ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ರೈಲ್ವೆ ಕೆಳಸೇತುವೆ ರಸ್ತೆ ಜನ ಸಂಚಾರಕ್ಕೆ ಮುಕ್ತ

KannadaprabhaNewsNetwork |  
Published : Feb 13, 2025, 12:49 AM IST
ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ರೈಲ್ವೆ ಕೆಳಸೇತುವೆ ರಸ್ತೆಯನ್ನು ಭಾನುವಾರ ಸಂಜೆ ಮರು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಎಮ್ಮಿಗನೂರು ಹಾಗೂ ಕೊಟ್ಟೂರು ಸಂಸ್ಥಾನ ಮಠದ ಶ್ರೀಗಳು ಚಾಲನೆ ನೀಡಿದರು.  ಶಾಸಕ ಭರತ್ ರೆಡ್ಡಿ, ಸೈಯದ್ ನಾಸಿರ್ ಹುಸೇನ್ ಮತ್ತಿತರರಿದ್ದರು.  | Kannada Prabha

ಸಾರಾಂಶ

ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿ ನನ್ನ ಕನಸಾಗಿದೆ.

ಬಳ್ಳಾರಿ: ಕಳೆದ ಎರಡುವರೆ ತಿಂಗಳಿನಿಂದ ನಡೆಯುತ್ತಿದ್ದ ಕಾಮಗಾರಿಯಿಂದ ನಗರದ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ರೈಲ್ವೆ ಕೆಳಸೇತುವೆ ರಸ್ತೆಯನ್ನು ಭಾನುವಾರ ಸಂಜೆ ಮರು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಎಮ್ಮಿಗನೂರು ಮಹಾಂತರ ಸಂಸ್ಥಾನ ಮಠದ ಶ್ರೀವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ಕೊಟ್ಟೂರು ಸಂಸ್ಥಾನ ಮಠದ ಶ್ರೀ ಕೊಟ್ಟೂರು ಬಸವಲಿಂಗಸ್ವಾಮಿಗಳು, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರು ಉದ್ಘಾಟಿಸುವ ಮೂಲಕ ರಸ್ತೆ ಸಂಚಾರಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ, ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿ ನನ್ನ ಕನಸಾಗಿದೆ. ಈ ದಿಸೆಯಲ್ಲಿ ಹತ್ತಾರು ಯೋಜನೆಗಳ ಮೂಲಕ ಪ್ರಗತಿದಾಯಿಕ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ನಾರಾ ಪ್ರತಾಪ ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಇದ್ದರು.

ರೈಲ್ವೆ ಕೆಳಸೇತುವೆ ರಸ್ತೆಯ ಮರು ಸಂಚಾರ ಕಾರ್ಯಕ್ರಮ ಹಿನ್ನಲೆಯಲ್ಲಿ ಎರಡು ಬದಿಯ ಗೋಡೆಗಳನ್ನುವಿದ್ಯುತ್‌ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಸುವರ್ಣ ಬಳ್ಳಾರಿಯ ಫಲಕವು ವಿದ್ಯುತ್ ದೀಪದಿಂದ ಗಮನ ಸೆಳೆಯಿತು. ಕಾರ್ಯಕ್ರಮ ಚಾಲನೆ ಸಿಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ರೈಲ್ವೆ ಕೆಳಸೇತುವೆ ರಸ್ತೆಯ ಅಭಿವೃದ್ಧಿ, ಫುಟ್‌ಪಾತ್, ಎರಡು ಬದಿಯ ಗೋಡೆಗಳಿಗೆ ಪ್ಲಾಸ್ಟಿಂಗ್, ಬೀದಿ ದೀಪಗಳ ಅಳವಡಿಕೆ ಮತ್ತಿತರ ಕಾಮಗಾರಿಗಳನ್ನು 1.80 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತಲ್ಲದೆ, ಕಳೆದ ಎರಡುವರೆ ತಿಂಗಳಿನಿಂದ ಕಾಮಗಾರಿ ನಡೆದಿತ್ತು. ಇದರಿಂದ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಪರದಾಟವಾಗಿತ್ತು.

ಕಾಮಗಾರಿ ಪೂರ್ಣಗೊಂಡರೂ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡುತ್ತಿಲ್ಲ ಎಂದು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ, ಸಿಪಿಐಎಂ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಭಾನುವಾರ ಸಂಜೆ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ಅಂಡರ್‌ ಬ್ರಿಡ್ಜ್ ರಸ್ತೆಯನ್ನು ಓಡಾಟಕ್ಕೆ ಮುಕ್ತಗೊಳಿಸುತ್ತಿದ್ದಂತೆಯೇ ಸಾರ್ವಜನಿಕರು ನಿರಾಳಗೊಂಡರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?