ಮಳೆ ಕಣ್ಣಾಮುಚ್ಚಾಲೆ: ಬಿತ್ತನೆ ಪ್ರಮಾಣ ಭಾರೀ ಕುಸಿತ

KannadaprabhaNewsNetwork | Published : Aug 12, 2024 1:10 AM

ಸಾರಾಂಶ

ಶಿಡ್ಲಘಟ್ಟ ತಾಲೂಕಿನಲ್ಲಿ ಈ ವರ್ಷದಲ್ಲಿ ಒಟ್ಟು 15,475 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೂ ಆಗಸ್ಟ್ ಮೊದಲ ವಾರದ ಅಂತ್ಯಕ್ಕೆ ಕೇವಲ 3,946 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದು ಒಟ್ಟಾರೆ ತಾಲೂಕಿನಲ್ಲಿ ಶೇ.25.50 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಕಳೆದ ವರ್ಷ ಬರದಿಂದ ಕಂಗೆಟ್ಟಿದ್ದ ರೈತರಿಗೆ ಈ ಬಾರಿ ಕೂಡ ತಾಲೂಕಿನಾದ್ಯಂತ ಆವರಿಸಿರುವ ಮಳೆಯ ಕಣ್ಣಾಮುಚ್ಚಾಲೆ ಆತಂಕವನ್ನು ತಂದೊಡ್ಡಿದೆ. ಮುಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟಿರುವ ಪರಿಣಾಮ ಬಿತ್ತನೆ ಪ್ರಮಾಣದಲ್ಲಿ ನಿರೀಕ್ಷಿತ ಸಾಧನೆ ಕಾಣದೆ ಭಾರಿ ಕುಸಿತ ಕಂಡಿದ್ದು, ತಾಲೂಕಿನ ರೈತರನ್ನು ಚಿಂತೆಗೀಡು ಮಾಡಿದೆ.ಶೇ.25.50 ರಷ್ಟು ಗುರಿ ಸಾಧನೆ ತಾಲೂಕಿನಲ್ಲಿ ಈ ವರ್ಷದಲ್ಲಿ ಒಟ್ಟು 15,475 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೂ ಆಗಸ್ಟ್ ಮೊದಲ ವಾರದ ಅಂತ್ಯಕ್ಕೆ ಕೇವಲ 3,946 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದು ಒಟ್ಟಾರೆ ತಾಲೂಕಿನಲ್ಲಿ ಶೇ.25.50 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಈ ವರ್ಷ ತಾಲೂಕಿನಲ್ಲಿ 3,946 ಹೆಕ್ಟೇರ್ ಪೈಕಿ 135 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಗುರಿ ಇದ್ದರೂ ಇಲ್ಲಿವರೆಗೂ ಯಾವುದೇ ಪ್ರಗತಿ ಕಂಡಿಲ್ಲ. 9,700 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಇದ್ದರೂ ಇಲ್ಲಿವರೆಗೂ ಕೇವಲ 1,926 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ.

ಹೈ.ಮು.ಜೋಳ ಬಿತ್ತನೆ ಪ್ರದೇಶ ಇಳಿಕೆ

ಹೈ.ಮು.ಜೋಳ 3,760 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದರೂ ಇಲ್ಲಿವರೆಗೂ ಕೇವಲ 1,127 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಇನ್ನೂ 195 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಇದ್ದರೂ 1423 ಹೆಕ್ಟೇರ್ ಪ್ರದೇಶದಲ್ಲಿ ನಡೆದಿದೆ. ಅವರೆ 140 ಹೆಕ್ಟೇರ್ ಗುರಿ ಇದ್ದರೂ ಇನ್ನು ಬಿತ್ತನೆ ಆಗಿಲ್ಲ. ಅವರೆ 150 ಹೆಕ್ಟೇರ್ ಪೈಕಿ 45 ಹೆಕ್ಟೇರ್ನಲ್ಲಿ ನಡೆದಿದೆ. ಅಲಸಂದೆ 20 ಹೆಕ್ಟೇರ್ ಪೈಕಿ 5 ಹೆಕ್ಟೇರ್ ಪ್ರದೇಶದಲ್ಲಿ ನಡೆದಿದೆ. ನೆಲಗಡಲೆ 1,167 ಹೆಕ್ಟೇರ್ ಗುರಿ ಪೈಕಿ 485 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಡೆದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಕೊರತೆ

ಕಳೆದ ವರ್ಷ ತಾಲೂಕಿನಲ್ಲಿ ಮಳೆ ಕೊರತೆಯಿಂದ ಬರ ಆವರಿಸಿ ಸುಮಾರು 10 ಸಾವಿರಕ್ಕೂ ಅಧಿಕ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬೆಳೆ ರೈತರ ಕೈಗೆ ಸಿಕ್ಕಿರಲಿಲ್ಲ. ಈ ವರ್ಷ ಕೂಡ ಮಳೆಯ ಕೊರತೆಯಿಂದ ಮತ್ತೆ ತಾಲೂಕಿನ ರೈತರಿಗೆ ಬರದ ಆತಂಕ ಎದುರಾಗಿದೆ.

Share this article