ಕನ್ನಡಪ್ರಭ ವಾರ್ತೆ ಆಲೂರು
ಹಬ್ಬದ ಹಿಂದಿನ ಎರಡು ದಿನ ಮೋಡ ಮುಸುಕಿದ ವಾತಾವರಣ ಮತ್ತು ಅಕಾಲಿಕ ಮಳೆಯಾದ್ದರಿಂದ, ಕೊಯ್ಲು ಮಾಡಿದ ಕಾಫಿ, ಭತ್ತ ಬೆಳೆ ಮಳೆ ನೀರಿನಿಂದ ತೋಯ್ದ ಪರಿಣಾಮ, ರೈತರ ಮೊಗದಲ್ಲಿ ಮೂಡಿದ್ದ ಮಂದಹಾಸ ಮರೆಯಾಗಿತ್ತು. ಆದರೂ ಪುರಾತನ ಕಾಲದಿಂದ ನಡೆದು ಬಂದಿರುವ ಹಬ್ಬವನ್ನು ಆಚರಿಸಲು ಮುಂದಾದರು. ಮನೆಗಳನ್ನು ಸ್ವಚ್ಚಗೊಳಿಸಿ ಮುಂಭಾಗ ಶುಚಿಗೊಳಿಸಿ ಬಣ್ಣದ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದರು. ಬೆಳಗ್ಗೆ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ನಂತರ, ಹೊಸ ಬಟ್ಟೆ ಧರಿಸಿದ ಮಕ್ಕಳು ಈಗಾಗಲೆ ತಯಾರಿ ಮಾಡಲಾಗಿದ್ದ ಎಳ್ಳು-ಬೆಲ್ಲ-ಕಡ್ಲೆ ತುಂಬಿದ ಪೊಟ್ಟಣಗಳನ್ನು, ಇಷ್ಟಮಿತ್ರ ಬಂಧುಗಳ ಮನೆಗೆ ಹೋಗಿ ಕೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕೃಷಿಕರ ಕುಟುಂಬಗಳು, ಮನೆಯಂಗಳದಲ್ಲಿ ಕಾಫಿ ಬೀಜವನ್ನು ಗುಡ್ಡೆ ಮಾಡಿ, ರಂಗೋಲಿ ಇಟ್ಟು ಪೂಜಿಸಿ ಕಬ್ಬು, ಬೆಲ್ಲ, ಎಳ್ಳು, ಪೊಂಗಲ್ ನೈವೇದ್ಯ ಅರ್ಪಿಸಿ ಪೂಜಿಸಿ ನಮಸ್ಕರಿಸಿದರು. ಮಧ್ಯಾಹ್ನದ ವೇಳೆಗ ಕಡುಬು, ಚಿಲುಕವರೆಕಾಳು ಸಾರು ಮಾಡಿ ದೇವರಿಗೆ ನೈವೇದ್ಯ ಮಾಡಿ ಊಟ ಸವಿದರು. ಕೆಲವು ಮನೆಗಳಲ್ಲಿ ಹಿಂದಿನಿಂದ ನಡೆದು ಬಂದಿರುವಂತೆ ಹಿರಿಯರಿಗೆ ಪೂಜೆ ಸಲ್ಲಿಸಿ ಪಕ್ಷ ಆಚರಣೆ ಮಾಡಿದರು.
ಪ್ರತಿಯೊಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಹಬ್ಬ ಮುಗಿದ ನಂತರ ಜನರು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಅಂಕಿಹಳ್ಳಿಪೇಟೆ ಗ್ರಾಮದ ಕಾಫಿ ಬೆಳೆಗಾರ ಎ. ಕೆ. ಪೋಷಿತ್‌ಕುಮಾರ್ ಕುಟುಂಬದವರು,ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕಣದಲ್ಲಿ ಕಾಫಿ ಕಾಳುಗಳನ್ನು ಗುಡ್ಡೆ ಮಾಡಿ ಪೂಜೆ ಸಲ್ಲಿಸಿದರು.