ವಂದೇ ಭಾರತ್‌ ವೇಳಾಪಟ್ಟಿ ಮಂಗಳೂರಿನಿಂದಲೇ ಹೊರಡುವಂತೆ ಮನವಿ

KannadaprabhaNewsNetwork |  
Published : Sep 21, 2026, 02:30 AM IST
ಪ್ರಾಯೋಗಿಕ ಸಂಚಾರ ನಡೆಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು  | Kannada Prabha

ಸಾರಾಂಶ

: ಶೀಘ್ರದಲ್ಲೇ ಆರಂಭವಾಗಲಿರುವ ಮಂಗಳೂರು ಸೆಂಟ್ರಲ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಸ್ತಾವಿತ ವೇಳಾಪಟ್ಟಿಯನ್ನು ಪರಿಷ್ಕರಿಸಿ, ಮಂಗಳೂರಿನಿಂದಲೇ ಮುಂಜಾನೆ ಸೇವೆಯನ್ನು ಪ್ರಾರಂಭಿಸುವಂತೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಹಾಗೂ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮನವಿ ಮಾಡಿದೆ.

ಮಂಗಳೂರು: ಶೀಘ್ರದಲ್ಲೇ ಆರಂಭವಾಗಲಿರುವ ಮಂಗಳೂರು ಸೆಂಟ್ರಲ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಸ್ತಾವಿತ ವೇಳಾಪಟ್ಟಿಯನ್ನು ಪರಿಷ್ಕರಿಸಿ, ಮಂಗಳೂರಿನಿಂದಲೇ ಮುಂಜಾನೆ ಸೇವೆಯನ್ನು ಪ್ರಾರಂಭಿಸುವಂತೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಹಾಗೂ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮನವಿ ಮಾಡಿದೆ.ಪ್ರಸ್ತುತ ಪ್ರಸ್ತಾಪಿಸಲಾಗಿರುವ ವೇಳಾಪಟ್ಟಿಯ ಪ್ರಕಾರ, ರೈಲು ಯಶವಂತಪುರದಿಂದ ಬೆಳಗ್ಗೆ 7.00 ಗಂಟೆಗೆ ಹೊರಟು ಮಧ್ಯಾಹ್ನ 2.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದ್ದು, ಮರುಪ್ರಯಾಣದಲ್ಲಿ ಮಂಗಳೂರಿನಿಂದ ಸಂಜೆ 3.00 ಗಂಟೆಗೆ ಹೊರಟು ರಾತ್ರಿ 10.30ಕ್ಕೆ ಯಶವಂತಪುರ ತಲುಪುವ ನಿರೀಕ್ಷೆಯಿದೆ.

ಆದರೆ ಈ ವೇಳಾಪಟ್ಟಿಯಿಂದಾಗಿ ಕಚೇರಿ, ವಾಣಿಜ್ಯ ಹಾಗೂ ಇತರೆ ತುರ್ತು ಕೆಲಸಗಳಿಗಾಗಿ ಮಂಗಳೂರು ಮತ್ತು ಕರಾವಳಿ ಕರ್ನಾಟಕದಿಂದ ಬೆಂಗಳೂರಿಗೆ ಹಗಲಿನ ವೇಳೆ ಪ್ರಯಾಣಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವುದಿಲ್ಲ ಎಂದು ಸಮಿತಿ ತಿಳಿಸಿದೆ.

ಆದ್ದರಿಂದ ವಂದೇ ಭಾರತ್ ರೈಲು ಸೇವೆಯನ್ನು ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ ಸುಮಾರು 5.45ಕ್ಕೆ ಹೊರಟು, ಮಧ್ಯಾಹ್ನ ಸುಮಾರು 1.00 ಗಂಟೆಗೆ ಯಶವಂತಪುರ ತಲುಪುವಂತೆ ರೂಪಿಸಬೇಕು. ಮರುಪ್ರಯಾಣದಲ್ಲಿ ಯಶವಂತಪುರದಿಂದ ಸಂಜೆ ಸುಮಾರು 4.00 ಗಂಟೆಗೆ ಹೊರಟು ರಾತ್ರಿ 11.00ರ ಸುಮಾರಿಗೆ ಮಂಗಳೂರು ಸೆಂಟ್ರಲ್ ತಲುಪುವಂತೆ ವೇಳಾಪಟ್ಟಿ ನಿಗದಿಪಡಿಸಬೇಕು ಎಂದು ಸಮಿತಿ ವಿನಂತಿಸಿದೆ.

ಮಂಗಳೂರಿನಿಂದ ಮುಂಜಾನೆಯೇ ರೈಲು ಸಂಚರಿಸಿದರೆ ಪ್ರಯಾಣಿಕರು ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪಿ, ತಮ್ಮ ಕಚೇರಿ ಹಾಗೂ ವಾಣಿಜ್ಯ ಕೆಲಸಗಳನ್ನು ಮುಗಿಸಿಕೊಂಡು ಅದೇ ದಿನ ರಾತ್ರಿ ರೈಲುಗಳಲ್ಲಿ ಮಂಗಳೂರಿಗೆ ಹಿಂತಿರುಗಲು ಸಾಧ್ಯವಾಗುತ್ತದೆ. ಇದರಿಂದ ಬೆಂಗಳೂರಿಗೆ ಹಗಲಿನ ಸಂಪರ್ಕ ಬಯಸುವ ಪ್ರಯಾಣಿಕರಿಗೆ ಈ ರೈಲು ಹೆಚ್ಚು ಉಪಯುಕ್ತವಾಗಲಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ತಿರುವನಂತಪುರಂ-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳೂರಿನಿಂದ ಮುಂಜಾನೆ ಹೊರಟು, ರಾತ್ರಿ ಮರಳಿ ಆಗಮಿಸುವ ಮಾದರಿಯಲ್ಲೇ ಯಶಸ್ವಿಯಾಗಿ ಸೇವೆ ನೀಡುತ್ತಿದೆ. ಈ ಭಾಗದ ಜನರ ಪ್ರಯಾಣದ ಅಗತ್ಯತೆಗಳನ್ನು ಪೂರೈಸಲು ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗೂ ಇದೇ ಮಾದರಿಯ ಕಾರ್ಯಾಚರಣೆ ಜಾರಿಗೊಳಿಸಬೇಕು ಎಂದು ಸಮಿತಿ ಗಮನಸೆಳೆದಿದೆ.

ಮಂಗಳೂರು ರೈಲ್ವೆ ಜಾಲ ಅಕ್ಟೋಬರ್ 1 ರಿಂದ ನೈರುತ್ಯ ರೈಲ್ವೆ ವ್ಯಾಪ್ತಿಗೆ ಒಳಪಡಲಿದೆ. ನಂತರ ಈ ರೈಲಿನ ಸಂಪೂರ್ಣ ಕಾರ್ಯಾಚರಣೆ ಮತ್ತು ನಿರ್ವಹಣೆ ಒಂದೇ ರೈಲ್ವೆ ವಲಯ (ಮೈಸೂರು ವಿಭಾಗದ) ಅಡಿಯಲ್ಲಿ ಬರಲಿದೆ. ಆದ್ದರಿಂದ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಿ ಮಂಗಳೂರು ಸೆಂಟ್ರಲ್‌ನಿಂದಲೇ ಬೆಳಗ್ಗೆ ಆರಂಭಿಸುವಂತೆ ಆಗ್ರಹಿಸಲಾಗಿದೆ.

ಮಂಗಳೂರು ಹಾಗೂ ಸಮಗ್ರ ಕರಾವಳಿ ಭಾಗದ ಪ್ರಯಾಣಿಕರ ಹಿತದೃಷ್ಟಿಯಿಂದ ಅಂತಿಮ ವೇಳಾಪಟ್ಟಿ ಪ್ರಕಟಿಸುವ ಮುನ್ನ ಈ ಸಮಯ ಪರಿಷ್ಕರಣೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ರೈಲ್ವೆ ಸಚಿವಾಲಯ ಹಾಗೂ ನೈರುತ್ಯ ರೈಲ್ವೆಗೆ ಮನವಿ ಮಾಡಿದೆ.

ರೈಲ್ವೆ ಬಳಕೆದಾರರ ವೇದಿಕೆ ಕೋರಿದ ವೇಳಾಪಟ್ಟಿ:*ಮಂಗಳೂರು ಸೆಂಟ್ರಲ್ → ಯಶವಂತಪುರ

* ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ಸಮಯ: ಬೆಳಗ್ಗೆ 5.45

* ಯಶವಂತಪುರ ಜುಂಕ್ಷನ್ ತಲುಪುವ ಸಮಯ: ಮಧ್ಯಾಹ್ನ 1.00*ಯಶವಂತಪುರ → ಮಂಗಳೂರು ಸೆಂಟ್ರಲ್*

* ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ಹೊರಡುವ ಸಮಯ: ಸಂಜೆ 4.00

*ಮಂಗಳೂರು ಸೆಂಟ್ರಲ್ ತಲುಪುವ ಸಮಯ: ರಾತ್ರಿ 11.30

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಫ್ ಕಲಾ ಒಕ್ಕೂಟ ಕೊಡಗಿನಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ
ವಿದ್ಯಾರ್ಥಿಗಳಿಗೆ ಗಾಡ್ರೆಜ್, ಟ್ರ್ಯಾಕ್ ಶೂಟ್ ವಿತರಣೆ