ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಸತತ ಒಂದೂವರೆ ತಿಂಗಳಿಂದ ಮಳೆರಾಯ ಮುನಿಸಿಕೊಂಡಿದ್ದರಿಂದ ಮುಂಡರಗಿ ತಾಲೂಕು ಮತ್ತು ಡಂಬಳ ಹೋಬಳಿಯಾದ್ಯಂತ ಬೆಳೆಗಳು ಬೆಳೆ ಬಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಭೂಮಿಯ ಮೇಲೆ ಹನಿ ನೀರು ಬೀಳದೆ ಇರುವುದರಿಂದ ಮೊಣಕಾಲುದ್ದ ಬೆಳೆದ ಬೆಳೆಗಳು ದಿನದಿಂದ ದಿನಕ್ಕೆ ಮುದುಡಿ ನೆಲಸಮವಾಗುತ್ತಿವೆ. ಮಳೆ ಅನಿಶ್ಚಿತತೆಯಿಂದಾಗಿ ಬಿತ್ತನೆ ಮಾಡಿ ತಿಂಗಳಾಗಿದ್ದು, ಮಳೆರಾಯ ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ಪೇಠಾ ಆಲೂರ, ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪುರ, ಡಂಬಳ, ಬರದೂರ, ಮೇವುಂಡಿ, ಯಕ್ಲಾಸಪೂರ, ಡೋಣಿ, ಕದಾಂಪುರ, ಜತ್ಲಿ ಶಿರೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೂರ್ಯಕಾಂತಿ, ಈರುಳ್ಳಿ, ಮೆಕ್ಕೆಜೋಳ, ಹೆಸರು ಸೇರಿದಂತೆ ನಾನಾ ಬೆಳೆಗಳು ಬಾಡಿ ನೆಲಕಚ್ಚುತ್ತಿವೆ.
ಪ್ರತಿ ಎಕರೆಗೆ ಬ್ಯಾಂಕ್ ಸಾಲ, ಕೈಸಾಲದ ಮೂಲಕ ಹಣ ಪಡೆದು ಬಿತ್ತನೆ ಮಾಡಿ ಬೆಳೆ ಬರುತ್ತದೆ ಎನ್ನುವ ವಿಶ್ವಾಸದ ಮೂಲಕ ಸಾವಿರಾರು ರುಪಾಯಿ ಖರ್ಚು ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಮಳೆಯಾಗದೆ ಕಮರಿ ಹೋಗುತ್ತಿರುವ ಬೆಳೆಗಳನ್ನು ನೋಡಿ ಅಕ್ಷರಶಃ ಕಣ್ಣೀರು ಹಾಕುವಂತೆ ಆಗಿದೆ.
ಮುಂಡರಗಿ ತಾಲೂಕು ಡಂಬಳ ಹೋಬಳಿಯ ಭಾಗದ ವ್ಯಾಪ್ತಿಯಲ್ಲಿ ಶೇ. 90ರಷ್ಟು ಬಿತ್ತನೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ, ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಲಾಗಿದೆ. ಬೆಳೆ ಬೆಳೆಯುವ ಆರಂಭದ ದಿನಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರನ್ನು ಕಂಗಲಾಗುವಂತೆ ಮಾಡಿದೆ.
ಆರ್ಥಿಕ ಸಂಕಷ್ಟದಲ್ಲಿ ರೈತರು : ಮುಂಗಾರು ಹಂಗಾಮಿನ ಆರಂಭದ ದಿನಗಳಲ್ಲಿ ಮಳೆ ಸ್ವಲ್ಪ ಪ್ರಮಾಣದಲ್ಲಿ ಆದ ಹಿನ್ನೆಲೆಯಲ್ಲಿ ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿದರು. ಆದರೆ, ಸತತ ಒಂದು ತಿಂಗಳಿನಿಂದ ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗಿದ್ದರಿಂದ ಇತ್ತ ಬೆಳೆ ಬಾರದೆ ಇರುವ ಕಾರಣ ಸಾಲದ ಸುಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ತಿಂಗಳಿಂದ ಮಳೆಯಾಗದೆ ಬೆಳೆಗಳು ಬಾಡಿಹೋಗಿವೆ. ಈಗ ಮಳೆಯಾದರೂ ಉಪಯೋಗವಿಲ್ಲ. ಈ ವರ್ಷ ರೈತನ ಬದುಕು ದುಸ್ತರವಾಗಲಿದೆ. ಇನ್ನೊಂದೆಡೆ ಮೇಘಾ ಮತ್ತು ನೈಟಾಪೀಮ ಕಂಪನಿಗಳು ಸಾವಿರಾರು ಕೋಟಿ ಖರ್ಚುಮಾಡಿ ಹನಿ ನೀರಾವರಿ ಯೋಜನೆಯ ಕೆಲಸ ಮಾಡಿಸಿದ್ದು, ಅಕ್ಷರಶಃ ಹಣ ಪಡೆದುಕೊಳ್ಳುವವರೆಗೆ ಮಾತ್ರ ಈ ಯೋಜನೆ ಎನ್ನುವಂತಾಗಿದೆ. ಹನಿ ನೀರಾವರಿ ಯೋಜನೆ ಮೂಲಕ ನೀರು ಸಿಗುತ್ತದೆ ಎಂದು ಕಾದು ಕುಳಿತಿರುವ ರೈತರಿಗೂ ಆಘಾತ ತಂದಿದೆ.ಸಾಲ ಮಾಡಿ ಬಿತ್ತಿವಿ, ಇಷ್ಟೊತ್ತಿಗೆ ಬೆಳೆ ಬೆಳೆದು ನಿಲ್ಲಬೇಕಾಗಿತ್ತು. ಮಳೆ ಆಗದ್ದಕ್ಕ ಬೆಳಿ ಹಾಳಾಗಿ ಹೋಗ್ಯಾವು, ಹೊಟ್ಟಿ ಕಿವುಚಿತ್ ಎಂದು ವೆಂಕಟಾಪುರ ರೈತರಾದ ಮಾರತಂಡಪ್ಪ ಗುಡಿಹಿಂದಿನಮನಿ, ಹನಮಪ್ಪ ಪೂಜಾರ, ಮಲ್ಲಪ್ಪ ಹಳ್ಳಿ, ಬಸಪ್ಪ ಪೂಜಾರ ಹೇಳಿದರು.
ತಾಲೂಕಿನಲ್ಲಿ ತಿಂಗಳಿಂದ ಮಳೆಯಾಗಿಲ್ಲ. ಇದರಿಂದ ಬೆಳೆ ಹಾನಿಯಾಗಿರುವ ಬಗ್ಗೆ ರೈತರಿಂದ ದೂರುಗಳು ಬರುತ್ತಿದ್ದು, ಬೆಳೆಗಳ ರೋಗ ಬಾಧೆಗೆ ಪರಿಹಾರದ ಕುರಿತು ಪರಿಶೀಲನೆಗೆ ತಂಡ ಬರುತ್ತಿದ್ದು, ಮಳೆಯಾಗದಿರುವ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಮುಂಡರಗಿ ತಾಲೂಕು ಕೃಷಿ ಅಧಿಕಾರಿ ಪ್ರಾಣೇಶ ಎಂ. ಹೇಳಿದರು.