ಕಾರ್ಕಳ: ಕಾರ್ಕಳ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ-ಮಳೆಯ ತೀವ್ರತೆಗೆ ಅನಾಹುತಗಳು ಸಂಭವಿಸಿದ್ದು, ಅನೇಕ ಮರಗಳು ಧರೆಗುರುಳಿವೆ.
ಅಜೆಕಾರು, ಶಿರ್ಲಾಲು, ಕೆರುವಾಶೆ, ಮಾಳ, ನೂರಲ್ ಬೆಟ್ಟು, ಹೆರ್ಮುಂಡೆ ಹಾಗೂ ಬಜಗೋಳಿ ಭಾಗಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ. ಅಜೆಕಾರು ಗುಡೆದೆಯಂಗಡಿ ಬಸ್ ನಿಲ್ದಾಣದ ಮೇಲ್ಛಾವಣಿಯ ಹೆಂಚುಗಳು ಭಾರಿ ಗಾಳಿಗೆ ಹಾರಿ ಹೋಗಿರುವ ಘಟನೆ ನಡೆದಿದೆ.ಭಾರಿ ಗಾಳಿಯ ಪರಿಣಾಮ ಹಲವೆಡೆ ಮರಗಳು ರಸ್ತೆ ಮೇಲೆ ಉರುಳಿದ್ದು, ವಾಹನ ಸಂಚಾರಕ್ಕೂ ತೊಂದರೆ ಉಂಟಾಯಿತು. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಕಾರ್ಕಳ ತಾಲೂಕಿನ ಹಲವು ಗ್ರಾಮಗಳಲ್ಲಿ ರಾತ್ರಿ ವೇಳೆಗೆ ವಿದ್ಯುತ್ ವ್ಯತ್ಯಯ ಮುಂದುವರಿದಿದೆ.
ಇನ್ನೊಂದೆಡೆ ಹೆಬ್ರಿ ತಾಲೂಕಿನ ಮುನಿಯಾಲು, ಅಂಡಾರು, ಮುದ್ರಾಡಿ, ಕಬ್ಬಿನಾಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾದ ವರದಿಯಾಗಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆಗೆ ಏಕಾಏಕಿ ಆರಂಭವಾದ ಮಳೆಯು ಕೆಲಕಾಲ ಜೋರಾಗಿ ಸುರಿಯಿತು.
ಕಳೆದ ಕೆಲವು ದಿನಗಳಿಂದ ಹೆಚ್ಚಿದ ತಾಪಮಾನದಿಂದ ಜನಜೀವನ ತೊಂದರೆಗೊಳಗಾಗಿದ್ದು, ಕುಡಿಯುವ ನೀರಿನ ಸಮಸ್ಯೆಯ ಆತಂಕವೂ ಎದುರಾಗಿತ್ತು. ಇದೀಗ ಸುರಿದ ಮಳೆಯು ವಾತಾವರಣವನ್ನು ತಂಪಾಗಿಸಿ ಬೇಸಿಗೆಯ ಬಿಸಿಗಾಳಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.