ಮಳೆ ಅವಾಂತರ: ಶಿವಮೊಗ್ಗದಲ್ಲಿ ಪ್ರವಾಹ ಭೀತಿ

KannadaprabhaNewsNetwork | Published : Jul 28, 2024 2:01 AM

ಸಾರಾಂಶ

ತುಂಗಾ ಜಲಾಶಯದಿಂದ 80 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಿದರೆ ನದಿಪಾತ್ರದಲ್ಲಿ ಪ್ರವಾಹದ ಸ್ಥಿತಿ ತಲೆದೋರಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಈಗಾಗಲೇ ಭರ್ತಿಯಾಗಿರುವ ತುಂಗಾ ಜಲಾಶಯದಿಂದ 80 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ತಗ್ಗಿ ಪ್ರದೇಶದಲ್ಲಿ ನೆರೆ ಭೀತಿ ಎದುರುರಾಗಿದೆ.

ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ ಭಾಗದ ಜಲಾನಯನ ಪ್ರದೇಶದಲ್ಲಿ ಭಾತಿ ಮಳೆ ಸುರಿಯುತ್ತಿರುವುದರಿಂದ ಇಲ್ಲಿನ ಗಾಜನೂರಿನ ತುಂಗಾ ಜಲಾಶಯಕ್ಕೆ ಈ ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಶನಿವಾರ ಜಲಾಶಯಕ್ಕೆ 75 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದ್ದು, 588.24 ಮೀಟರ್‌ , 3.24 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಹೀಗಾಗಿ ಜಲಾಶಯದ 22 ಕ್ರಸ್ಟ್‌ ಗೇಟ್‌ಗಳನ್ನು ತೆರೆದು ತುಂಗಾ ನದಿಗೆ 71 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ನಗರದಲ್ಲಿ ನೆರೆ ಭೀತಿ:

ತುಂಗಾ ಜಲಾಶಯದಿಂದ 80 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಿದರೆ ತುಂಗಾ ನದಿಪಾತ್ರದಲ್ಲಿ ಪ್ರವಾಹದ ಸ್ಥಿತಿ ತಲೆದೋರಿದೆ. ಹೊಸಹಳ್ಳಿ, ಸವಾಯಿಪಾಳ್ಯ, ಮದಾರಿಪಾಳ್ಯ, ನ್ಯೂ ಮಂಡ್ಲಿ, ಸೀಗೆಹಟ್ಟಿ ಭಾಗದಲ್ಲಿ ನೀರು ನುಗ್ಗುವ ಭಯ ಆವರಿಸಿದೆ. ಮದಾರಿ ಪಾಳ್ಯದಲ್ಲಿ ಮಸೀದಿಯ ಹಿಂಭಾಗದಲ್ಲಿ ಈಗಾಗಲೇ ಶೌಚಾಲಯ ಕೊಚ್ಚಿ ಹೋಗಿದ್ದು ಮತ್ತಷ್ಟು ಮಣ್ಣು ಕುಸಿಯುವ ಆತಂಕವಿದೆ.

ನಗರದ ಕುಂಬಾಗುಂಡಿ ಬೀದಿ, ಶಾಂತಿ ನಗರ, ಬಾಪೂಜಿ ನಗರ, ಸೀಗೆಹಟ್ಟಿ ಭಾಗದಲ್ಲೂ ಪ್ರದೇಶಕ್ಕೆ ನೀರು ನುಗ್ಗಲಿದೆ. ನೆರೆ ಭೀತಿ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯು ಮುಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಕೆಲವಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ರಸ್ತೆ ಹರಿದು ಬಂದ ನೀರು!:

ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಗಾಳಿ ಮಳೆಗೆ ಹಲವಡೆ ಹಾನಿಯಾಗಿವೆ. ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ತುಂಗಾ ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಗಾಜನೂರಿನ ತುಂಗಾ ಜಲಾಶಯದಿಂದ ಪ್ರಸ್ತುತ 84,003 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದೆ. ನದಿ ದಂಡೆ ಪಕ್ಕದ ಪ್ರದೇಶಗಳಿಗೆ ನೀರು ನುಗ್ಗಿದೆ. ನ್ಯೂ ಮಂಡ್ಲಿ ಬಳಿ ತುಂಗಾ ನದಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಕ್ಕಪಕ್ಕದ ಜಮೀನು, ದೇವಸ್ಥಾನ ಜಲಾವೃತವಾಗಿದೆ. ರಸ್ತೆ ಮೇಲೆ ನೀರು ನಿಂತಿರುವುದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.

45.50 ಸರಾಸರಿ ಮಳೆ:

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 45.50ಮಿ.ಮೀ ಮಳೆ ಸುರಿದಿದ್ದು, ಶಿವಮೊಗ್ಗದಲ್ಲಿ 21.60 ಮಿ.ಮೀ, ಭದ್ರಾವತಿ 23.60 ಮಿ.ಮೀ, ತೀರ್ಥಹಳ್ಳಿ 99.70 ಮಿ.ಮೀ, ಸಾಗರದಲ್ಲಿ 55 .50 ಮಿ.ಮೀ, ಶಿಕಾರಿಪುರ 22.90 ಮಿ.ಮೀ, ಸೊರಬದಲ್ಲಿ 31.90 ಮಿ.ಮೀ, ಹೊಸನಗರದಲ್ಲಿ 63.30 ಮಿ.ಮೀ ಮಳೆಯಾಗಿದೆ.ಪ್ರವಾಹ ಆತಂಕ: ಸ್ಥಳಾಂತರ ಶಾಸಕ ಸೂಚನೆಶಿವಮೊಗ್ಗ ನಗರ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಸೀಗೆಹಟ್ಟಿ ಭಾಗದಲ್ಲಿ ತುಂಗಾ ನದಿಯ ನೀರು ಮನೆಗಳ ಭಾಗಕ್ಕೆ ನುಗ್ಗಿದ್ದು, ಮಾಜಿ ಮೇಯರ್ ಹಾಗೂ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪನವರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳೀಯರ ಬೇರೆಡೆ ಸ್ಥಳಾಂತರ ಮಾಡಿ ಗಂಜಿ ಕೇಂದ್ರ ತೆರೆಯುವಂತೆ ಸೂಚಿಸಿದರು.

ಭದ್ರೆಯಲ್ಲಿ 178 ಅಡಿ ನೀರು:

ಭದ್ರಾ ಜಲಾಶಯಕ್ಕೆ ಶನಿವಾರ 49801 ಕ್ಯುಸೆಕ್ ನೀರು ಹರಿದು ಬಂದಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 178 ಅಡಿಗೆ ಏರಿಕೆಯಾಗಿದ್ದು, ಭರ್ತಿಗೆ ಇನ್ನೂ 8 ಅಡಿ ಮಾತ್ರ ಬಾಕಿ ಉಳಿದಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 61.82 ಟಿಎಂಸಿ ನೀರು ಸಂಗ್ರಹವಾಗಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನದಿಂದ ಏರಿಕೆಯಾಗುತ್ತಿದ್ದು, ಈಗಾಲೇ 1804.80 ಅಡಿಗೆ ಏರಿಕೆಯಾಗಿದೆ. ಶನಿವಾರ 74514 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದೆ.ತೀರ್ಥಹಳ್ಳಿಯಲ್ಲಿ ಹೆದ್ದಾರಿ ಕುಸಿತ

ತೀರ್ಥಹಳ್ಳಿ: ಪಟ್ಟಣ ಸಮೀಪ ಕುರುವಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಮೊದಲು ಕುಸಿದಿದ್ದ ಜಾಗದಲ್ಲೇ ಶುಕ್ರವಾರ ಮತ್ತೊಮ್ಮೆ ಧರೆ ಕುಸಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಧರೆ ಕುಸಿಯುತ್ತಿದ್ದು ಭಾರಿ ಗಾತ್ರದಲ್ಲಿ ಮಣ್ಣು ತಡೆಗೋಡೆ ಯನ್ನು ಮೀರಿ ಹೆದ್ದಾರಿಯ ಬದಿಗೆ ಬಿದ್ದಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿಲ್ಲವಾದರೂ ಸುರಕ್ಷತೆಯ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿ ಮಾರ್ಗವನ್ನು ಬಂದ್ ಮಾಡಲಾಗಿದೆ.

ಮರ ಬಿದ್ದು ಯುವಕ ಸಾವು:

ಚಲಿಸುತ್ತಿದ್ದ ಬೈಕಿನ ಮೇಲೆ ಅಕೇಶಿಯಾ ಮರ ಬಿದ್ದು ಯುವಕ ನೋರ್ವ ಸ್ಥಳದಲ್ಲೇ ಮೃತನಾದ ದಾರುಣ ಘಟನೆ ಶನಿವಾರ ತಾಲೂಕಿನ ಹಾದಿಗಲ್ಲು ಗ್ರಾಪಂ ವ್ಯಾಪ್ತಿಯ ಮೀನ್ಮನೆ ಗ್ರಾಮದಲ್ಲಿ ಸಂಭವಿಸಿದೆ.

ಸಚಿನ್ (24) ಮೃತನಾದ ದುರ್ದೈವಿ. ಕೋಣಂದೂರಿಗೆ ತೆರಳಿದ್ದ ಸಚಿನ್ ಮನೆಗೆ ಹಿಂದಿರುಗುವ ಸಂಧರ್ಭದಲ್ಲಿ ಈ ಅವಗಢ ಸಂಭವಿಸಿದೆ. ಊರಿಗೆ ಹೋಗುವ ಮಾರ್ಗದಲ್ಲಿ ಮರ ಬಿದ್ದು ವಿದ್ಯುತ್ ತಂತಿ ಬಿದ್ದಿದ್ದ ಕಾರಣ ಅಪಾಯದಿಂದ ತಪ್ಪಿಸಿಕೊಳ್ಳಲು ಬದಲಿ ಮಾರ್ಗದಲ್ಲಿ ಹೋಗುವ ವೇಳೆ ಮೈಮೇಲೆ ಮರ ಬಿದ್ದು ಸ್ಥಳ ದಲ್ಲೇ ಮೃತನಾಗಿದ್ದಾನೆ. ಹೊರಗೆ ಹೋಗಿದ್ದ ಸಚಿನ್ ಮನೆಗೆ ಬಾರದ್ದನ್ನು ಗಮನಿಸಿದ ಮನೆಯವರು ಹುಡುಕಿದಾಗ ಘಟನೆ ನಡೆದಿರುವುದು ತಿಳಿದು ಬಂದಿದೆ.ಚಂಪಕ ಸರಸಿ ಕೊಳಕ್ಕೆ ಬಾಗಿನ

ಆನಂದಪುರ : ಇತಿಹಾಸ ಪ್ರಸಿದ್ಧವಾದ ಕೆಳದಿ ರಾಜವಂಶ ನಿರ್ಮಿಸಿದಂತಹ ಮಲಂದೂರಿನ ಚಂಪಕ ಸರಸು ಕೊಳಕ್ಕೆ ಮಹಂತಿನ ಮಠ ಚಂಪಕ ಸರಸು ಟ್ರಸ್ಟ್ ವತಿಯಿಂದ ತುಂಬಿರುವ ಕೊಳಕ್ಕೆ ಗಂಗೆ ಪೂಜೆಯನ್ನು ನೆರವೇರಿಸಿ ಬಾಗಿನ ಸಮರ್ಪಣೆ ಮಾಡಿದರು. ಟ್ರಸ್ಟ್ ನ ಕಾರ್ಯದರ್ಶಿ ಕೆ.ಆರ್. ರಾಜು, ಸದಸ್ಯರಾದ ರಾಜೇಂದ್ರ ಗೌಡ, ಶಿವಮೂರ್ತಿ, ಹಾಗೂ ಇತರರು ಉಪಸ್ಥಿತರಿದ್ದರು. ಗಾಳಿ ಮಳೆಗೆ ಕೊಟ್ಟಿಗೆ ಕುಸಿತ

ರಿಪ್ಪನ್‌ಪೇಟೆ: ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿಮಳೆಯಿಂದಾಗಿ ಸಮೀಪದ ಕೆರೆಹಳ್ಳಿ ಶಿವಾಜಿರಾವ್ ಬಿನ್ ಪುಣ್ಣೋಜಿರಾವ್ ಎಂಬುವರ ಜಾನುವಾರು ಕೊಟ್ಟಿಗೆ ಕುಸಿದು ಬಿದ್ದು ಕೊಟ್ಟೆಗೆಯಲ್ಲಿದ್ದ ಎಮ್ಮೆವೊಂದು ಸ್ಥಳದಲ್ಲಿ ಸಾವನ್ನಪ್ಪಿದ್ದು ಉಳಿದ ನಾಲ್ಕು ಐದು ಎಮ್ಮೆಗಳಿಗೆ ತೀವ್ರವಾದ ಗಾಯಗೊಂಡ ಘಟನೆ ನಡೆದಿದೆ.

ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾದ ಎಮ್ಮೆಗಳು ಮಧ್ಯರಾತ್ರಿ ಭಾರಿ ಗಾಳಿ ಮಳೆಯಿಂದಾಗಿ ಕೊಟ್ಟಿಗೆ ಕುಸಿದು ಬಿದ್ದಿದ್ದು ಶಬ್ದ ಕೊಟ್ಟಿಗೆಯಲ್ಲಿದ್ದ ಎಮ್ಮೆಗಳು ಕೂಗಾಟ ಕೇಳಿ ಹೊರಗೆ ಓಡಿಬಂದು ನೋಡಲಾಗಿ ೮ ಎಮ್ಮೆಗಳ ಇದ್ದು ಆವುಗಳನ್ನು ಬಿಚ್ಚಿ ಹೊರ ಓಡಿಸಲು ಪ್ರಯತ್ನಿಸಲಾಗಿ ನಾಲ್ಕು ಐದು ಎಮ್ಮೆಗಳಿಗೆ ತೀವ್ರಗಾಯವಾಗಿದ್ದು, ಒಂದು ಎಮ್ಮೆ ಸಾವನ್ನಪ್ಪಿದೆ ಎಂದು ಶಿವಾಜಿರಾವ್ ತಿಳಿಸಿದರು.

Share this article