ಪ್ರೋಟೀನ್ ಸಮೃದ್ಧ ಆಹಾರದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಚೇರಂಬಾಣೆ ವೃತ್ತದಲ್ಲಿ ಆಯೋಜಿಸಲಾದ ಪ್ರೋಟೀನ್ ಸಮೃದ್ಧ ಆಹಾರ ಅಭಿಯಾನ
ಮಡಿಕೇರಿ: ಮಗು ಏನು ತಿನ್ನುತ್ತದೆ ಮತ್ತು ಹೇಗೆ ಕಲಿಯುತ್ತದೆ ಎಂಬುದರ ನಡುವೆ ಅವಿಭಾಜ್ಯ ಸಂಬಂಧವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಮಂಗಲ ಜಿ. ಹಿರೇಮನಿ ಹೇಳಿದರು.
ಪ್ರೋಟೀನ್ ಸಮೃದ್ಧ ಆಹಾರದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಚೇರಂಬಾಣೆ ವೃತ್ತದಲ್ಲಿ ಆಯೋಜಿಸಲಾದ ಪ್ರೋಟೀನ್ ಸಮೃದ್ಧ ಆಹಾರ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಕ್ಕಳ ಪೋಷಣೆಯ ಮಹತ್ವದ ಕುರಿತು ಪೋಷಕರಲ್ಲಿ ಅರಿವು ಮೂಡಿಸುವ ಅಗತ್ಯವನ್ನು ವಿವರಿಸಿದರು.
ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಳಸಿ ವಿವಿಧ ಆಹಾರಗಳ ತಯಾರಿಕೆಯ ಪ್ರಾತ್ಯಕ್ಷತೆ ನಡೆಸಿ, ಕಡಿಮೆ ವೆಚ್ಚದಲ್ಲಿ ಪೌಷ್ಟಿಕ ಹಾಗೂ ಪ್ರೋಟೀನ್‌ಯುಕ್ತ ಆಹಾರವನ್ನು ತಯಾರಿಸುವ ಕುರಿತು ಅರಿವು ಮೂಡಿಸಲಾಯಿತು. ಜಾಗೃತಿ ಚಟುವಟಿಕೆ: ಪ್ರೋಟೀನ್ ಸಮೃದ್ಧ ಆಹಾರಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಅಲ್ಲದೆ, ಅಭಿಯಾನದ ಅಂಗವಾಗಿ ಪ್ರೋಟೀನ್ ಸಮೃದ್ಧ ಆಹಾರ ತಯಾರಿಕಾ ಸ್ಪರ್ಧೆಯನ್ನೂ ಆಯೋಜಿಸಲಾಯಿತು.ಜಿಲ್ಲಾ ಸಂಯೋಜಕರಾದ ನವ್ಯ ಹಾಗೂ ಕಾವ್ಯ ಅವರು ಬೇಟಿ ಬಚಾವೋ, ಬೇಟಿ ಪಢಾವೋ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಕುರಿತು ಮಾಹಿತಿ ನೀಡಿದರು.ಗರ್ಭಿಣಿಯರು, ಬಾಣಂತಿಯರು, ಫಲಾನುಭವಿಗಳು ಹಾಗೂ ಚೇರಂಬಾಣೆ ವೃತ್ತದ 31 ಗ್ರಾಮಗಳ ಅಂಗನವಾಡಿ ಸಹಾಯಕಿಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.