15 ಜಿಲ್ಲೆಗಳಲ್ಲಿ ಮಳೆ, ಸಿಡಿಲಿಗೆ ಇಬ್ಬರು ಬಲಿ

KannadaprabhaNewsNetwork |  
Published : May 19, 2024, 01:48 AM ISTUpdated : May 19, 2024, 12:07 PM IST
ಮಡಿಕೇರಿಯಲ್ಲಿ ಮಳೆ. | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರು, ಮಡಿಕೇರಿ ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರವೂ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಹಾಗೂ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಸಿಡಿಲಬ್ಬರದ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ.

 ಬೆಂಗಳೂರು : ರಾಜಧಾನಿ ಬೆಂಗಳೂರು, ಮಡಿಕೇರಿ ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರವೂ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಹಾಗೂ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಸಿಡಿಲಬ್ಬರದ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ.

ಬನವಾಸಿಯ ಕದಂಬ ಮೈದಾನದಲ್ಲಿ ಗೆಳೆಯರ ಜತೆ ಕ್ರಿಕೆಟ್ ಆಡುತ್ತಿದ್ದ ವೇಳೆ ಸಿಡಿಲು ಬಡಿದು ಸಾಜಿದ್ ಅಸ್ಪಾಕಲಿ ಶೇಖ್ (16) ಎಂಬಾತ ಮೃತಪಟ್ಟಿದ್ದಾನೆ. ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಸಿಡಿಲು ಬಡಿದು ಸಕಿರ್‌ ಮಹ್ಮದ್‌ ಶಹಪುರಿ (55) ಎಂಬುವರು ಮೃತಪಟ್ಟಿದ್ದಾರೆ. ಹಾವೇರಿ, ರಾಣೆಬೆನ್ನೂರು, ಹಾನಗಲ್‌, ಹಿರೇಕೆರೂರು ಸೇರಿ ಹಾವೇರಿ ಜಿಲ್ಲೆಯ ಹಲವೆಡೆ ಸಂಜೆ ಸುಮಾರು 1 ಗಂಟೆ ಕಾಲ ಅಬ್ಬರದ ಮಳೆ ಸುರಿಯಿತು. ಕೊಡಗಿನಲ್ಲಿ ಮಡಿಕೇರಿ ಸುತ್ತಮುತ್ತ ಮಧ್ಯಾಹ್ನ ಒಂದು ಗಂಟೆ ಗಾಳಿ ಸಹಿತ ಜೋರು ಮಳೆ ಸುರಿದಿದೆ.

ಚಾಮರಾಜನಗರದಲ್ಲಿ ಶನಿವಾರ ಮಧ್ಯಾಹ್ನದ ನಂತರ ಒಂದೂವರೆ ತಾಸು ಜೋರು ಮಳೆಯಾಗಿದ್ದು, ಮೂಡಲಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಅಡಿ ಗುಂಡಿ ಬಿದ್ದು, ವಾಹನ ಸವಾರರು ಪ್ರಯಾಣಿಸಲು ಪರದಾಡಿದರು. ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ಹೆಬ್ರಿ, ಕಾರ್ಕಳ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮರಗಳು ಉರುಳಿ ಬಿದ್ದು, 4-5 ಮನೆಗಳು ಹಾನಿಗೊಳಗಾಗಿವೆ. ಕರಾವಳಿಯಲ್ಲಿ ಮೇ 23ರವರೆಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. 40 ರಿಂದ 55 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಲವೆಡೆ ಮಳೆಗೆ ಫಸಲಿಗೆ ಬಂದಿದ್ದ ಬಾಳೆ ತೋಟಗಳು ನಾಶವಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸುತ್ತಮುತ್ತ ಶನಿವಾರ ಸಂಜೆ 1 ತಾಸು ಭಾರೀ ಮಳೆ ಸುರಿಯಿತು.ಇಂದು ಭಾರಿ ಮಳೆ ಮುನ್ಸೂಚನೆ:

ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಕರಾವಳಿ ಮೂರು ಜಿಲ್ಲೆಗಳು ಹಾಗೂ ರಾಜಧಾನಿ ಬೆಂಗಳೂರು, ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಿಗೆ ಮುಂದಿನ 24 ಗಂಟೆಯಲ್ಲಿ 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ ಮುನ್ಸೂಚನೆ ನೀಡಲಾಗಿದೆ.

ಇದೇ ವೇಳೆ ಕೊಡಗು ಜಿಲ್ಲೆಯಲ್ಲಿ ಮೇ 19 ರಿಂದ 21ರ ಅವಧಿಯಲ್ಲಿ 11 ರಿಂದ 20 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್‌ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ. ಕೆಲವು ಸ್ಥಳದಲ್ಲಿ ಅತಿ ಭಾರೀ ಮಳೆಯೂ ಸುರಿಯಲಿದೆ, ಗಾಳಿ ಹೆಚ್ಚಾಗಿರಲಿದೆ.ಇನ್ನು ಮೇ 20ಕ್ಕೆ ಶಿವಮೊಗ್ಗ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಅಲ್ಲಲ್ಲಿ ಮಳೆ ಆಗಲಿದೆ.

 ನಿನ್ನೆ ಗುಬ್ಬಿಯಲ್ಲಿ 11 ಸೆಂ.ಮೀ.:ಶನಿವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ವರದಿ ಪ್ರಕಾರ ಗುಬ್ಬಿಯಲ್ಲಿ ಅತಿ ಹೆಚ್ಚು 11 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರದ ಬೇಗೂರಿನಲ್ಲಿ 9, ಶ್ರವಣಬೆಳಗೊಳ, ಸಿಆರ್‌ಪಟ್ಟಣ ಮತ್ತು ಯಲ್ಲಾಪುರದಲ್ಲಿ ತಲಾ 7, ಮದ್ದೂರು, ಚಿಕ್ಕಮಗಳೂರು, ಬಂಡೀಪುರ, ತುಮಕೂರು, ವೈ.ಎನ್‌.ಹೊಸಪೇಟೆಯಲ್ಲಿ ತಲಾ 4, ಕೂಡಲಸಂಗಮ, ಪೊನ್ನಂಪೇಟೆ, ವಿರಾಜಪೇಟೆ, ಕೆ.ಆರ್.ನಗರ, ಶಿವಮೊಗ್ಗ, ಹೊಸದುರ್ಗ, ಹುಣಸೂರು, ಕಮ್ಮರಡಿ, ಹೊಸಕೋಟೆಯಲ್ಲಿ ತಲಾ 3, ಮಂಗಳೂರು, ರಾಣೆಬೆನ್ನೂರು, ಲೋಂಡಾ, ಮಂಡ್ಯ, ಯಗಟಿ ಸೇರಿದಂತೆ ಮೊದಲಾದ ಕಡೆ 2 ಸೆಂ.ಮೀ ಮಳೆಯಾಗಿದೆ. ಉಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ