ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗದೆ ರೈತರು ಬಿತ್ತನೆ ಮಾಡಿದ ಬೆಳೆಗಳು ತೇವಾಂಶ ಕೊರತೆಯಿಂದ ಬಿಸಲಿನ ತಾಪಕ್ಕೆ ಒಣಗಿವೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿಯೂ ವಾಡಿಕೆ ಮಳೆ ಇಲ್ಲ । ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಆತಂಕ
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದ
ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗದೆ ರೈತರು ಬಿತ್ತನೆ ಮಾಡಿದ ಬೆಳೆಗಳು ತೇವಾಂಶ ಕೊರತೆಯಿಂದ ಬಿಸಲಿನ ತಾಪಕ್ಕೆ ಒಣಗಿವೆ.
ಈ ಭಾಗದಲ್ಲಿ ಮಲಪ್ರಭಾ ಜಲಾಶಯ ಕಾಲುವೆಗಳಿಗೆ ಹೊಂದಿಕೊಂಡಿರುವ ನೀರಾವರಿ ಜಮೀನುಗಳನ್ನು ನಂಬಿಕೊಂಡು ಬದುಕುವ ರೈತರಿಗೆ ಈ ವರ್ಷ ಮಳೆ ಕೈಕೊಟ್ಟಿದೆ. ಮತ್ತೊಂದು ಕಡೆ ಈ ಭಾಗಕ್ಕೆ ನೀರು ಪೂರೈಕೆ ಮಾಡುವ ಜಲಾಶಯ ಮೇಲ್ಭಾಗದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಡಿಕೆ ಮಳೆ ಆಗದ್ದರಿಂದ ಜಲಾಶಯಕ್ಕೆ ನೀರು ಸಂಗ್ರಹವಿಲ್ಲದೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆಯ 13 ತಾಲೂಕಿನ ರೈತರ ಕಷ್ಟ ಹೇಳ ತೀರದಾಗಿದೆ.
ಘೋಷಣೆಯಾಗದ ಬರ:
ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು ಜೂನ್ ತಿಂಗಳಿಂದ ಅಲ್ಪಸ್ವಲ್ಪ ಮಳೆಗೆ ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ತೊಗರಿ, ಈರಳ್ಳಿ ಮುಂತಾದ ಬೆಳೆ ಬಿತ್ತನೆ ಮಾಡಿದ್ದರು. ಜೂನ್ ನಂತರ ಮಳೆ ಈ ಭಾಗದಲ್ಲಿ ಆಗದ್ದರಿಂದ ಸದ್ಯ ಎಲ್ಲಾ ಬೆಳೆಗಳು ತೇವಾಂಶ ಕೊರತೆಯಿಂದ ಬಿಸಿಲಿನ ತಾಪಕ್ಕೆ ಒಣಗಿವೆ. ತಾಲೂಕಿಗೆ ಉಸ್ತುವಾರಿ ಸಚಿವ ಬಸರಾಜ ರಾಯರಡ್ಡಿ ಮತ್ತು ಜಿಲ್ಲೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಂದು ಬರ ಪರಿಶೀಲನೆ ಮಾಡಿ ಹೋದರೂ ಸಹ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಗಾಲವೆಂದು ಸರ್ಕಾರ ಘೋಷಣೆ ಮಾಡಿ ಉಳಿದೆಡೆ ಸರ್ಕಾರ ಅನ್ಯಾಯ ಮಾಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಬರಗಾಲ ಘೋಷಿಸುವಂತೆ ಆಗ್ರಹಿಸಿ ರೈತರು ನರಗುಂದದಲ್ಲಿ ಸೆ.12ರಂದು ಬಂದ್ ಕೂಡ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಮೌನ ವಹಿಸಿದೆ.
ಜಲಾಶಯದಲ್ಲಿ ನೀರಿಲ್ಲ:
ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆಯ 13 ತಾಲೂಕಿನ ರೈತರಿಗೆ ಜಲಾಶಯದಿಂದ ಕಾಲುವೆ ಮೂಲಕ ನೀರು ಪೂರೈಕೆ ಮಾಡಬೇಕೆಂದರೆ ಈ ವರ್ಷ ಜಲಾಶಯದಲ್ಲಿ ಕೇವಲ 24 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಮೇಲಾಗಿ ಈಗಾಗಲೇ ಕುಡಿಯಲೆಂದು 3 ಟಿಎಂಸಿ ನೀರು ಬಿಡಲಾಗಿದೆ. ಆದರೆ ಆ ನೀರು ನರಗುಂದ, ಬದಾಮಿ, ರೋಣ ತಾಲೂಕುಗಳಿಗೆ ಮುಟ್ಟದ್ದರಿಂದ ಸದ್ಯ ಈ ಭಾಗದಲ್ಲಿ ನೀರಿನ ಹಾಹಕಾರ ಪ್ರಾರಂಭವಾಗಿದೆ.
ಬಿತ್ತನೆ ವಿವರ:
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು 52,000 ಸಾವಿರ ಎಕರೆಯಲ್ಲಿ ಹೆಸರು, 27,375 ಎಕರೆಯಲ್ಲಿ ಗೋವಿನ ಜೋಳ, 5626 ಎಕರೆಯಲ್ಲಿ ಬಿ.ಟಿ. ಹತ್ತಿ, 126 ಎಕರೆಯಲ್ಲಿ ಉದ್ದು, 688 ಎಕರೆಯಲ್ಲಿ ಸೂರ್ಯಕಾಂತಿ, 90 ಎಕರೆಯಲ್ಲಿ ತೊಗರಿ, 75 ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ರೈತರ ಆಕ್ರೋಶ:
ಕಳೆದ ನಾಲ್ಕು ತಿಂಗಳಿಂದ ತಾಲೂಕಿನಲ್ಲಿ ಮಳೆ ಇಲ್ಲದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದರೂ ಸಹ ಈ ಭಾಗದ ಸಂಸದ ಪಿ.ಸಿ. ಗದ್ದಿಗೌಡರ ಒಂದು ಬಾರಿಯೂ ಈ ಕ್ಷೇತ್ರಕ್ಕೆ ಭೇಟಿ ನೀಡದಿರುವುದು ವಿಷಾದನೀಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.