ಹಲವು ಪ್ರಯತ್ನಗಳ ಫಲವಾಗಿ ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಾರವಾರದವರೆಗೆ ಸಂಚರಿಸಲಿದ್ದು, ನ. 15ರಿಂದ ನಿಯಮಿತ ಸೇವೆ ಆರಂಭಿಸಲಿದೆ. ರೈಲಿನ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಲು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಸಿದ್ಧತೆ ಮಾಡಿಕೊಂಡಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಹಲವು ಪ್ರಯತ್ನಗಳ ಫಲವಾಗಿ ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಾರವಾರದವರೆಗೆ ಸಂಚರಿಸಲಿದ್ದು, ನ. 15ರಿಂದ ನಿಯಮಿತ ಸೇವೆ ಆರಂಭಿಸಲಿದೆ. ರೈಲಿನ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಲು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಸಿದ್ಧತೆ ಮಾಡಿಕೊಂಡಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡಿಸ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲನ್ನು ಕಾರವಾರದವರೆಗೆ ವಿಸ್ತರಿಸಬೇಕೆಂದು ರೈಲ್ವೆ ಸೇವಾ ಸಮಿತಿ ಪ್ರಯತ್ನ ಆರಂಭಿಸಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈಲ್ವೆ ಸಚಿವರನ್ನು ಹಲವು ಬಾರಿ ಭೇಟಿಯಾಗಿ ಜಿಲ್ಲೆಯ ಬೇಡಿಕೆಯನ್ನು ಮಂಡಿಸಿದ್ದರು. ಈ ಪ್ರಯತ್ನಗಳ ಫಲವಾಗಿ ರೈಲು ಕಾರವಾರದವರೆಗೆ ಸಂಚರಿಸುವಂತಾಗಿದೆ ಎಂದರು.
ನ.13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಉದ್ಘಾಟನಾ ವಿಶೇಷ ರೈಲು ನ.14ರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಕಾರವಾರ ತಲುಪುವ ನಿರೀಕ್ಷೆಯಿದೆ. ನ.15 ರಿಂದ ನಿಯಮಿತ ಸಂಚಾರ ಆರಂಭವಾಗಲಿದ್ದು, ಅಂದು ಬೆಳಗ್ಗೆ 9:30ಕ್ಕೆ ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಸಮಿತಿಯಿಂದ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಗಾಂವಕರ್, ಜಿಲ್ಲೆಯ ಪ್ರವಾಸೋದ್ಯಮ ಹಾಗೂ ರೈಲ್ವೆ ಸಂಪರ್ಕದ ದೃಷ್ಟಿಯಿಂದ ಕಾರವಾರ, ಗೋಕರ್ಣ ಮತ್ತು ಮುರುಡೇಶ್ವರದಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ದೊರೆತಿರುವುದು ಮಹತ್ವದ ಬೆಳವಣಿಗೆಯಾಗಿದೆ. ಜಿಲ್ಲೆಯ ರೈಲ್ವೆ ಸಂಪರ್ಕದ ಅಭಿವೃದ್ಧಿಗೆ ಇನ್ನಷ್ಟು ಆದ್ಯತೆ ನೀಡಬೇಕಿದೆ ಎಂದರು.
ಯಶವಂತಪುರ–ಮಡಗಾಂವ್ ವಂದೇ ಭಾರತ್ ರೈಲು ವಾರದಲ್ಲಿ 6 ದಿನ ಸಂಚರಿಸಲಿದ್ದು, 16 ಬೋಗಿಗಳಲ್ಲಿ ಒಟ್ಟು 1,055 ಪ್ರಯಾಣಿಕರಿಗೆ ಅವಕಾಶವಿದೆ. ಬೆಂಗಳೂರಿನಿಂದ ಬರುವ ರೈಲು ಸಂಜೆ 7:45ಕ್ಕೆ ಕಾರವಾರ ತಲುಪಲಿದ್ದು, ಹಿಂದಿರುಗುವ ರೈಲು ಬೆಳಗ್ಗೆ 9 ಗಂಟೆಗೆ ಕಾರವಾರದಿಂದ ಹೊರಡಲಿದೆ. ಬೆಂಗಳೂರು–ಮಡಗಾಂವ್ ಪ್ರಯಾಣಕ್ಕೆ ಸಾಮಾನ್ಯ ಚೇರ್ಕಾರ್ಗೆ 2,100 ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ಗೆ 3,500 ದರ ನಿಗದಿಪಡಿಸಲಾಗಿದೆ. ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ರೈಲು ಸೇವೆ ಒದಗಿಸಬೇಕು ಎಂದು ರಾಜೀವ ಗಾಂವಕರ್ ಒತ್ತಾಯಿಸಿದರು.
ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಹಕಾರ ನೀಡಿದ ರೈಲ್ವೆ ಸಚಿವರು ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಮಿತಿಯ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.
ಸಮಿತಿಯ ಉಪಾಧ್ಯಕ್ಷ ವೆಂಟು ಮಾಸ್ತರ ಶೀಳ್ಯಾ, ವಸಂತ ನಾಯಕ ಬಾವಿಕೇರಿ ಉಪಸ್ಥಿತರಿದ್ದರು.
ಹೆಚ್ಚುವರಿ ದರ ಇಳಿಕೆ, ಪ್ರಯಾಣದ ಅವಧಿ ಕಡಿತಕ್ಕೆ ಹೋರಾಟ
ಕೊಂಕಣ ರೈಲ್ವೆಯಲ್ಲಿ ದೇಶದ ಇತರ ರೈಲ್ವೆ ವಿಭಾಗಗಳಿಗೆ ಹೋಲಿಸಿದರೆ ಶೇ. 40ರಷ್ಟು ಹೆಚ್ಚುವರಿ ಟಿಕೆಟ್ ದರ ವಿಧಿಸಲಾಗುತ್ತಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಗಾಂವಕರ್ ಆಕ್ಷೇಪಿಸಿದರು. ಆರಂಭದಲ್ಲಿ 10 ವರ್ಷಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದ ಹೆಚ್ಚುವರಿ ದರ ವಸೂಲಿಯನ್ನು 30 ವರ್ಷಗಳಾದರೂ ಮುಂದುವರಿಸಿರುವುದು ಸರಿಯಲ್ಲ. ಈ ವಿಚಾರವಾಗಿ ಕಾನೂನು ಹೋರಾಟ ನಡೆಸಲು ಸಮಿತಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.