ಚಿಕ್ಕಬಳ್ಳಾಪುರ: ಶನಿವಾರ ಮತ್ತು ಭಾನುವಾರ ನಗರ ಮತ್ತು ಗ್ರಾಮಾಂತರದಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಜನತೆ ಹೈರಾಣಾಗಿದ್ದಾರೆ. ನಗರದಲ್ಲಿ ದಿಢೀರನೇ ಸುರಿದ ಜೋರು ಮಳೆಯಿಂದ ಮಳೆ ನೀರು ರಸ್ತೆಯ ಮೇಲೆಯೇ ಹರಿದು ಸಮಸ್ಯೆ ಸೃಷಿಸುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ಇಡೀ ಚರಂಡಿ ವ್ಯವಸ್ಥೆ ಸೇರಿದಂತೆ ರಾಜಕಾಲುವೆಗಳು ಸರಿಯಿಲ್ಲ ಎಂಬುದನ್ನು ಸಾಬೀತು ಮಾಡಿದೆ.
ಉರುಳಿ ಬಿದ್ದ ಬೃಹತ್ ಮರ: ಬಿರುಗಾಳಿ ಸಹಿತ ಭಾರಿ ಮಳೆಗೆ ನಗರದ ಸಿಎಸ್‌ಐ ರಸ್ತೆಯ ಹಳೆಯ ಗುಡ್‌ಶಫರ್ಡ್ ಶಾಲೆಯ ಆವರಣದಲ್ಲಿನ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಇದರಿಂದಾಗಿ ಕಾರೊಂದು ಸಂಪೂರ್ಣ ಜಖಂಗೊಂಡು, ಇನ್ನಿತರೆ ವಾಹನಗಳಿಗೆ ಹಾನಿಯಾಗಿದೆ.
ಜಿಲ್ಲಾ ಕೇಂದ್ರವೂ ಆದ ಚಿಕ್ಕಬಳ್ಳಾಪುರ ನಗರದ 08 ಮತ್ತು 09 ವಾರ್ಡ್ ಗಳಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ಚರಂಡಿ ಮತ್ತು ಯುಜಿಡಿ ನೀರು ನುಗ್ಗಿ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ.ಸಮಸ್ಯೆಗಳನ್ನು ಬಗ್ಗೆ ಗಂಭೀರವಾಗಿ ಪರಿಗಣಿಸುವವರಿಲ್ಲ ಎಂದು ಇಲ್ಲಿನ ಜನ ಗೋಳಾತ್ತಿದ್ದಾರೆ. ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರೀಕರ ಪರಿಸ್ಥಿತಿಯಂತೂ ಹೇಳತೀರದು. ಪ್ರತಿ ಮಳೆಗಾಲದಲ್ಲೂ ಇದೇ ದುಸ್ಥಿತಿ. ಮನೆ ಒಳಗೆ ನುಗ್ಗಿದ ಯುಜಿಡಿ, ಚರಂಡಿ ನೀರನ್ನು ಹೊರ ಹಾಕಿ ಹಾಕಿ ಹೈರಾಣಾಗಿ ಹೋಗಿದ್ದಾರೆ. ಕಳೆದ ಮಳೆಗಾಲದಲ್ಲಿ ಸಮಸ್ಯೆ ಆದಾಗ ಆಗಿನ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಇಲ್ಲಿನ ಸಮಸ್ಯೆ ನಿವಾರಣೆಗಾಗಿ ಸೂಕ್ತ ಕಾಮಗಾರಿ ಕೈಗೊಳ್ಳಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕಳುಹಿಸುವಂತೆ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಿ ಭರವಸೆ ನೀಡಿ ಹೋಗಿದ್ದರು.
ಈ ಭಾಗದಲ್ಲಿ ಯುಜಿಡಿ ಗೋಳಂತೂ ಪದಗಳಲ್ಲಿ ಹೇಳಲಾಗದು. ಪ್ರತಿ ವರ್ಷವೂ ಬರುವ ಮಳೆ ನೀರಿನ ಸಮಸ್ಯೆ ನಗರಸಭೆಗೆ ಗೊತ್ತಾಗುವುದಿಲ್ಲವೇ? ಮುನ್ನೆಚ್ಚರಿಕಾ ಕ್ರಮಗಳನ್ನು ಏಕೆ ಕೈಗೊಳ್ಳುವುದಿಲ್ಲ. ಯುಜಿಡಿ, ಚರಂಡಿನೀರಿನ ದುರ್ವಾಸನೆ ಮಧ್ಯೆ ಊಟ ತಿಂಡಿ ಮಾಡುವುದು ಹೇಗೆ. ನರಕವೂ ಒಂದೇ ಮಳೆಗಾಲದಲ್ಲಿ 8 ಮತ್ತು 9 ನೇ ವಾರ್ಡುಗಳೂ ಒಂದೇ ಆಗಿದೆ. ನಿಜಕ್ಕೂ ದುರಂತ,ಶೋಚನೀಯ. ಸ್ಥಳೀಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. .