ಕನ್ನಡಪ್ರಭ ವಾರ್ತೆ ಬೆಂಗಳೂರು
ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಬೆಳಗಾವಿ, ತುಮಕೂರು, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಬೆಂಗಳೂರು, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಗೋಕರ್ಣದಲ್ಲಿ ಮಳೆ ಆರ್ಭಟಕ್ಕೆ ಸಂಗಮನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭಗುಡಿಗೆ ನುಗ್ಗಿ ಮಹಾಪೂಜೆಗೆ ಅಡ್ಡಿಯಾಯಿತು. ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು(ಮರಳ ದಿನ್ನೆ) ಮಂದಿರದ ಸಿಬ್ಬಂದಿ ಸತತ ಎರಡು ತಾಸಿಗೂ ಅಧಿಕ ಕಾಲ ಕಡಿದು ನೀರು ಸರಾಗವಾಗಿ ಹೋಗುವಂತೆ ಮಾಡಿದ ಬಳಿಕ ದೇವಸ್ಥಾನದಲ್ಲಿ ನೀರಿನಪ್ರಮಾಣ ಇಳಿಕೆಯಾಯಿತು.ಯಲ್ಲಮ್ಮ ದೇಗುಲಕ್ಕೂ ನೀರು: ಬೆಳಗಾವಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಸವದತ್ತಿ ತಾಲೂಕಿನ ಯಲ್ಲಮ್ಮಗುಡ್ಡದಲ್ಲಿ ದೇವಸ್ಥಾನ ಆವರಣದಲ್ಲೇ ನೀರು ಹರಿದಿದೆ. ಇದರಿಂದಾಗಿ ಭಕ್ತರು ದೇವಿ ದರ್ಶನ ಪಡೆಯಲು ಪರದಾಡಬೇಕಾಯಿತು.
ಆಲಮಟ್ಟಿ: ವರ್ಷದ ಮೊದಲ ಒಳಹರಿವು ಆರಂಭಆಲಮಟ್ಟಿ: ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಈ ವರ್ಷದ ಮೊದಲ ಒಳಹರಿವು ಆರಂಭವಾಗಿದ್ದು,1,768 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬಂದಿದೆ. ಕಳೆದ ವರ್ಷ ಜೂನ್ ಕಳೆದರೂ ಒಳಹರಿವು ಇರಲಿಲ್ಲ. ಆದರೆ ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಮಳೆಯಿಂದ ಈ ಒಳಹರಿವು ಬಂದಿದೆ.
ಕೋಡಿ ಬಿದ್ದ ಕೆರೆ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಮಳೆಯಿಂದಾಗಿ ಕೆರೆಕಟ್ಟೆಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಜಾಗೀರ ಬುಡ್ಡೆನಹಳ್ಳಿಯಲ್ಲಿ ಚೆಕ್ ಡ್ಯಾಮ್ ಒಡೆದು ಮನೆಗಳಿಗೆ ನೀರು ನುಗ್ಗಿದ್ದು 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇದರಿಂದ ಮನೆಗಳಲ್ಲಿದ್ದ ದವಸ ಧಾನ್ಯ ಬಟ್ಟೆ ಬರೆ, ಅಗತ್ಯ ವಸ್ತುಗಳು ನೀರು ಪಾಲಾಗಿದ್ದು ಲಕ್ಷಾಂತರ ರು. ಹಾನಿಯಾಗಿದೆ.
ತಾಳಿಕೋಟೆ: ವಿಜಯಪುರ ಜಿಲ್ಲೆ ತಾಳಿಕೋಟೆ ಪಟ್ಟಣದ ಬಸ್ ಘಟಕದ ಮುಖ್ಯ ರಸ್ತೆಯ ಜಾನಕಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ದಾಟುತ್ತಿದ್ದಾಗ ಪುರಸಭೆ ಸದಸ್ಯರೊಬ್ಬರು ಬೈಕ್ ಸಮೇತ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.