ರಾಯಚೂರು: ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿದ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಜಿಲ್ಲೆಯ ಮೂರು ಜನ ಶಾಸಕರಿಗೆ ಸ್ಥಾನ ಲಭಿಸಿದೆ.
ಒಟ್ಟು 34 ಜನ ಶಾಸಕರಿಗೆ ನಿಗಮ ಮಂಡಳಿಗಳ ಜವಾಬ್ದಾರಿ ನೀಡಿ ಅವರುಗಳಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಕಲ್ಪಿಸಿಕೊಡಲಾಗಿದ್ದು, ಮುಂದಿನ ಎರಡು ವರ್ಷಕ್ಕೆ ಅಥವಾ ಮುಂದಿನ ಆದೇಶ ಬರುವರೆಗೂ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ಜಿಲ್ಲೆಯಲ್ಲಿ ನಾಲ್ಕು ಜನ ಕಾಂಗ್ರೆಸ್ ಶಾಸಕರಿದ್ದಾರೆ. ಅವರಲ್ಲಿ ಮೂರು ಜನರಿಗೆ ನಿಗಮ ಮಂಡಳಿಗಳಿಗೆ ಅವಕಾಶ ನೀಡಿದ್ದು, ಮಾನ್ವಿಯ ಜಿ.ಹಂಪಯ್ಯ ನಾಯಕ ಅವರಿಗೆ ಯಾವುದೇ ಸ್ಥಾನ-ಮಾನಕೊಟ್ಟಿಲ್ಲ. ಈನಡುವೆ ನನಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಬೇಡ, ಸರ್ಕಾರ ಕೊಟ್ಟರು ಅದನ್ನು ನಾನು ಸ್ವೀಕರಿಸುವುದಿಲ್ಲ ಎಂದು ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದ ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಅವರು ಇದೀಗ ಸಿಕ್ಕಿರುವ ಸ್ಥಾನವನ್ನು ಸ್ವೀಕರಿಸುವರೇ ಎನ್ನುವ ಸಂಗತಿ ನಿಗೂಢವಾಗಿದೆ.