ಹುಬ್ಬಳ್ಳಿ:
ಮಳೆಯಿಂದ ಪಂದ್ಯವನ್ನು ತಲಾ 8 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 8 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿತು. ತಂಡವು 5 ಓವರ್‌ಗಳಲ್ಲಿ 2 ವಿಕೆಟ್‌ಗೆ 27 ರನ್ ಗಳಿಸಿದ ವೇಳೆ ಮಳೆ ಆರಂಭವಾಯಿತು. ಕೃತಿಕ್ ಕೃಷ್ಣ (19 ಎಸೆತಗಳಲ್ಲಿ 23) ಹಾಗೂ ಹಾರ್ದಿಕ್ ರಾಜ್ (4 ಎಸೆತಗಳಲ್ಲಿ 2) ಗಾಯದ ಕಾರಣ ನಿವೃತ್ತಿ ಹೊಂದಿದ್ದರಿಂದ ತಂಡ ಸಂಕಷ್ಟದಲ್ಲಿತ್ತು.
ಈ ವೇಳೆ ಕಣಕ್ಕಿಳಿದ ಅಭಿನವ್ ಮನೋಹರ್ ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್, 2 ಬೌಂಡರಿ ನೆರವಿನೊಂದಿಗೆ 46 ರನ್ ಸಿಡಿಸಿ ಅಬ್ಬರಿಸಿದರು. ಮೈಸೂರು ತಂಡದ ಬೌಲರ್ ವೈಶಾಕ್ ವಿಜಯಕುಮಾರ್ ವಿರುದ್ಧ ಒಂದೇ ಓವರ್‌ನಲ್ಲಿ 22 ರನ್, ಅಂತಿಮ ಓವರ್‌ನಲ್ಲೂ 22 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ, ಕೊನೆಯ ಎಸೆತದಲ್ಲಿ ಔಟಾದರು. ಮೈಸೂರು ವಾರಿಯರ್ಸ್ ಪರ ರಿತೇಶ್ ಭಟ್ಕಳ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ 10 ರನ್ ನೀಡಿ 2 ವಿಕೆಟ್ ಪಡೆದರು.ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಟೈಗರ್ಸ್ 7 ಪಂದ್ಯಗಳಿಂದ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡವು ಈ ವರೆಗೆ 2 ಜಯ, 3 ಸೋಲು ಹಾಗೂ 2 ಪಂದ್ಯಗಳು ಡ್ರಾ ಆಗಿವೆ. ಮೈಸೂರು ವಾರಿಯರ್ಸ್ 7 ಪಂದ್ಯಗಳಿಂದ 5 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದು, ಇದುವರೆಗೂ 2 ಜಯ, 4 ಸೋಲು ಹಾಗೂ 1 ಡ್ರಾದಲ್ಲಿ ಅಂತ್ಯಗೊಂಡಿದೆ.