ಕಿಮ್ಸ್ ಆಸ್ಪತ್ರೆಗೆ ರೈಲ್ವೆ ಸೇತುವೆ ನಿರ್ಮಾಣಕ್ಕೆ ವರದಿ ಕೇಳಿದ ರೈಲ್ವೆ ಇಲಾಖೆ

KannadaprabhaNewsNetwork |  
Published : Oct 23, 2026, 01:45 AM IST
ಕಿಮ್ಸ್ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ರೈಲ್ವೆ ಸೇತುವೆ ನಿರ್ಮಾಣದ ಕುರಿತು ಎಸ್ಪಿ ಸಾಹಿಲ್ ಬಾಗ್ಲಾ ಅವರು ಸ್ಥಳ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಗಂಗಾವತಿ ರಸ್ತೆಯ ಕಿಡದಾಳ ಮಾರ್ಗದಲ್ಲಿರುವ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಸ್ಪತ್ರೆಗೆ ತೆರಳಲು ರೈಲ್ವೆ ಹಳಿ ದಾಟಬೇಕಾದ ಅನಿವಾರ್ಯತೆ ಎದುರಾಗಿದ್ದು, ರೋಗಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ.

ಕೊಪ್ಪಳ: ಗಂಗಾವತಿ ರಸ್ತೆಯ ಕಿಡದಾಳ ಮಾರ್ಗದಲ್ಲಿರುವ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಸ್ಪತ್ರೆಗೆ ತೆರಳಲು ರೈಲ್ವೆ ಹಳಿ ದಾಟಬೇಕಾದ ಅನಿವಾರ್ಯತೆ ಎದುರಾಗಿದ್ದು, ರೋಗಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆಯಿಂದ ವಾಹನ ಸಂಚಾರದ ದಟ್ಟಣೆ ಹಾಗೂ ಪರ್ಯಾಯ ರಸ್ತೆ ವ್ಯವಸ್ಥೆ ಕುರಿತು ವರದಿ ಕೇಳಿದೆ.

ಕಿಮ್ಸ್ ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಮತ್ತು ಅವರ ಸಂಬಂಧಿಕರು ಆಗಮಿಸುತ್ತಾರೆ. ಆಸ್ಪತ್ರೆ ತಲುಪಲು ರೈಲ್ವೆ ಹಳಿ ದಾಟಬೇಕಾಗಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ರೈಲ್ವೆ ಗೇಟ್ ಬಂದ್ ಆಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸೇತುವೆ ನಿರ್ಮಾಣದ ಸಾಧ್ಯತೆ ಪರಿಶೀಲಿಸುತ್ತಿದೆ.

ಸೇತುವೆ ನಿರ್ಮಾಣ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹೀಗಾಗಿ, ಕಾಮಗಾರಿ ಅವಧಿಯಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆ ಕಲ್ಪಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪೊಲೀಸ್ ಇಲಾಖೆಯಿಂದ ವರದಿ ಕೇಳಿದೆ.

ಸ್ಥಳ ಪರಿಶೀಲಿಸಿದ ಎಸ್ಪಿ: ರೈಲ್ವೆ ಇಲಾಖೆಯ ಮನವಿಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹಾಗೂ ಕೊಪ್ಪಳ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಡಿ. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಾಹನ ಸಂಚಾರದ ಪ್ರಮಾಣ, ರೈಲ್ವೆ ಹಳಿ ದಾಟುವ ಮಾರ್ಗದ ಸ್ಥಿತಿ ಹಾಗೂ ಸೇತುವೆ ನಿರ್ಮಾಣದ ವೇಳೆ ಪರ್ಯಾಯ ರಸ್ತೆ ಕಲ್ಪಿಸುವ ಸಾಧ್ಯತೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.

ರೈಲ್ವೆ ಹಳಿಯ ಪಕ್ಕದಲ್ಲಿ ಸಮಾನಾಂತರವಾಗಿ ರಸ್ತೆ ನಿರ್ಮಿಸಿ, ಅದನ್ನು ಪೂರ್ಣಗೊಳಿಸಿದ ಬಳಿಕ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವುದು ಸೂಕ್ತ ಎಂಬ ಅಭಿಪ್ರಾಯ ಸ್ಥಳ ಪರಿಶೀಲನೆ ವೇಳೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸ್ ಇಲಾಖೆ ವರದಿ ಸಲ್ಲಿಸಲಿದೆ.

ನಿತ್ಯ 32 ರೈಲುಗಳ ಸಂಚಾರ: ಕಿಮ್ಸ್ ಆಸ್ಪತ್ರೆಯನ್ನು ಹಿಂದಿನ ಕಟ್ಟಡದಿಂದ ಕಿಡದಾಳ ರಸ್ತೆಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಿದ ಬಳಿಕ ರೈಲ್ವೆ ಹಳಿ ದಾಟಿ ಆಸ್ಪತ್ರೆಗೆ ತೆರಳುವುದು ಸಾರ್ವಜನಿಕರಿಗೆ ಪ್ರಮುಖ ಸಮಸ್ಯೆಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಸುಮಾರು 32 ರೈಲುಗಳು ಸಂಚರಿಸುವುದರಿಂದ ಪದೇ ಪದೇ ರೈಲ್ವೆ ಗೇಟ್ ಬಂದ್ ಆಗುತ್ತದೆ. ಇದರಿಂದ ವಾಹನ ಸವಾರರು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳಿಗೂ ತೊಂದರೆಯಾಗುತ್ತಿದೆ.

ಆದ್ದರಿಂದ ಸಾರ್ವಜನಿಕರ ಅನುಕೂಲ ಹಾಗೂ ರೋಗಿಗಳ ತುರ್ತು ಚಿಕಿತ್ಸೆಗೆ ಅಡ್ಡಿಯಾಗದಂತೆ ರೈಲ್ವೆ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ: ರೈಲ್ವೆ ಇಲಾಖೆ ವರದಿ ಕೇಳಿದ ಹಿನ್ನೆಲೆಯಲ್ಲಿ ಎಸ್ಪಿ ಸಾಹಿಲ್ ಬಾಗ್ಲಾ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಸೇತುವೆ ನಿರ್ಮಾಣದ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಕೊಪ್ಪಳ ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಡಿ. ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ
ಮಾಂಜಾದಾರ ನಿಷೇಧ ಯಾರ ಜವಾಬ್ದಾರಿ!