ಗೋಕರ್ಣದಲ್ಲಿ ಮತ್ತೆ ಮಳೆಯ ಅಬ್ಬರ, ರೆಡ್ ಅಲರ್ಟ್‌ ಘೋಷಣೆ

KannadaprabhaNewsNetwork | Published : Jul 14, 2024 1:31 AM

ಸಾರಾಂಶ

ಕಳೆದ ನಾಲ್ಕು ದಿನದಿಂದ ಕಡಿಮೆಯಾಗಿದ್ದ ಮಳೆಯ ಅಬ್ಬರ ಶನಿವಾರ ಮುಂಜಾನೆಯಿಂದ ಮತ್ತೆ ಪ್ರಾರಂಭವಾಗಿದೆ. ಪ್ರವಾಸಿ ತಾಣದಲ್ಲಿ ವಾರಾಂತ್ಯದ ರಜೆಗೆ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದು ಭಾರಿ ಮಳೆಗೆ ಕಂಗಾಲಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ಕಳೆದ ನಾಲ್ಕು ದಿನದಿಂದ ಕಡಿಮೆಯಾಗಿದ್ದ ಮಳೆಯ ಅಬ್ಬರ ಶನಿವಾರ ಮುಂಜಾನೆಯಿಂದ ಮತ್ತೆ ಪ್ರಾರಂಭವಾಗಿದೆ. ಪ್ರವಾಸಿ ತಾಣದಲ್ಲಿ ವಾರಾಂತ್ಯದ ರಜೆಗೆ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದು ಭಾರಿ ಮಳೆಗೆ ಕಂಗಾಲಾಗಿದ್ದಾರೆ. ಎಂದಿನಂತೆ ಇಲ್ಲಿನ ಮಹಾಗಣಪತಿ ಮಂದಿರದ ಮುಂಭಾಗದಿಂದ ರಥಬೀದಿಯವರೆಗಿನ ರಸ್ತೆ ಜಲಾವೃತಗೊಂಡಿತ್ತು, ಹೊಲಸು ನೀರು ತುಳಿದೇ ಭಕ್ತರು ದೇವರ ದರ್ಶನಕ್ಕೆ ತೆರಳಿದ್ದರು. ಇದರಂತೆ ಮೀನು ಮಾರುಕಟ್ಟೆ ಬಳಿ ಕೆರೆಯಾಗಿ ಮಾರ್ಪಟ್ಟಿತ್ತು. ಮಳೆ ಕೆಲ ದಿನ ಬಿಡುವು ನೀಡಿದರೂ ಚರಂಡಿ ಸ್ವಚ್ಛಗೊಳಿಸಿ ನೀರು ಹೋಗುವಂತೆ ಸಂಬಂಧಿಸಿದ ಇಲಾಖೆ ಮಾಡದ ಕಾರಣ ಸಮಸ್ಯೆ ಹಾಗೆ ಮುಂದುವರಿದಿದೆ. ಆದರೆ, ಶನಿವಾರ ಕೆಲವು ಕಡೆಯ ಚರಂಡಿಯನ್ನು ಗ್ರಾಪಂ ಸದಸ್ಯ ಪ್ರಭಾಕರ ಪ್ರಸಾದ ಅವರು ಕೆಲಸಗಾರನ್ನು ಕರೆತಂದು ಸ್ವಚ್ಛಗೊಳಿಸುವ ಕಾರ್ಯಕೈಗೊಂಡಿದ್ದಾರೆ.

ಧರೆ ಕುಸಿತ ಸಂಚಾರಕ್ಕೆ ತೊಡಕು:

ಏಕಮುಖ ಸಂಚಾರ ವ್ಯವಸ್ಥೆಯ ಊರಿನಿಂದ ಹೊರ ಹೋಗುವ ಮುಖ್ಯ ಮಾರ್ಗದ ತಾರಮಕ್ಕಿ ಸರ್ಕಾರಿ ಶಾಲೆಯ ಹತ್ತಿರ ಧರೆ ಕುಸಿದ ಪರಿಣಾಮ ಮರ ಹಾಗೂ ಮಣ್ಣಿನ ರಾಶಿ ರಸ್ತೆಯಲ್ಲಿ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಸ್ಥಳಕ್ಕೆ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ ಭೇಟಿ ನೀಡಿ ಮಣ್ಣು ತೆರವುಗೊಳಿಸಲು ಸೂಚಿಸಿದ್ದಾರೆ. ನಿತ್ಯ ಸಾವಿರಾರು ವಾಹನ ಸಂಚರಿಸುವ ಈ ಮಾರ್ಗದಲ್ಲಿ ಸೂಕ್ತ ಸರಕ್ಷತಾ ಕ್ರಮ ಕೈಗೊಳ್ಳಬೇಕಿದೆ.

ಇಂದು, ನಾಳೆ ಭಾರೀ ಮಳೆ ಸಾಧ್ಯತೆ, ರೆಡ್ ಅಲರ್ಟ್‌ ಘೋಷಣೆ

ಕನ್ನಡಪ್ರಭ ವಾರ್ತೆ ಕಾರವಾರಉತ್ತರ ಕನ್ನಡ ಜಿಲ್ಲಾದ್ಯಂತ ಭಾನುವಾರ ಹಾಗೂ ಸೋಮವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ರೆಡ್ ಅಲರ್ಟ್‌ ಘೋಷಿಸಲಾಗಿದೆ.ಈ ಎರಡು ದಿನ ಭಾರೀ ಮಳೆಯಾಗಲಿದ್ದು, ಮೀನುಗಾರರು ಹಾಗೂ ಜನತೆ ಸಮುದ್ರ ಅಥವಾ ನದಿಗೆ ಇಳಿಯದಂತೆ ಜಿಲ್ಲಾ ಆಡಳಿತ ಸೂಚನೆ ನೀಡಿದೆ.

ಶನಿವಾರದಿಂದ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಶನಿವಾರ ಮುಂಜಾನೆಯಿಂದಲೇ ಜಿಲ್ಲೆಯ ವಿವಿಧೆಡೆ ಭಾರಿ ಮಳೆ ಸುರಿಯುತ್ತಿದೆ. ಭಾನುವಾರ ಹಾಗೂ ಸೋಮವಾರ ರೆಡ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ.ವಾರಗಳ ಕಾಲ ಬಿಟ್ಟೂ ಬಿಡದೆ ಜಿಲ್ಲೆಯನ್ನು ಮಳೆ ಕಾಡಿತ್ತು. ನೂರಾರು ಮನೆಗಳು ಜಲಾವೃತವಾಗಿ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರಗಳನ್ನೂ ತೆರೆಯಲಾಗಿತ್ತು. ಮರ ಉರುಳಿ, ಗುಡ್ಡ ಕುಸಿದು ಕುಮಟಾ ಶಿರಸಿ ಹಾಗೂ ಹೊನ್ನಾವರ ಬೆಂಗಳೂರು ನಡುವಣ ಸಂಚಾರಕ್ಕೂ ವ್ಯತ್ಯಯ ಉಂಟಾಗಿತ್ತು. ಅದಾದ ನಂತರ 2 ದಿನಗಳ ವಿರಾಮ ಸಿಕ್ಕಿತ್ತು. ಈಗ ಮತ್ತೆ ಮಳೆ ಅಬ್ಬರಿಸುತ್ತಿದೆ. ಶನಿವಾರ ಗೋಕರ್ಣದ ತಾರಮಕ್ಕಿ ಬಳಿ ಗುಡ್ಡ ಕುಸಿದು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಜೋಯಿಡಾದ ಪ್ರದಾನಿ, ಬಾಮಣಗಿ ಬಳಿ ಜೋಯಿಡಾ ದಾಂಡೇಲಿ ಹೆದ್ದಾರಿ ನಡುವ ಸಂಚಾರ ವ್ಯತ್ಯಯ ಉಂಟಾಗಿತ್ತು. ನಂತರ ಮರವನ್ನು ತೆರವುಗೊಳಿಸಲಾಯಿತು.

ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಯಲ್ಲಾಪುರ, ಸಿದ್ಧಾಪುರ ಮತ್ತಿತರ ಕಡೆಗಳಲ್ಲಿ ಶನಿವಾರ ಮಳೆ ಚುರುಕುಗೊಂಡಿದೆ. ಆಗಾಗ ಭಾರೀ ಮಳೆ ಸುರಿಯುತ್ತಿದೆ.ಜಿಲ್ಲಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣ ಉಂಟಾಗಿದೆ. ಆಗಾಗ ಮಳೆಯ ಆರ್ಭಟ ಜೋರಾಗಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಮತ್ತೆ ಪ್ರವಾಹದ ಆತಂಕ ಉಂಟಾಗಲಿದೆ.ಗುಡ್ಡ ಕುಸಿದು ಮೂರು ಮನೆಗೆ ಹಾನಿ

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಪಂ ವ್ಯಾಪ್ತಿಯ ವರ್ನಕೇರಿ ಸಮೀಪ ಗುಡ್ಡ ಕುಸಿದು, ಮಣ್ಣು ಹಾಗೂ ಮರಗಳು ಬಿದ್ದು, ಮೂರು ಮನೆಗೆ ಹಾನಿ ಸಂಭವಿಸಿದೆ.ಗುಡ್ಡಕ್ಕೆ ಹೊಂದಿಕೊಂಡಿರುವ ಮರಗಳು ನೇರವಾಗಿ ಮನೆ ಮೇಲೆ ಬಿದ್ದು, ಮಣ್ಣು, ಕಲ್ಲುಗಳು ಬಿದ್ದಿದೆ. ಮನೆಯ ಹಿಂಭಾಗದಲ್ಲಿ ಈ ಘಟನೆ ಸಂಭವಿಸಿರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೂರು ಮನೆಯ ಹಂಚು, ಸಿಮೆಂಟ್ ಸೀಟು ಹಾಗೂ ಸೊಲಾರ್ ವಾಟರ್ ಹಿಟರ್ ಸಲಕರಣೆಗಳು ಮಣ್ಣಿನ ಅಡಿ ಬಿದ್ದಿದೆ.

ಗಣೇಶ ಗಜಾನನ ಹೆಗಡೆಕೆರೆ, ಸಾವಿತ್ರಿ ನಾಗೇಶ ಹೆಗಡೆಕೆರೆ, ಅನುರಾಧ ಗಣೇಶ ಹೆಗಡೆಕೆರೆ ಮನೆಗೆ ಹಾನಿ ಸಂಭವಿಸಿದೆ. ಮಳೆಯ ತೀವ್ರತೆ ಹೆಚ್ಚಾದಲ್ಲಿ ಇನ್ನಷ್ಟು ಕುಸಿಯುವ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಅಭಿಲಾಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮರ ಉರುಳಿ ರಸ್ತೆ ಬಂದ್

ಜೋಯಿಡಾ: ಶನಿವಾರ ತಾಲೂಕಿನಲ್ಲೆಡೆ ಮಳೆ ಅಬ್ಬರ ಕಂಡು ಬರುತ್ತಿದೆ. ಮರ ಬೀಳುವುದು ಗಟಾರು ತುಂಬಿ ರಸ್ತೆಗೆ ನೀರು ಬರುವುದು, ವಾಹನಗಳು ರಸ್ತೆಯ ಪಕ್ಕ ಜಾರುವುದು ಸರ್ವೇ ಸಾಮಾನ್ಯ. ಶನಿವಾರ ಮಧ್ಯಾಹ್ನ 2ರ ವೇಳೆ ಪ್ರಧಾನಿ ಪಂಚಾಯಿತಿಯ ಬಾಮಣಗಿ ಕ್ರಾಸ್ ಹತ್ತಿರ ಮರ ಬಿದ್ದು ಒಂದು ತಾಸು ರಸ್ತೆ ಬಂದಾಗಿತ್ತು. ಸ್ಥಳೀಯರು ಅರಣ್ಯ ಇಲಾಖೆಯವರು ವಾಹನ ಚಾಲಕರು ಮರವನ್ನು ತೆಗೆದು ರಸ್ತೆ ಸಂಚಾರ ಸುಗಮಗೊಳಿಸಿದರು.ಮಳೆ ಅಬ್ಬರ, ಸಂಚಾರಕ್ಕೆ ವ್ಯತ್ಯಯ

ಶಿರಸಿ: ಕಳೆದೆರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಶನಿವಾರದಿಂದ ತಾಲೂಕಿನಾದ್ಯಂತ ತನ್ನ ಆರ್ಭಟ ಮುಂದುವರಿಸಿದ್ದು, ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ತೊಡಕುಂಟಾಯಿತು. ಇಲ್ಲಿನ ಗಣೇಶನಗರ ಗೋಸಾವಿಗಲ್ಲಿಯ ಹಿಂದುರಾವ್ ರಾಮು ಗೋಸಾವಿಯ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಭಾಗದ ಧರೆ ಕುಸಿಯುತ್ತಿದ್ದು, ಹೀಗೆ ಮಳೆ ಮುಂದುವರೆದಲ್ಲಿ ಧರೆಯು ಕುಸಿದು ಮನೆಗೆ ಹಾನಿಯಾಗುವ ಸಂಭವವಿದೆ. ನಿರ್ಮಾಣಹಂತದಲ್ಲಿರುವ ಮನೆಯಲ್ಲಿ ವಾಸ್ಯವ್ಯವಿಲ್ಲ ಎಂದು ತಹಸೀಲ್ದಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Share this article