63 ಸಿಬ್ಬಂದಿಗೆ ರೈಲ್‌ ಸೇವಾ, ವಿಶಿಷ್ಟ ರೈಲ್‌ ಸೇವಾ ಪುರಸ್ಕಾರ

KannadaprabhaNewsNetwork | Published : Feb 12, 2025 12:33 AM

ಸಾರಾಂಶ

ನೈಋತ್ಯ ರೈಲ್ವೆ ವಲಯದ ವತಿಯಿಂದ ಹುಬ್ಬಳ್ಳಿಯ ರೈಲ್ವೆ ಆಫೀಸರ್ಸ್ ಕ್ಲಬ್‌ನಲ್ಲಿ ವಿಶೇಷ ಸೇವೆಗೈದ ಸಿಬ್ಬಂದಿಗೆ ವಿಶಿಷ್ಟ ರೈಲ್ ಸೇವಾ ಪುರಸ್ಕಾರ-2024 ಹಾಗೂ ರೈಲ್ ಸೇವಾ ಪುರಸ್ಕಾರ- 2024 ಅನ್ನು ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಪ್ರದಾನ ಮಾಡಿದರು.

ಹುಬ್ಬಳ್ಳಿ:

ನೈಋತ್ಯ ರೈಲ್ವೆ ವಲಯದ ವತಿಯಿಂದ ಇಲ್ಲಿನ ರೈಲ್ವೆ ಆಫೀಸರ್ಸ್ ಕ್ಲಬ್‌ನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ 69ನೇ ರೈಲ್ವೆ ಸಪ್ತಾಹ ಸಮಾರಂಭದಲ್ಲಿ ವಿಶೇಷ ಸೇವೆಗೈದ ಸಿಬ್ಬಂದಿಗೆ ವಿಶಿಷ್ಟ ರೈಲ್ ಸೇವಾ ಪುರಸ್ಕಾರ-2024 ಹಾಗೂ ರೈಲ್ ಸೇವಾ ಪುರಸ್ಕಾರ- 2024 ಅನ್ನು ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಪ್ರದಾನ ಮಾಡಿದರು.

42 ಸಿಬ್ಬಂದಿ ವಿಶಿಷ್ಟ ರೈಲ್ ಸೇವಾ ಪುರಸ್ಕಾರ ಹಾಗೂ 21 ಸಿಬ್ಬಂದಿ ರೈಲ್ ಸೇವಾ ಪುರಸ್ಕಾರಕ್ಕೆ ಭಾಜನರಾದರು. ನೈಋತ್ಯ ರೈಲ್ವೆಯ ವಿವಿಧ ವಿಭಾಗಗಳು, ನಿಲ್ದಾಣಗಳು ಮತ್ತು ವರ್ಕ್‌ ಶಾಪ್‌ಗಳಿಗೆ ಅವುಗಳ 2024ನೇ ವರ್ಷದ ಸಾಧನೆಗಳ ಆಧಾರದ ಮೇಲೆ ದಕ್ಷತಾ ಪದಕ ಪ್ರದಾನ ಮಾಡಲಾಯಿತು.

ಮೈಸೂರು ಮತ್ತು ಬೆಂಗಳೂರು ವಿಭಾಗಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಹಂಚಿಕೊಂಡವು. ಉತ್ತಮ ನಿರ್ವಹಣಾ ದೊಡ್ಡ ನಿಲ್ದಾಣ ಪ್ರಶಸ್ತಿಯನ್ನು ಬೆಂಗಳೂರು ವಿಭಾಗದ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌, ಉತ್ತಮ ನಿರ್ವಹಣಾ ಚಿಕ್ಕ ನಿಲ್ದಾಣ ಪ್ರಶಸ್ತಿಯನ್ನು ಹುಬ್ಬಳ್ಳಿ ವಿಭಾಗದ ಸುಳಧಾಳ ರೈಲು ನಿಲ್ದಾಣ ಪಡೆದುಕೊಂಡವು.

ತರಬೇತಿ ಸಿಬ್ಬಂದಿ ಉತ್ತಮ ಸಾಧನೆ ಪ್ರಶಸ್ತಿಯನ್ನು ಮೈಸೂರು ಮತ್ತು ಬೆಂಗಳೂರು ವಿಭಾಗಗಳು ಜಂಟಿಯಾಗಿ ಪಡೆದುಕೊಂಡವು.

ಉತ್ತಮ ನಿರ್ವಹಣಾ ರನ್ನಿಂಗ್ ರೂಮ್ ಪ್ರಶಸ್ತಿಯನ್ನು ಬೆಂಗಳೂರು ವಿಭಾಗದ ಎಸ್‌ಎಂವಿಬಿ ರನ್ನಿಂಗ್ ರೂಮ್ ಪಡೆದುಕೊಂಡರೆ, ಉತ್ತಮ ನಿರ್ವಹಣೆ ಲೋಕೊ ಶೆಡ್ ಪ್ರಶಸ್ತಿಯನ್ನು ಹುಬ್ಬಳ್ಳಿ ವಿಭಾಗದ ಡಿಸೈಲ್ ಲೋಕೋ ಶೆಡ್‌ ಪಡೆದುಕೊಂಡಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅರವಿಂದ ಶ್ರೀವಾಸ್ತವ, ನೈಋತ್ಯ ರೈಲ್ವೆ ವಲಯದ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯನಿರ್ವಹಣೆಯಿಂದಾಗಿ ಹಲವಾರು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಈ ವೇಳೆ ಅಪರ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್, ಎಸ್‌ಡಬ್ಲ್ಯುಆರ್ ಮಹಿಳಾ ಕಲ್ಯಾಣ ಸಂಸ್ಥೆಯ ನಮಿತಾ ಶ್ರೀವಾಸ್ತವ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Share this article