ಇನ್ನೂ 1 ವಾರ ರಾಜ್ಯದಲ್ಲಿ ಮಳೆ : ಹಲವೆಡೆ ಅಲರ್ಟ್

KannadaprabhaNewsNetwork |  
Published : May 18, 2024, 12:30 AM ISTUpdated : May 18, 2024, 09:58 AM IST
ಮಳೆಗೆ ಸೇತುವೆ ಮೇಲೆ ಹರಿದ ನೀರು. | Kannada Prabha

ಸಾರಾಂಶ

ಶಿವಮೊಗ್ಗ, ಕೊಪ್ಪಳ, ತುಮಕೂರು, ಬಾಗಲಕೋಟೆ, ಚಿಕ್ಕಮಗಳೂರು ಸೇರಿ ರಾಜ್ಯದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಜಾಡರ ಅರಳಿಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ.

 ಬೆಂಗಳೂರು :  ಶಿವಮೊಗ್ಗ, ಕೊಪ್ಪಳ, ತುಮಕೂರು, ಬಾಗಲಕೋಟೆ, ಚಿಕ್ಕಮಗಳೂರು ಸೇರಿ ರಾಜ್ಯದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಜಾಡರ ಅರಳಿಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಜಾಡರ ಅರಳಿಕಟ್ಟಿ ಗ್ರಾಮದ ಭಾಗ್ಯಶ್ರೀ (16) ಮೃತ ಬಾಲಕಿ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಯಿತು. ರಾಯಚೂರಿನಲ್ಲಿ ಮಳೆಯಿಂದಾಗಿ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿದ್ದು, ರಸ್ತೆ, ವೃತ್ತಗಳು ಜಲಾವೃತಗೊಂಡಿದ್ದವು.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಸಿಡಿಲು ಬಡಿದು ದನದ ಕೊಟ್ಟಿಗೆ ಸುಟ್ಟು ಭಸ್ಮವಾಗಿದೆ. ಕೊಟ್ಟಿಗೆಯಲ್ಲಿದ್ದ 50 ಸಾವಿರ ರು. ಮೌಲ್ಯದ ಆಕಳೊಂದು ಮೃತಪಟ್ಟಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಚಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲ್ಛಾವಣಿ ಗಾಳಿ ಮಳೆಗೆ ಹಾರಿ ಹೋಗಿದೆ.

ದಾವಣಗೆರೆಯ ರಾಮಕೃಷ್ಣ ನಗರದಲ್ಲಿ ಸುರಿದ ಗಾಳಿ ಮಳೆಗೆ ಹಲವು ಮನೆಗಳ ತಾತ್ಕಾಲಿಕ ಶೆಡ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, 500 ಕುಟುಂಬಗಳು ಅತಂತ್ರವಾಗಿವೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಲವೆಡೆ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಹಲವು ಮನೆಗಳಿಗೆ ಹಾನಿ ಸಂಭವಿಸಿದೆ.

ಇನ್ನೂ 1 ವಾರ ರಾಜ್ಯದಲ್ಲಿ ಮಳೆ:

ರಾಜಧಾನಿ ಬೆಂಗಳೂರಿನಲ್ಲಿ ಮೇ 19 ಹಾಗೂ 20ರಂದು ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಿದೆ. ಇನ್ನು ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗ, ಮೇ 19ರಂದು ಉತ್ತರ ಕನ್ನಡ, ಮೇ 20ಕ್ಕೆ ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ತುಮಕೂರು, ಮೇ 21ಕ್ಕೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಸುಳಿಗಾಳಿ ಪರಿಣಾಮದಿಂದ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರದ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ಮೇ 19 ಹಾಗೂ 20 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ 6 ರಿಂದ 11 ಸೆಂ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ನ ಮುನ್ಸೂಚನೆ ನೀಡಲಾಗಿದೆ.

ಇನ್ನು ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗ, ಮೇ 19ರಂದು ಉತ್ತರ ಕನ್ನಡ, ಮೇ 20ಕ್ಕೆ ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ತುಮಕೂರು, ಮೇ 21ಕ್ಕೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಮೇ 21 ಹಾಗೂ ಮೇ 22ಕ್ಕೆ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ 11 ರಿಂದ 20 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್‌ ಅಲರ್ಟ್‌ ನೀಡಲಾಗಿದೆ.ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ, ಪುತ್ತೂರು, ಭಾಗಮಂಡಲ, ಕಮ್ಮರಡಿ, ಕೊಣನೂರಿನಲ್ಲಿ ಅತಿ ಹೆಚ್ಚು 7 ಸೆಂ.ಮೀ. ಮಳೆಯಾಗಿದೆ. ಯಲ್ಲಾಪುರ, ಶಿಗ್ಗಾಂವ್‌, ರಾಯಚೂರಿನಲ್ಲಿ ತಲಾ 6, ಗೋಕಾಕ್‌ ಹಾಗೂ ಶೃಂಗೇರಿಯಲ್ಲಿ ತಲಾ 5, ಉಪ್ಪಿನಂಗಡಿ, ಕುಷ್ಟಗಿ, ಬೆಳಗಾವಿ ವಿಮಾನ ನಿಲ್ದಾಣ, ರಾಯಬಾಗ, ಧಾರವಾಡ, ಸೇಡಬಾಳ, ಲಿಂಗಸುಗೂರು, ಕುಡತಿನಿ, ತ್ಯಾಗರ್ತಿ, ಭದ್ರಾವತಿಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಉಳಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಸಿಲಿನ ತಾಪಕ್ಕೆಹಾವೇರಿಯಲ್ಲಿ ವ್ಯಕ್ತಿ ಬಲಿ?

ಹಾವೇರಿ ನಗರದಲ್ಲಿ ನ್ಯಾಯಬೆಲೆ ಅಂಗಡಿಯಿಂದ ಮನೆಗೆ ಮರಳುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದು, ಬಿಸಿಲಿನ ತಾಪಕ್ಕೆ ಆಯಾಸಗೊಂಡು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರಾಜಶೇಖರ ಹಲಗಲಿ (56) ಮೃತಪಟ್ಟವರು. ಬೆಳಗ್ಗೆ 11.30ರ ಸುಮಾರಿಗೆ ಇವರು ನ್ಯಾಯಬೆಲೆ ಅಂಗಡಿಯಿಂದ ಪಡಿತರ ತೆಗೆದುಕೊಂಡು ಚೀಲವನ್ನು ಹೆಗಲ ಮೇಲಿಟ್ಟುಕೊಂಡು ಮನೆ ಕಡೆಗೆ ಬರುತ್ತಿದ್ದರು. ಈ ವೇಳೆ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ರಸ್ತೆ ಮೇಲೆ ಬಿದ್ದಿದ್ದಾರೆ.

ಸ್ಥಳೀಯರು ಕೂಡಲೇ ಇವರ ನೆರವಿಗೆ ಧಾವಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''