ರೈಲ್ವೆ ಸ್ಟೇಷನ್ ಕಟ್ಟಡ ಕಾಮಗಾರಿ ವಿಳಂಬ

KannadaprabhaNewsNetwork |  
Published : Jun 19, 2025, 11:49 PM ISTUpdated : Jun 19, 2025, 11:50 PM IST
ಫೋಟೋ 19ಎಚ್‌ಎಸ್‌ಡಿ3 : ರೈಲ್ವೆ ನಿಲ್ದಾಣದ ಬಳಿ ಅಮೃತ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡ ಕಾಮಗಾರಿಯನ್ನು ಸಂಸದ ಗೋವಿಂದ ಕಾರಜೋಳ ವೀಕ್ಷಿಸಿದರು.  | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಆರಂಭಗೊಂಡಿರುವ ರೈಲ್ವೆ ಸ್ಟೇಷನ್ ನ ನೂತನ ಕಟ್ಟಡ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳ ವಿರುದ್ಧ ಸಂಸದ ಗೋವಿಂದಕಾರಜೋಳ ಕಿಡಿಕಾರಿ ಬರುವ ಡಿ.31ಕ್ಕೆ ಉದ್ಘಾಟನೆಯಿಟ್ಟುಕೊಳ್ಳಿ ಎಂದು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಚಿತ್ರದುರ್ಗ: ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಆರಂಭಗೊಂಡಿರುವ ರೈಲ್ವೆ ಸ್ಟೇಷನ್ ನ ನೂತನ ಕಟ್ಟಡ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳ ವಿರುದ್ಧ ಸಂಸದ ಗೋವಿಂದಕಾರಜೋಳ ಕಿಡಿಕಾರಿ ಬರುವ ಡಿ.31ಕ್ಕೆ ಉದ್ಘಾಟನೆಯಿಟ್ಟುಕೊಳ್ಳಿ ಎಂದು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ರೈಲ್ವೆ ಸ್ಟೇಷನ್ ಬಳಿ ನೂತನ ಕಟ್ಟಡ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿ, ನೂತನ ಕಟ್ಟಡದಲ್ಲಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ಜಾಗವಿರಬೇಕು. 2023ರ ಡಿಸೆಂಬರ್‌ನಲ್ಲಿ ಆರಂಭಗೊಂಡ ಕಾಮಗಾರಿ ಇನ್ನು ಏಕೆ ಮುಗಿದಿಲ್ಲ. ತಡವಾಗುವುದು ಬೇಡ. ಚುರುಕಿನಿಂದ ಕೆಲಸವಾಗಬೇಕು ಎಂದು ತಾಕೀತು ಮಾಡಿದರು.

12 ಕೋಟಿ ರು. ವೆಚ್ಚದ ಕಾಮಗಾರಿಗೆ ಚಿತ್ರದುರ್ಗದಲ್ಲಿ ಯಾರು ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ಸಿಗಲಿಲ್ಲವೇ ಎಂದು ರೈಲ್ವೆ ಅಧಿಕಾರಿಯನ್ನು ಪ್ರಶ್ನಿಸಿದ ಸಂಸದರು, ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲು ಮಾರ್ಗ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೇ ಇಲ್ಲವೋ ಎನ್ನುವುದನ್ನು ಉಪವಿಭಾಗಾಧಿಕಾರಿಗೆ ಕೇಳಿ ಎಂದು ಸೂಚಿಸಿದರು.

ಚಿಕ್ಕಜಾಜೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಬಳ್ಳಾರಿವರೆಗೆ ರೈಲ್ವೆಗೆ 3400 ಕೋಟಿ ರು.ಅನುದಾನ ಸಿಕ್ಕಿದೆ. ಇದರಿಂದ ಆರ್ಥಿಕ ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲವಾಗುತ್ತದೆ. ಪಾವಗಡ-ಮಡಕಶಿರ ರೈಲು ಮಾರ್ಗಕ್ಕೆ 265 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಸೌಲಭ್ಯಗಳನ್ನು ಒದಗಿಸಬೇಕಷ್ಟೆ ಎಂದರು.

ಚಿಕ್ಕಜಾಜೂರು, ಚಿತ್ರದುರ್ಗ, ಹಳಿಯೂರು ರೈಲ್ವೆ ಗೇಟ್‍ಗಳಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಚಿತ್ರದುರ್ಗದಲ್ಲಿ ದಿನಕ್ಕೆ ಮೂವತ್ತು ಸಾರಿ ರೈಲ್ವೆ ಗೇಟ್ ಹಾಕುವುದರಿಂದ ಬಹಳ ತೊಂದರೆಯಾಗುತ್ತಿದೆ. ಇಲ್ಲಿ ಅಂಡರ್ ಬ್ರಿಡ್ಜ್ ನಿರ್ಮಾಣ ಕುರಿತು ಕೇಂದ್ರದ ಜೊತೆ ಮಾತನಾಡುತ್ತೇನೆ. ಚಿತ್ರದುರ್ಗ, ದಾವಣಗೆರೆಗೆ 550 ಕೋಟಿ ರು.ಗಳನ್ನು ನೀಡಲಾಗಿದೆ. ಐದು ಸಾವಿರ ಕೋಟಿ ರು.ಗಳಿಗಿಂತಲೂ ಹೆಚ್ಚು ಹಣ ಬಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಖಜಾಂಚಿ ಮಾಧುರಿ ಗಿರೀಶ್, ಮಾಜಿ ಅಧ್ಯಕ್ಷ ಎ.ಮುರಳಿ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ಇದ್ದರು.

ಹಗರಣಗಳನ್ನು ಎಸಗುತ್ತಿರುವುದೇ

ಕಾಂಗ್ರೆಸ್ ಪಕ್ಷದ ಗ್ಯಾರಂಟಿ: ಸಂಸದ

ಚಿತ್ರದುರ್ಗ: ಆರ್‌ಸಿಬಿ ದುರಂತಕ್ಕೆ ಹನ್ನೊಂದು ಮಂದಿ ಬಲಿಯಾಗಿದ್ದಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ಇಷ್ಟೊತ್ತಿಗಾಗಲೇ ರಾಜಿನಾಮೆ ನೀಡಬೇಕಿತ್ತು. ಭಂಡತನ ಪ್ರದರ್ಶಿಸುತ್ತಿರುವುದನ್ನು ಜನ ಒಪ್ಪಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಗುರುವಾರ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನೆಸಗುತ್ತಿದೆ. ಲಂಚಕ್ಕೆ ಅಧಿಕಾರಿಗಳು, ನೌಕರರು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚೆತ್ತುಕೊಂಡು ಸಂಬಂಧಪಟ್ಟ ಮಂತ್ರಿಗಳನ್ನು ವಜಾಗೊಳಿಸಬೇಕಿತ್ತು. ವಾಲ್ಮೀಕಿ ಹಗರಣದಲ್ಲಿ 187 ಕೋಟಿ ರು.ಗಳನ್ನು ಲೂಟಿ ಹೊಡೆದಿರುವುದಕ್ಕೆ ಮುಖ್ಯಮಂತ್ರಿ ಜವಾಬ್ದಾರಿ ಹೊರಬೇಕು. ಮುಡಾ ಹಗರಣ ಹೀಗೆ ಒಂದರ ಮೇಲೊಂದು ಹಗರಣಗಳನ್ನು ಎಸಗುತ್ತಿರುವುದೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.

ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಬಲಿಯಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ವಿಧಾನಸೌಧದ ಮೆಟ್ಟಿಲ ಮೇಲಲ್ಲ ಎಂಬ ಅಹಂಕಾರದ ಮಾತುಗಳನ್ನಾಡುವುದು ಮುಖ್ಯಮಂತ್ರಿಗೆ ಶೋಭೆಯಲ್ಲ. ರಾಜ್ಯ ಸರ್ಕಾರ ಹಗರಣದಲ್ಲಿ ಮುಳುಗಿದೆ ಎಂದು ನಲವತ್ತು ಶಾಸಕರುಗಳೇ ಆಪಾದಿಸುತ್ತಿದ್ದಾರೆ. ಲೋಕಾಯುಕ್ತ ಹಗರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ನಯಾಪೈಸೆಯ ಅಭಿವೃದ್ಧಿಯೂ ಆಗಿಲ್ಲ. ದಲಿತರ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಎಲ್ಲಾ ಹಗರಣಗಳಲ್ಲೂ ಸರ್ಕಾರದ ಮಂತ್ರಿಗಳೇ ಇದ್ದಾರೆ. ನದಿಗಳ ದಡದಲ್ಲಿನ ಮರಳನ್ನು ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ಪರಿಸರವನ್ನು ಹಾಳು ಮಾಡುತ್ತಿದೆ ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ