ತಿರುಪತಿ - ಚಿಕ್ಕಮಗಳೂರು ನೂತನ ರೈಲು ಸಂಚಾರಕ್ಕೆ ಚಾಲನೆ

KannadaprabhaNewsNetwork |  
Published : Jul 12, 2025, 12:32 AM ISTUpdated : Jul 12, 2025, 10:47 AM IST
ಚಿಕ್ಕಮಗಳೂರಿನ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ತಿರುಪತಿ - ಚಿಕ್ಕಮಗಳೂರು ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಒಂದು ಸಾವಿರ ಕೋಟಿ ರು. ವೆಚ್ಚದಲ್ಲಿ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ನಡೆಯುತ್ತಿದೆ. ಇದೊಂದೇ ರಾಜ್ಯಕ್ಕೆ ಹತ್ತು ಒಂದೇ ಭಾರತ್ ರೈಲುಗಳು ಬರುತ್ತಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

 ಚಿಕ್ಕಮಗಳೂರು :  ಒಂದು ಸಾವಿರ ಕೋಟಿ ರು. ವೆಚ್ಚದಲ್ಲಿ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ನಡೆಯುತ್ತಿದೆ. ಇದೊಂದೇ ರಾಜ್ಯಕ್ಕೆ ಹತ್ತು ಒಂದೇ ಭಾರತ್ ರೈಲುಗಳು ಬರುತ್ತಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಚಿಕ್ಕಮಗಳೂರು - ತಿರುಪತಿ ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, 2014 ರಿಂದ ಇದುವರೆಗೆ ರಾಜ್ಯದಲ್ಲಿ 664 ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅರಸೀಕೆರೆ ತುಮಕೂರು ಮಧ್ಯೆ ಡಬ್ಲಿಂಗ್ ಕಾರ್ಯ ₹750 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದೆ. ಇದಲ್ಲದೆ ಬೀರೂರು ಶಿವಮೊಗ್ಗ ಡಬ್ಲಿಂಗ್ ಕಾರ್ಯ ಶೀಘ್ರವೇ ಆರಂಭ ಮಾಡು ತ್ತೇವೆ. ಹಾಸನ ಬೇಲೂರು ಚಿಕ್ಕಮಗಳೂರು ರೈಲ್ವೆ ಮಾರ್ಗ ಇನ್ನೆರಡು ವರ್ಷದ ಒಳಗೆ ಮುಕ್ತಾಯಗೊಳ್ಳಲಿದ್ದು, ಆಗ ಚಿಕ್ಕಮಗಳೂರಿಗೆ ಹೆಚ್ಚಿನ ರೈಲುಗಳು ಸಂಚರಿಸುತ್ತವೆ ಎಂದು ಹೇಳಿದರು.

ಚಿಕ್ಕಮಗಳೂರು ರೈಲ್ವೆ ನಿಲ್ದಾಣವನ್ನು ₹24 ಕೋಟಿ ವೆಚ್ಚದಲ್ಲಿ, ಸಕಲೇಶಪುರ ರೈಲ್ವೆ ನಿಲ್ದಾಣವನ್ನು ₹26 ಕೋಟಿ ವೆಚ್ಚದಲ್ಲಿ, ಹಾಸನ ₹23 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದೇ ರೀತಿ ರಾಜ್ಯದ ಎಲ್ಲಾ ಭಾಗ ಗಳಲ್ಲಿಯೂ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾರ್ಯ ನಿರಂತರವಾಗಿ ಮುಂದುವರಿದಿದೆ ಎಂದರು.

ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಚಿವ ವಿ ಸೋಮಣ್ಣ ರಾಜ್ಯ ರಾಜಕಾರಣದಲ್ಲಿ ಕಳೆದು ಹೋಗಿದ್ದರು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದ ಸೋಮಣ್ಣ ಕೇಂದ್ರ ಸಚಿವರಾಗಿದ್ದಾರೆ. ಇದು ಅವರ ರಾಜಕೀಯ ಚಾಣಾಕ್ಷತನಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿದರು.

ಚಿಕ್ಕಮಗಳೂರು ತಿರುಪತಿ ರೈಲು ಸಂಚಾರ ಆರಂಭ ಮಾಡುವಂತೆ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದಾಗ ಇಷ್ಟು ಬೇಗನೆ ರೈಲು ಸೇವೆ ಆರಂಭಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ. ನೂತನ ರೈಲಿಗೆ ದತ್ತಪೀಠವನ್ನು ಕೇಂದ್ರವಾಗಿಟ್ಟುಕೊಂಡು ಹೆಸರನ್ನು ಇಡಬೇಕು. ದತ್ತಪೀಠ ತಿರುಪತಿ ಎಕ್ಸ್ ಪ್ರೆಸ್, ದತ್ತಪೀಠ ಹೀಗೆ ಕೆಲ ಹೆಸರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಿ.ಟಿ. ರವಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದರು.

ಪ್ರಸ್ತುತ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬೆಳಗ್ಗೆ 8:15ಕ್ಕೆ ರೈಲು ತೆರಳುತ್ತಿದೆ. ಆದರೆ ಬೆಳಗಿನ ಜಾವ 5.15ಕ್ಕೆ ರೈಲು ಸಂಚಾರ ಆರಂಭಿಸಿದರೆ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಬಗ್ಗೆ ರೈಲ್ವೆ ಸಚಿವರು ಗಮನಹರಿಸಬೇಕು ಎಂದು ಮನವಿ ಮಾಡಿದರು.

ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ದೇಶಾ ದ್ಯಂತ ಸಂಪರ್ಕ ಕ್ರಾಂತಿಯನ್ನೇ ಮಾಡುತ್ತಿದೆ. ರಸ್ತೆ, ರೈಲ್ವೆ, ಡಿಜಿಟಲ್, ಏರ್ ಕನೆಕ್ಟಿವಿಟಿ ಕ್ಷೇತ್ರದಲ್ಲಿ ಕ್ರಾಂತಿಯೇ ನಡೆಯುತ್ತಿದೆ. ಇದರ ಭಾಗವಾಗಿಯೇ ರಾಜ್ಯದಲ್ಲೂ ರೈಲ್ವೆ ಇಲಾಖೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಡಿ.ಎಸ್.ಸುರೇಶ್, ನಗರ ಸಭೆ ಅಧ್ಯಕ್ಷೆ ಶೀಲಾ ದಿನೇಶ್, ಪ್ರಮುಖರಾದ ಎಚ್.ಸಿ.ಕಲ್ಮರುಡಪ್ಪ, ಎಂ.ಆರ್.ದೇವರಾಜ ಶೆಟ್ಟಿ, ಮಧುಕುಮಾರ್‌ ರಾಜ್‌ ಅರಸ್‌ ಉಪಸ್ಥಿತರಿದ್ದರು.- 

ನನಗೆ ಆದಂತೆ ಆಗಿದ್ದರೆ ಊರು ಬಿಟ್ಟು ಓಡಿ ಹೋಗುತ್ತಿದ್ದೆಕೆಲವೊಮ್ಮೆ ಜಾಸ್ತಿ ಬುದ್ಧಿವಂತರಿಗೆ ತೊಂದರೆಯಾಗುತ್ತದೆ. ಹೀಗೆ ತೊಂದರೆ ಅನುಭವಿಸಿದವರಲ್ಲಿ ನಾನು ಒಬ್ಬ ಹಾಗೆ ಸಿ.ಟಿ. ರವಿಯು ಒಬ್ಬ. ನನಗೆ ಆದಂತೆ ಆಗಿದ್ದರೆ ಸಿ.ಟಿ. ರವಿ ಊರು ಬಿಟ್ಟು ಓಡಿ ಹೋಗುತ್ತಿದ್ದ. ಒಂದೇ ಸೋಲಿಗೆ ಒದ್ದಾಡುತ್ತಿದ್ದಾರೆ ಆದರೆ ನಾನು ಐದು ಬಾರಿ ಸೋತಿದ್ದೇನೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ನಾನು ಐದು ಬಾರಿ ಸೋತರು ಹೇಗೆ ಸೋತಿದ್ದೇನೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಭಗವಂತನ ಮೇಲೆ ನಂಬಿಕೆ ಇಟ್ಟು ಕೊಂಡು ಇರಬೇಕು. ಸಾರ್ವಜನಿಕ ಜೀವನ ಎಂಬುದು ಮುಳ್ಳಿನ ಹಾಸಿಗೆ ಇದ್ದಂತೆ ಎಂದು ಹೇಳಿದರು. 

PREV
Read more Articles on

Recommended Stories

ಹೂ ಮುಡಿದು ದೇವರ ದರ್ಶನ ಪಡೆದ ಭಾನು : ಬಳೆಯನ್ನು ತೊಟ್ಟು ಹಣೆಗೆ ಕುಂಕುಮ ಇಟ್ಟರು
ಶಿಕ್ಷಕಿ ಕೆರೆಯಲ್ಲಿ ಶವವಾಗಿ ಪತ್ತೆ : ಗಣತಿ ಒತ್ತಡದಿಂದ ಆತ್ಮ*ತ್ಯೆ ?