ಸಚಿವರ ಬರ ಪರಿಶೀಲನೆಗೆ ವರುಣನ ಅಡ್ಡಿ

KannadaprabhaNewsNetwork |  
Published : Nov 07, 2023, 01:31 AM IST
ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಪಂ ಕಚೇರಿಯಲ್ಲಿ ಸಚಿವ ಸಂತೋಷ ಲಾಡ್‌ ರೈತರೊಂದಿಗೆ ಸಭೆ ನಡೆಸಿದರು. | Kannada Prabha

ಸಾರಾಂಶ

ಬರಗಾಲ ಘೋಷಣೆಯಾಗಿ ತಿಂಗಳ ಬಳಿಕ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಹಮ್ಮಿಕೊಂಡಿದ್ದ ಬರ ಪರಿಶೀಲನೆಗೆ ವರುಣನ ಅಡ್ಡಿಯಾಯಿತು. ಪರಿಣಾಮ ಸಚಿವರು ಬರ ವೀಕ್ಷಣೆಯನ್ನು ಮೊಟಕುಗೊಳಿಸಿ ಕುಸುಗಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಉಳಿದುಕೊಂಡರು.

ಕನ್ನಡಪ್ರಭ ವಾರ್ಕೆ ಹುಬ್ಬಳ್ಳಿ

ಬರಗಾಲ ಘೋಷಣೆಯಾಗಿ ತಿಂಗಳ ಬಳಿಕ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಹಮ್ಮಿಕೊಂಡಿದ್ದ ಬರ ಪರಿಶೀಲನೆಗೆ ವರುಣನ ಅಡ್ಡಿಯಾಯಿತು. ಪರಿಣಾಮ ಸಚಿವರು ಬರ ವೀಕ್ಷಣೆಯನ್ನು ಮೊಟಕುಗೊಳಿಸಿ ಕುಸುಗಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಉಳಿದುಕೊಂಡರು.

ಸಚಿವರು ಕುಸುಗಲ್ಲ ಗ್ರಾಮದ ಶಿವಾನಂದ ಬೆಂಗೇರಿ, ಶಿರಗುಪ್ಪಿಯ ಚನ್ನಬಸಪ್ಪ ಪುಟ್ಟಣ್ಣವರ ಹೊಲದಲ್ಲಿ ಬೆಳೆ ಪರಿಶೀಲಿಸಲಿದ್ದರು. ಕುಂದಗೋಳ ತಾಲೂಕಿಗೆ ಕುಡಿಯುವ ನೀರು ಪೂರೈಕೆಗೆ ಕಿರೇಸೂರ ಗ್ರಾಮದಲ್ಲಿ ನೀರು ಸಂಗ್ರಹಿಸಿದ ಕೆರೆಗಳ ವೀಕ್ಷಣೆ, ಅದೇ ರೀತಿ ನರೇಗಾ ಯೋಜನೆಯಡಿ ಇಂಗಳಹಳ್ಳಿ ರಸ್ತೆಗೆ ಹೊಂದಿಕೊಂಡ ಕಾಲುವೆ ಹೂಳೆತ್ತುವ ಹಾಗೂ ಕೃಷಿ ಹೊಂಡ ಕಾಮಗಾರಿಯನ್ನು ವೀಕ್ಷಿಸಲು ಉದ್ದೇಶಿಸಿದ್ದರು. ಆದರೆ, ನಿಗದಿತ ಮೂರು ಗಂಟೆಗೆ ವೀಕ್ಷಣೆಗೆ ತೆರಳುವ ಹಂತದಲ್ಲೇ ಕುಸುಗಲ್ಲ ಗ್ರಾಮದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯದ ವರೆಗೆ ಬಿರುಸಿನ ಮಳೆ ಸುರಿಯಿತು.

ಬರ ಪರಿಶೀಲನೆ ರದ್ದಾದ ಕಾರಣ ಲಾಡ್ ಅವರು ಕುಸುಗಲ್ಲ‌ ಗ್ರಾಮ ಪಂಚಾಯಿತಿ‌ ಕಚೇರಿಯಲ್ಲಿ ಸಭೆ ನಡೆಸಿ ರೈತರ ಅಹವಾಲು ಆಲಿಸಿದರು. ಈ ವೇಳೆ 2022-23ನೇ ಸಾಲಿನ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡುವ ಜತೆಗೆ ಪ್ರಸ್ತುತ ವರ್ಷ ಮಧ್ಯಂತರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ರೈತ ಟಿ.ಎಸ್. ಚವನಗೌಡ ಮಾತನಾಡಿ, ರೈತರು ಶೇ. 10, ಸರ್ಕಾರ ಶೇ. 90ರಷ್ಟು ಪ್ರೀಮಿಯಂ ತುಂಬುತ್ತಾರೆ. ಆದರೆ, ವಿಮಾ‌ ಕಂಪನಿಯವರು ರೈತರಿಗೆ ಶೇ. 10ರಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರೈತರಿಗಿಂತಲೂ ವಿಮಾ ಕಂಪನಿಯವರೇ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ತೀವ್ರ ಬರ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರಕ್ಕೆ ಮೆಣಸಿನಕಾಯಿ ಬೆಳೆ‌ ಸೇರಿಸಬೇಕು. ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಹೆಸರು ಬೆಳೆ ಹಾನಿಗೆ ಪರಿಹಾರ ನೀಡಲಾಗಿದೆ. ಆದರೆ, ಈ ವರೆಗೂ ಧಾರವಾಡ ಜಿಲ್ಲೆಯಲ್ಲಿ ಹೆಸರು ಬೆಳೆಗೆ ಪರಿಹಾರ ಬಂದಿಲ್ಲ. ಹಾಗಾಗಿ, ಈ ಬಾರಿಯಾದರೂ ಹೆಸರು ಬೆಳೆದು ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಅಧಿಕಾರಿಗಳು, ಗೋವಿನಜೋಳ, ಈರುಳ್ಳಿ, ಭತ್ತ, ಮೆಣಸಿನಕಾಯಿ ಬೆಳೆಗೆ ಮಧ್ಯಂತರ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಪಶು ವೈದ್ಯರಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ವೈದ್ಯರನ್ನು ನಿಯೋಜಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಂತೋಷ ಲಾಡ್, ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ತುರ್ತು ಇದ್ದರೆ ರೈತರು 1962 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಂಚಾರಿ ಪಶು ಚಿಕಿತ್ಸಾಲಯದ ವಾಹನ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಲಿದೆ ಎಂದರು.

ರೈತ ವಿ.ಎಸ್‌. ಕೆಂಚನಗೌಡರ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರದಿಂದಾಗಿ ರೈತರು, ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದೇ, ತಿನ್ನಲು ಮೇವು ಇಲ್ಲದೇ ಸಂಕಷ್ಟದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಹೊಲದಲ್ಲಿ ಬಿತ್ತನೆ ಮಾಡಿದ ಬೆಳೆಗಳೆಲ್ಲ ಒಣಗಿ ಹೋಗಿರುವುದನ್ನು ನೋಡಿದರೆ ಕಣ್ಣೀರು ಬರುತ್ತಿದೆ. ಹೊಲದಲ್ಲಿ ಕೆಲಸವಿಲ್ಲದೇ ಇಂದು ಅನೇಕ ರೈತರು ನಗರ ಪ್ರದೇಶಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಪರಿಸ್ಥಿತಿ ಬಿಚ್ಚಿಟ್ಟರು.

ಜಿಲ್ಲೆಗೆ ಕೇವಲ‌ ₹12 ಕೋಟಿ ಬೆಳೆ ಪರಿಹಾರ ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ 7 ತಾಲೂಕುಗಳನ್ನೂ ಬರ ಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಈ ಹಣ ಸಾಕಾಗುವುದಿಲ್ಲ. ಪರಿಹಾರದ ಮೊತ್ತವನ್ನು ಹೆಚ್ಚಿಸಲು ಸಚಿವರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಬಳಿಕ ಬರ ಪರಿಶೀಲನೆಯನ್ನು ಮೊಟಕುಗೊಳಿಸಿ ಮರಳಿ ಹುಬ್ಬಳ್ಳಿಗೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದರು.

ಶಾಸಕ ಎನ್.ಎಚ್. ಕೋನರೆಡ್ಡಿ, ಗ್ರಾಮೀಣ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಅಧಿಕಾರಿಗಳು, ಗ್ರಾಮದ ರೈತರು ಇದ್ದರು.

ಗಿರ್ಮಿಟ್‌ ಸವಿದ ಸಚಿವರು:

ಸಚಿವ ಸಂತೋಷ ಲಾಡ್‌ ಅವರು ಬರ ಪರಿಶೀಲನೆಗೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮಕ್ಕೆ ತೆರಳಿದ ವೇಳೆ ಅರ್ಧಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು. ಇದರಿಂದಾಗಿ ಸಚಿವರು ಗ್ರಾಪಂ ಕಚೇರಿಯಲ್ಲಿಯೇ ಕಾಲ ಕಳೆಯುವಂತಾಯಿತು. ಈ ವೇಳೆ ಸಚಿವರು ಹಾಗೂ ಶಾಸಕರು ಚುರುಮುರಿ ಗಿರ್ಮಿಟ್ ಸವಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಾಕಷ್ಟು ಕೊಡುಗೆ
ತೆರಿಗೆ ವಂಚಿಸಿದ 10 ಸಾವಿರ ಆಸ್ತಿ ಡ್ರೋನ್‌ ಮೂಲಕ ಪತ್ತೆ