ಹಿರಿಯೂರು - ಚಳ್ಳಕೆರೆ ನಡುವೆ ರೈಲು ಮಾರ್ಗ

KannadaprabhaNewsNetwork | Published : May 19, 2025 12:12 AMUpdated   : May 19 2025, 12:50 PM IST
ಚಿತ್ರದುರ್ಗ ಎರಡನೇ ಪುಟದ್ ಟಿಂಟ್ ಬಾಟಂ    | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರೈಲ್ವೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಳ್ಳಕೆರೆ, ಹಿರಿಯೂರು ನಡುವೆ ರೇಲ್ವೆ ಮಾರ್ಗ ಕಲ್ಪಿಸುವಂತೆ ಸಚಿವ ಡಿ.ಸುಧಾಕರ್ ಮನವಿ ಮಾಡಿದರು.

 ಚಿತ್ರದುರ್ಗ : ಚಳ್ಳಕೆರೆ ಮತ್ತು ಹಿರಿಯೂರು ನಡುವೆ ಹೊಸ ರೈಲು ಮಾರ್ಗ ಕಲ್ಪಿಸುವಂತೆ ಸಚಿವ ಡಿ.ಸುಧಾಕರ್ ಕೇಂದ್ರ ರೇಲ್ವೆ ಸಚಿವ ಬಿ.ಸೋಮಣ್ಣ ಅವರಲ್ಲಿ ಮನವಿ ಮಾಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರೇಲ್ವೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ಮನವಿ ಸಲ್ಲಿಸಿ ಮಾತನಾಡಿದ ಅವರು ದಾವಣಗೆರೆ - ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆಯ ಕಾಮಗಾರಿ ಪ್ರಾರಂಭವಾಗಿರುವುದು ಜಿಲ್ಲೆಯ ಜನತೆಗೆ ಸಂತೋಷದ ವಿಷಯವಾಗಿರುತ್ತದೆ. ಹಿರಿಯೂರು ತಾಲೂಕಿನಿಂದ ಚಳ್ಳಕೆರೆ ತಾಲೂಕಿಗೆ ಇದುವರೆವಿಗೂ ಯಾವುದೇ ರೈಲ್ವೆ ಸಂಪರ್ಕ ಕಲ್ಪಿಸಿರುವುದಿಲ್ಲ. ಇದರಿಂದ ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕಿನ ಮಧ್ಯ ಭಾಗದ ಸಾರ್ವಜನಿಕರ, ರೈತರ ಉತ್ಪನ್ನಗಳಿಗೆ ಹಾಗೂ ಇತರ ಕೃಷಿಯೇತರ ಉತ್ಪನ್ನಗಳಿಗೆ ಸಾಗಣೆ ಮಾಡಲು ತೊಂದರೆಯಾಗುತ್ತಿದ್ದು ಅಲ್ಲದೇ ಸಾರ್ವಜನಿರು ರೈಲ್ವೆ ಸೇವೆಯಿಂದ ವಂಚಿತರಾಗಿದ್ದಾದರೆಂದರು.

ಬೆಂಗಳೂರಿಗೆ ಮತ್ತು ಉತ್ತರ ಭಾರತದ ನಗರಗಳಿಗೆ ಸಂಪರ್ಕ ಕೈಗೊಳ್ಳಬೇಕಾದಲ್ಲಿ ಚಳ್ಳಕೆರೆಯಿಂದ ಬಸ್ ಮೂಲಕ ಬೆಂಗಳೂರಿಗೆ ಹೋಗಿ ಅಲ್ಲಿಂದ ರೈಲು ಮೂಲಕ ತೆರಳುತ್ತಿದ್ದು ಇದರಿಂದ ಅಧಿಕ ಆರ್ಥಿಕ ವೆಚ್ಚವಾಗುತ್ತಿದೆ. ಹೀಗಾಗಿ ಚಳ್ಳಕೆರೆ ಹಾಗೂ ಹಿರಿಯೂರು ಮಧ್ಯ ಭಾಗದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮತ್ತು ಮಕ್ಕಳ ಉನ್ನತ ವಿಧ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಿರಿಯೂರು ತಾಲೂಕಿನಿಂದ ಚಳ್ಳಕೆರೆಗೆ ಹೊಸದಾಗಿ ರೈಲ್ವೇ ರೈಲ್ವೇ ಮಾರ್ಗ ಯೋಜನೆ ರೂಪಿಸುವುದು ಅತ್ಯವ್ಯಶಕವಾಗಿದೆ ಎಂದರು.

ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಹಿರಿಯೂರು-ಚಳ್ಳಕೆರೆ ನಡುವೆ ರೈಲ್ವೆ ಮಾರ್ಗ ಕೈಗೊಂಡಲ್ಲಿ ಬಳ್ಳಾರಿ ಸೇರಿದಂತೆ ಹೈದರಾ ಬಾದ್ ಕರ್ನಾಟಕದ ಜನತೆಗೆ ಬೆಂಗಳೂರು ಸಮೀಪವಾಗುತ್ತದೆ. ಭವಿಷ್ಯದಲ್ಲಿ ಚಳ್ಳಕೆರೆ ಜಂಕ್ಷನ್ ಆಗಲಿದೆ ಎಂದರು. ಮನವಿ ಸ್ವೀಕರಿಸಿದ ಸಚಿವ ಸೋಮಣ್ಣ , ಈ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ, ರೈಲ್ವೆ ಕಾರ್ಗೋ ಕಾರಿಡಾರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಸಂಸದ ಗೋವಿಂದ ಎಂ. ಕಾರಜೋಳ, ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಇದ್ದರು.

PREV
Read more Articles on