ಕನ್ನಡಪ್ರಭ ವಾರ್ತೆ ಕಲಬುರಗಿ
ರೈತ ಸಮೂಹ ಮಳೆ ಅದ್ಯಾವಾಗ ಬಿಡುವು ನೀಡುವುದೋ ಎಂಬ ನಿರೀಕ್ಷೆಯಲ್ಲಿದ್ದಾರೆ. ಏಕೆಂದರೆ ಈಗಾಗಲೇ ಹೆಸರು, ಉದ್ದು, ತೊಗರಿ, ಅಲಸಂದಿ ಸೇರಿದಂತೆ ಬಿತ್ತನೆಯಾಗಿರುವ ತರಹೇವಾರಿ ಫಸಲು ನಳನಳಿಸುತ್ತಿದೆ. ತುಂತುರು ಮಳೆ ಈ ಫಸಲಿಗೆ ತುಂಬ ಅನುಕೂಲವಾಗಿದೆ. ಆದರೆ ಕಳೆ ಕೀಳುವ, ಎಡೆ ಹೊಡೆಯುವ ಸೇರಿದಂತೆ ಹಲವಾರು ಕೃಷಿ ಕೆಲಸಗಳಿಗೆ ಮಳೆಯೇ ಅಡ್ಡಿಯಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ.
ಬಿತ್ತಿ ವಾರವಾಗಿತ್ತು. ಮಳೆ ಬರುತ್ತಿರೋದು ನಮ್ಮ ಫಸಲಿಗೆ ಅನುಕೂಲವಾಗಿದೆ. ಆದರೆ ಬೆಳೆ ಸಂರಕ್ಷಣೆಯ ಮುಂದಿನ ಕೃಷಿ ಚಟುವಟಿಕೆಗಳಿಗೆ ಮಳೆ ನಿಂತರಷ್ಟೆ ದಾರಿ, ಇಲ್ಲದೆ ಹೋದರೆ ತೊಂದರೆ ಕಾಡಲಿದೆ ಎನ್ನುತ್ತಿರುವ ರೈತರು ಮಳೆ ನಿಲ್ಲೋದು ಯಾವಾಗ ಎಂದು ಮುಗಿಲು ನೋಡುತ್ತ ಕುಳಿತುಕೊಂಡಿದ್ದಾರೆ.ಇತ್ತ ಮುಸಲಧಾರೆಯಂತೆ ಮಲೆ ಜಿಟಿಜಿಟಿ ಸುರಿಯುತ್ತಿದೆ. ಜಿಲ್ಲಾದ್ಯಂತ ದಟ್ಟ ಮೋಡ ಕವಿದ ವಾತಾವರಣವಿದೆ, ಮಳೆ ಬರೋದು, ನಿಲ್ಲೋದು ಮಾಡುತ್ತಿದೆ. ಇದರಿಂದಾಗಿ ರೈತರಿಗೆ ಹೊಲಕ್ಕೆ ಹೋಗಬೇಕೋ, ಬೇಡವೋ ಗೊತ್ತಾಗದೆ ಮಳೆ ಸಂಪೂರ್ಣ ನಿಲ್ಲುವವರೆಗೂ ಕಾಯುವಂತಾಗಿದೆ.
ಆಳಂದ, ಅಫಜಲ್ಪುರ, ಚಿತ್ತಾಪುರ, ಕಲಬುರಗಿ ಭಾಗದಲ್ಲಿ ಬಿತ್ತನೆಯಾಗಿರುವ ಉದ್ದು, ಹೆಸರು, ಸೋಯಾ ಬೆಳೆಗೆ ಹೇನಿನ ಬಾಧೆ ಆವರಿಸಿದ್ದು ಬೆಳೆ ಉಳಿಸಿಕೊಳ್ಳಲು ಮತ್ತು ಬೆಳೆಯಲ್ಲಿನ ಕಳೆ ಅಳಿಸಲು ಔಷಧಿ ಸಿಂಪರಣೆಗೆ ಆಗಾಗಾ ಸುರಿಯುತ್ತಿರುವ ತುಂತುರ ಮಳೆ ಅಡ್ಡಿಯಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ.
ಬೆಳೆವಿಮೆ ನೋಂದಣಿಗೆ ಜು. 31 ಕೊನೆಯ ದಿನ: 2024- 25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿಯಲ್ಲಿ ಹೆಸರು ಬೆಳೆಗೆ ಜು. 15 ಹಾಗೂ ಉದ್ದು ತೊಗರಿ ಮತ್ತು ಇತರೆ ಬೆಳೆಗಳಿಗೆ ವಿಮಾ ನೋಂದಣಿಗೆ ಜು.31 ಕೊನೆ ದಿನವಾಗಿದೆ.