ಚನ್ನಗಿರಿ ತಾಲೂಕಿನಲ್ಲಿ 15-20 ದಿನಗಳಿಂದ ಜಿನುಗು ಮತ್ತು ಬಿರುಸಿನಿಂದ ಕೂಡಿದ ಮಳೆಯಾಗುತ್ತಿದ್ದು, ಸೋಮವಾರ ಸಂಜೆ ಸುರಿದ ಮಳೆಗೆ ತಾಲೂಕಿನ ಹೊಸಕೆರೆ ಮತ್ತು ಕೊರಟಿಕೆರೆ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ಬಿದ್ದಿವೆ.
- ವಿವಿಧೆಡೆ ಬಿತ್ತನೆ ಕಾರ್ಯಕ್ಕೆ ಚುರುಕು, ಒಟ್ಟಾರೆ 156 ಮಿಮೀ ಮಳೆ ಕೊರತೆ
- - -
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ 15-20 ದಿನಗಳಿಂದ ಜಿನುಗು ಮತ್ತು ಬಿರುಸಿನಿಂದ ಕೂಡಿದ ಮಳೆಯಾಗುತ್ತಿದ್ದು, ಸೋಮವಾರ ಸಂಜೆ ಸುರಿದ ಮಳೆಗೆ ತಾಲೂಕಿನ ಹೊಸಕೆರೆ ಮತ್ತು ಕೊರಟಿಕೆರೆ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ಬಿದ್ದಿವೆ.
ತಾಲೂಕಿನಲ್ಲಿನ ಎಲ್ಲ ಗ್ರಾಮಗಳಲ್ಲಿಯೂ ಉತ್ತಮವಾದ ಮಳೆ ಸೋಮವಾರ ಸಂಜೆ ಬಂದಿದ್ದು, ಬಿತ್ತನೆ ಮಾಡಿ ಬೆಳವಣಿಗೆ ಹಂತಗಳಲ್ಲಿರುವ ಮೆಕ್ಕೆಜೋಳ ಮತ್ತು ರಾಗಿ ಬೆಳವಣಿಗೆ ಉತ್ತಮವಾಗಿದೆ. ಮುಂಗಾರಿನ ಆರಂಭಿಕ ಹಂತವಾದ ಜೂನ್ ತಿಂಗಳಿನಲ್ಲಿ ಮಾಡಿದ ಮೆಕ್ಕೆಜೋಳದ ಬಿತ್ತನೆ ಮಳೆಯ ಕೊರತೆಯಿಂದ ಹಾಳಾಗಿದ್ದರೆ, ಜುಲೈ ತಿಂಗಳ ಮೊದಲನೆ ವಾರದಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಮತ್ತು ರಾಗಿಯ ಬೆಳೆ ಉತ್ತಮವಾದ ಬೆಳವಣಿಗೆಯ ಹಂತದಲ್ಲಿದೆ ಎಂದು ದೇವರಹಳ್ಳಿ ಮತ್ತು ಸಂತೆಬೆನ್ನೂರಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಿ.ಬಿ.ಕುಮಾರ್ ತಿಳಿಸಿದ್ದಾರೆ.
ಪ್ರಸ್ತುತ ಜನವರಿಯಿಂದ ಆಗಸ್ಟ್ 30ರವರೆಗೆ ವಾಡಿಕೆ ಮಳೆಯಾಗಿ 417ಎಂ.ಎಂ. ಮಳೆ ಆಗಬೇಕಾಗಿತ್ತು. ಆದರೆ ಇಲ್ಲಿಯ ವರೆಗೆ 261 ಎಂ.ಎಂ. ಮಳೆಯಾಗಿದ್ದು 156 ಎಂ.ಎಂ. ಮಳೆ ಕೊರತೆಯಾಗಿದೆ. ಮುಂದಿನ 3-4 ದಿನಗಳ ತನಕ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಮೆಕ್ಕೆಜೋಳ ಬೆಳೆಯುವಂತಹ ರೈತರು ಮಳೆ ಬರುವುದು ತಡವಾಗಿದ್ದರಿಂದ ಹೆಚ್ಚಿನ ರೈತರು ರಾಗಿ ಬಿತ್ತನೆ ಮಾಡಲು ಮುಂದಾಗಿದ್ದು, ರಾಗಿಯನ್ನು ಆಗಸ್ಟ್ 15ರವರೆಗೆ ಬಿತ್ತನೆ ಮಾಡಬಹುದಾಗಿದೆ.
ಚನ್ನಗಿರಿ ತಾಲೂಕಿನಲ್ಲಿ 9 ಮಳೆ ಮಾಪನ ಕೇಂದ್ರಗಳಿಂದ ಮಂಗಳವಾರ ದಾಖಲಾದ ಮಳೆಯ ಪ್ರಮಾಣದಂತೆ ಚನ್ನಗಿರಿ ಮಳೆ ಮಾಪನ ಕೇಂದ್ರದಲ್ಲಿ 26.0 ಮಿ.ಮೀ. ಮಳೆಯಾಗಿದೆ. ಅಂತೆಯೇ ದೇವರಹಳ್ಳಿ 28.0 ಮಿಮೀ, ತ್ಯಾವಣಿಗೆ 4.2 ಮಿಮೀ, ಬಸವಾಪಟ್ಟಣ 12.0 ಮಿಮೀ, ಜೋಳದಾಳ್ 4.6 ಮಿಮೀ, ಸಂತೆಬೆನ್ನೂರು 2.0 ಮಿಮೀ, ಉಬ್ರಾಣಿ 6.4 ಮಿಮೀ, ಕೆರೆಬಿಳಚಿ 12.6 ಮಿ.ಮೀ. ಮಳೆಯಾಗಿದ್ದರೆ ಕತ್ತಲಗೆರೆ ವ್ಯಾಪ್ತಿಯಲ್ಲಿ ಮಳೆ ಬಂದಿಲ್ಲ. ಒಟ್ಟು ಸರಾಸರಿ 95.8 ಮಿ.ಮೀ. ಮಳೆಯಾಗಿದೆ. ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ.
- - -
-4ಕೆಸಿಎನ್ಜಿ1: ಬೆಳವಣಿಗೆ ಹಂತದಲ್ಲಿರುವ ಮೆಕ್ಕೆಜೋಳದ ಬೆಳೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.