ಮುನಿಸಿಕೊಂಡ ಮಳೆ, ಬಸವಳಿದ ಬೆಳೆ !

KannadaprabhaNewsNetwork |  
Published : Jul 05, 2026, 03:00 AM IST
ಬಾಡುತ್ತಿರುವ ಬೆಳೆ | Kannada Prabha

ಸಾರಾಂಶ

ಆರಂಭದಲ್ಲಿ ಅಬ್ಬರಿಸಿ ಭರವಸೆ ಮೂಡಿಸಿದ್ದ ಮುಂಗಾರು ಮಳೆ ಬಳಿಕ ಮಾಯವಾಗಿದ್ದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ ಕೊನೆಯ ವಾರ, ಜೂನ್‌ ಮೊದಲ ವಾರದಲ್ಲಿ ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗಿದ್ದರಿಂದ ಹರ್ಷಗೊಂಡು ರೈತರು ಬಿತ್ತನೆ ಮಾಡಿದ್ದರು. ಬಿತ್ತನೆ ಬಳಿಕ 20 ದಿನ ಕಳೆದರೂ ಮಳೆರಾಯನ ದರ್ಶನ ಇಲ್ಲದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾರಾಯಣ ಜಿ. ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಆರಂಭದಲ್ಲಿ ಅಬ್ಬರಿಸಿ ಭರವಸೆ ಮೂಡಿಸಿದ್ದ ಮುಂಗಾರು ಮಳೆ ಬಳಿಕ ಮಾಯವಾಗಿದ್ದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ ಕೊನೆಯ ವಾರ, ಜೂನ್‌ ಮೊದಲ ವಾರದಲ್ಲಿ ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗಿದ್ದರಿಂದ ಹರ್ಷಗೊಂಡು ರೈತರು ಬಿತ್ತನೆ ಮಾಡಿದ್ದರು. ಬಿತ್ತನೆ ಬಳಿಕ 20 ದಿನ ಕಳೆದರೂ ಮಳೆರಾಯನ ದರ್ಶನ ಇಲ್ಲದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜೂನ್‌ ಆರಂಭದಲ್ಲೇ ಬಿತ್ತನೆ ಕಾರ್ಯ ಶುರುವಾಗಿದ್ದರಿಂದ ರೈತರು ಖುಷಿಯಲ್ಲೇ ಬಿತ್ತನೆ ಮುಗಿಸಿ ನಿರಾಳಗೊಂಡಿದ್ದರು. ಆದರೆ, ರೈತರ ಆ ಖುಷಿ ಬಹಳಷ್ಟು ದಿನ ಉಳಿಯಲಿಲ್ಲ. ಬಿತ್ತನೆ ಮಾಡಿದ ಭತ್ತ, ಗೋವಿನಜೋಳ, ಶೇಂಗಾ, ಸೋಯಾಬೀನ್, ಹತ್ತಿ ಸೇರಿ ಇನ್ನಿತರ ಬೀಜ ಮೊಳಕೆಯೊಡೆದು ಮೇಲೆ ಬಂದು ಮುಗಿಲು ನೋಡುತ್ತಿದೆ. ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ ಮಳೆ ದಾಟಿ ಹೋಗಿವೆ. ರೋಹಿಣಿ ಆರಂಭದಲ್ಲಿ ಅಲ್ಪಮಟ್ಟಿಗೆ ಭರವಸೆ ಮೂಡಿಸಿತ್ತು. ಮೃಗಶಿರಾ ರೈತರಿಗೆ ದರ್ಶನವನ್ನೇ ನೀಡಲಿಲ್ಲ. ಆರಿದ್ರಾ ಆದರೂ ಅಬ್ಬರಿಸುತ್ತದೆಂದು ನಂಬಿದ್ದ ರೈತರಲ್ಲಿ ನಿರಾಸೆಯಾಗಿದೆ. ಮಳೆ ಬರುವ ಆಶಾದಾಯಕ ವಾತಾವರಣವಿಲ್ಲದೆ ರೈತ ಚಿಂತಿತನಾಗಿದ್ದಾನೆ. ಭೂಮಿಯಲ್ಲಿ ಬೆಳೆಯುತ್ತಿರುವ ಪೈರು ಒಣಗುತ್ತಿರುವುದನ್ನು ನೋಡಲಾಗದೆ ಜಮೀನಿನತ್ತ ಮುಖ ಮಾಡಲಾಗದ ಅಸಾಯಯಕ ಸ್ಥಿತಿಗೆ ತಲುಪಿದ್ದಾನೆ. ಜುಲೈ 5ರಿಂದ ಪುನರ್ವಸು ಮಳೆ ಆರಂಭವಾಗಲಿದ್ದು, ಈ ಮಳೆಯಾದರೂ ಕೈ ಹಿಡಿದರೆ ಮಾತ್ರ ರೈತನಿಗೆ ಉಳಿಗಾಲ. ಈ ಮಳೆಯೂ ಕೈಕೊಟ್ಟರೆ ಬರಗಾಲದ ಕರಾಳಛಾಯೆ ಆವರಿಸುವ ಭಯ ರೈತರನ್ನು ಕಾಡುತ್ತಿದೆ.

2026-27ನೇ ಸಾಲಿನಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲಿ ಜನವರಿ 1 ರಿಂದ ಜು.1ರವರೆಗೆ 175.5 ಮಿಮೀ ವಾಡಿಕೆ ಮಳೆ ಇದ್ದು, ಪ್ರಸಕ್ತ ಸಾಲಿನಲ್ಲಿ ಸಾಲಿನಲ್ಲಿ 163.7 ಮಿಮೀ ಮಾತ್ರ ಮಳೆಯಾಗಿದ್ದು, ಶೇ.30ರಷ್ಟು ಮಳೆ ಕೊರತೆಯಾಗಿದೆ. ಒಟ್ಟು 6357 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 50100 ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ.78.8 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ಸಾಲಶೂಲ ಮಾಡಿ ಬಿತ್ತನೆ:ಮಳೆಯನ್ನೇ ನಂಬಿ ರೈತರು ಸಾಲಶೂಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಕೂಲಿ ಕಾರ್ಮಿಕರ ಕೊರತೆಯ ಕಾರಣ ಯಂತ್ರಗಳ ಮೊರೆ ಹೋಗಿದ್ದರಿಂದ ಬಿತ್ತನೆಗೆ ಸಾಕಷ್ಟು ಹಣ ವ್ಯಯವಾಗಿದೆ. ರೈತ ಕುಟುಂಬಗಳ ವರ್ಷದ ಭವಿಷ್ಯ ಬಹುತೇಕ ಮುಂಗಾರು ಬೆಳೆಯ ಮೇಲೆಯೇ ಅವಲಂಬಿತವಾಗಿರುತ್ತದೆ. ಉತ್ತಮ ಫಸಲು ಬಂದರೆ ವರ್ಷಪೂರ್ತಿ ಯಾವುದೇ ಚಿಂತೆಯಿಲ್ಲದೆ ಸಂಸಾರದ ಬಂಡಿ ಸಾಗುತ್ತದೆ. ಒಂದು ವೇಳೆ ಮುಂಗಾರು ಬೆಳೆ ಕೈಕೊಟ್ಟರೆ ಇಡೀ ವರ್ಷ ರೈತರು ಜೀವನ ನಿರ್ವಹಣೆಗೆ ಪರದಾಡಬೇಕಾಗುತ್ತದೆ. ಈ ಬಾರಿ ಮಳೆರಾಯ ಮುನಿಸಿಕೊಂಡಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಬಿತ್ತನೆ ಬಳಿಕ 20 ದಿನಗಳಿಗೂ ಹೆಚ್ಚುಕಾಲ ಮಳೆಯಿಲ್ಲದೆ ಬೆಳೆಗಳು ಬಾಡಲಾಂಭಿಸಿವೆ. ಮುಂಗಾರು ಪೂರ್ವದಲ್ಲಿ ಸುರಿದ ಮಳೆಯಿಂದ ಈವರೆಗೆ ಅಲ್ಪಸ್ವಲ್ಪ ಜೀವಹಿಡಿದುಕೊಂಡು ನಿಂತಿವೆ. ಒಂದು ವಾರದಲ್ಲಿ ಮಳೆ ಆದರೆ ಮಾತ್ರ ರೈತರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ. ಒಂದು ವೇಳೆ ಈ ಮಳೆಯೂ ಕೈಕೊಟ್ಟರೆ ಬರದ ಛಾಯೆ ಆವರಿಸುವ ಆತಂಕ ಕಾಡುತ್ತಿದೆ. ಒಟ್ಟಾರೆ ತಾಲೂಕಿನ ರೈತರ ಭವಿಷ್ಯ ಪುನರ್ವಸು ಮಳೆಯ ಮೇಲೆ ನಿಂತಿದೆ.

ಮುಂಗಾರಿನ ಆಸೆ ಹೊತ್ತು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ-ಗೊಬ್ಬರ ಉಳಿಮೆ, ಆಳುಗಳಿಗೆ ಖರ್ಚು ಮಾಡಲಾಗಿದೆ. ಆದರೆ, ಇದೀಗ ಮಳೆ ಕೈಕೊಟ್ಟಿದ್ದರಿಂದ ಆತಂಕ ಮೂಡಿದೆ. ಒಂದೆರಡು ದಿನಗಳಲ್ಲಿ ಮಳೆಯಾದರೆ ಮಾತ್ರ ಬೆಳೆಗಳನ್ನು ಉಳಿಸಿಕೊಳ್ಳಬಹುದು. ಸರಕಾರ ಮದ್ಯಂತರ ಬೆಳೆ ಪರಿಹಾರ ಘೋಷಣೆ ಮಾಡಬೇಕು.

-ಅರವಿಂದ ಕೊಪ್ಪ ಪ್ರಗತಿ ಪರ ರೈತ ಹಾಗೂ ಚಿಂತಕ ಮುದ್ದೇಬಿಹಾಳ

ಜೂನ್‌ ತಿಂಗಳಲ್ಲಿ ಮಳೆ ಸುರಿದ ಪರಿಣಾಮ ತಾಲೂಕಿನ ರೈತರು ಬಿತ್ತನೆ ಕಾರ್ಯ ಮುಗಿಸಿದ್ದರು. ಬಿತ್ತನೆ ನಂತರದಲ್ಲಿ ಮಳೆ ಕೈಕೊಟ್ಟ ಪರಿಣಾಮ ಭೂಮಿಯಲ್ಲಿನ ತೇವಾಂಶ ಬತ್ತಿ ಬಿತ್ತಿದ ಬೆಳೆ ಒಣಗುವ ಹಂತ ತಲುಪಿವೆ. ಇನ್ನೂ ಕಾಲ ಮಿಂಚಿಲ್ಲ, ಮೋಡ ಕವಿದ ವಾತಾವರಣ ಇದ್ದು, ಒಂದೆರಡು ದಿನಗಳಲ್ಲಿ ಉತ್ತಮ ಮಳೆ ಸುರಿಯುವ ಲಕ್ಷಣಗಳು ಗೋಚರಿಸುತ್ತಿದೆ. ರೈತರು ಆತಂತಕಕ್ಕೆ ಒಳಗಾಗಬಾರದು. ರೈತರಿಗೆ ನೆರವಾಗಲು ಕೃಷಿ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ.

- ಸುರೇಶ ಭಾವಿಕಟ್ಟಿ ತಾಲೂಕು ಕೃಷಿ ಸಹಾಯಕ ನಿರ್ದೇಶಕರು ಮುದ್ದೇಬಿಹಾಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಚಿ ಬೆಳೆದು ನಿಂತಲ್ಲೇ ನಿಂತ ಚರಂಡಿ ನೀರು
ಇಂದು ಯಾಳವಾರ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಸುವರ್ಣ ಮಹೋತ್ಸವ