ್ದರು.