ಕಾರಂತ ಬಡಾವಣೆ ಅಭಿವೃದ್ಧಿ ವಿಧಾನದ ತಿಳಿಸಿ: ಹೈಕೋರ್ಟ್‌

KannadaprabhaNewsNetwork |  
Published : Jan 30, 2024, 02:00 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಕಾರಂತ ಬಡಾವಣೆ ಅಭಿವೃದ್ಧಿ ವಿಧಾನದ ತಿಳಿಸಿ: ಹೈಕೋರ್ಟ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಿವರಾಮ ಕಾರಂತ ಬಡಾವಣೆಯ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೆ ರೂಪಿಸಿರುವ ವಿಧಾನಗಳ ಬಗ್ಗೆ ಮಾಹಿತಿ ನೀಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹೈಕೋರ್ಟ್‌ ಸೋಮವಾರ ಸೂಚಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಭೂ ಸ್ವಾಧೀನ ಸೇರಿದಂತೆ ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದಂತೆ ಇನ್ನಿತರ ವಿಷಯಗಳ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಶೇಷ ವಿಭಾಗೀಯ ಪೀಠ ಬಿಡಿಎಗೆ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಬಿಡಿಎ ಪರ ಸುದಿರ್ಘ ವಾದ ಮಂಡಿಸಿದ ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಬಡಾವಣೆ ಅಭಿವೃದ್ಧಿಗೆ ಎದುರಾಗಿರುವ ಅಡಚಣೆ ಹಾಗೂ ಅವುಗಳ ಪರಿಹಾರಕ್ಕೆ ಬಿಡಿಎ ಕೈಗೊಂಡಿರುವ ಕ್ರಮಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.ಅದನ್ನು ಪರಿಗಣಿಸಿದ ನ್ಯಾಯಪೀಠ, ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಯಾಗಬೇಕು. ಶ್ರೀಸಾಮಾನ್ಯರಿಗೆ ನಿವೇಶನ ಹಂಚಿಕೆಯಾಗಬೇಕು. ಆ ನಿವೇಶನಗಳಲ್ಲಿ ಸ್ವಂತ ಸೂರು ಕಟ್ಟಿಕೊಳ್ಳಬೇಕೆಂಬ ನಿವೇಶನದಾರರ ಕನಸು ನನಸು ಆಗಬೇಕು ಎಂಬುದೇ ನ್ಯಾಯಾಲಯದ ಉದ್ದೇಶ. ಹಾಗಾಗಿ, ಬಡಾವಣೆಯ ಅಭಿವೃದ್ಧಿಗೆ ರೂಪಿಸಿರುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಬಿಡಿಎಗೆ ನಿರ್ದೇಶಿಸಿತು.

ಅಲ್ಲದೆ, ಬಡಾವಣೆಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ಅವರ ನೇತೃತ್ವದ ತ್ರಿ ಸದಸ್ಯ ಸಮಿತಿಯ ವಶದಲ್ಲಿದ್ದ ಎಲ್ಲ ದಾಖಲೆಗಳನ್ನು ಗಣಕೀಕೃತಗೊಳಿಸಿ, ಅವುಗಳನ್ನು ಹೈಕೋರ್ಟ್‌ ಕಂಪ್ಯೂಟರ್‌ ವಿಭಾಗಕ್ಕೆ ವರ್ಗಾಯಿಸಬೇಕು. ಈ ಕುರಿತಂತೆ ಹೈಕೋರ್ಟ್‌ ನ್ಯಾಯಾಂಗ ವಿಭಾಗದ ರಿಜಿಸ್ಟ್ರಾರ್‌ ಕ್ರಮ ಜರುಗಿಸಬೇಕು ಎಂದು ಪೀಠ ನಿರ್ದೇಶಿಸಿತು.

ಸಮಿತಿಯ ದಾಖಲೆಗಳನ್ನು ಗಣಕೀಕೃತಗೊಳಿಸುವ ಕಾರ್ಯದ ಗುತ್ತಿಗೆ ಪಡೆದಿದ್ದ ಏಜೆನ್ಸಿಗೆ ಬಾಕಿ ಮೊತ್ತ ಪಾವತಿಸಬೇಕು ಎಂದು ಇದೇ ವೇಳೆ ಬಿಡಿಎಗೆ ಸೂಚಿಸಿದ ನ್ಯಾಯಪೀಠ, ಅರ್ಜಿಗಳ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ