ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಕೃಷ್ಣಾ ನದಿ ದಡದಲ್ಲಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆ ಕುರಿತು ಬಂದ ದೂರುಗಳ ಆಧಾರದ ಮೇಲೆ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ರಾಜ್ಯ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದರು. ಮಾಹಿತಿಯ ಆಧಾರವನ್ನು ಇಟ್ಟುಕೊಂಡು ಗೌಪ್ಯ ತನಿಖೆ ನಡೆಸಿದ ಕರ್ನಾಟಕ ಲೋಕಾಯುಕ್ತ ತಂಡ ಪರಿಸರ ಕಾಯ್ದೆಗಳನ್ನು ಉಲ್ಲಂಘಿಸಿ ಯಂತ್ರೋಪಕರಣಗಳನ್ನು ಬಳಸಿ ನದಿ ದಡದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ ಸ್ಥಳಗಳಿಗೆ ತೆರಳಿ ಇಂದು ದಾಳಿ ನಡೆಸಿದ್ದಾರೆ.
ಬಾಗಲಕೋಟೆ ಲೋಕಾಯುಕ್ತ ಪೊಲೀಸರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ 28 ಅಧಿಕಾರಿಗಳು ಮತ್ತು 90 ಸಿಬ್ಬಂದಿ ಜಿಲ್ಲೆಯ 36 ಸ್ಥಳಗಳನ್ನು ಒಳಗೊಂಡ 24 ಪ್ರದೇಶಗಳಲ್ಲಿ ಅನಿರೀಕ್ಷಿತ ದಾಳಿ ನಡೆದಿದೆ.ಮರಳು ಗಣಿಗಾರಿಕೆ ಚಟುವಟಿಕೆಯಲ್ಲಿ 65 ಟಿಪ್ಪರ್, 18 ಹಿಟಾಚಿ ಯಂತ್ರಗಳು, 14 ಯಾಂತ್ರಿಕೃತ ದೋಣಿಗಳು, 6 ಟ್ರ್ಯಾಕ್ಟರ್‌ಗಳು, 1 ಜೆಸಿಬಿ ಬಳಸುತ್ತಿರುವುದು ಪತ್ತೆಯಾಗಿದೆ. ಜೊತೆಗೆ ಅನೇಕ ಸ್ಥಳಗಳಲ್ಲಿ ಸಂಗ್ರಹಿಸಲಾದ ಮರಳನ್ನು ಸಹ ಗಮನಿಸಿರುವ ಲೋಕಾಯುಕ್ತ ಅಧಿಕಾರಿಗಳು ದೊಡ್ಡ ಪ್ರಮಾಣದ ಆಕ್ರಮಗಳು ಪ್ರಾಥಮಿಕವಾಗಿ ದೃಢಪಟ್ಟಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಗಣಿಗಾರಿಕೆ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಸೇರಿದಂತೆ ಜಿಲ್ಲೆಯ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಬಾದಾಮಿ, ಮುಧೋಳ, ಜಮಖಂಡಿ, ಹುನಗುಂದ ಹಾಗೂ ಇಳಕಲ್ ತಾಲೂಕುಗಳು ತಹಸೀಲ್ದಾರ್‌ರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನು ಸಹ ಲೋಕಾಯುಕ್ತರು ದಾಖಲಿಸಿದ್ದಾರೆ