ನಾಲ್ಕು ನಾಡು ಸುತ್ತ ಮುತ್ತ ತಂಪೆರೆದ ವರುಣ

KannadaprabhaNewsNetwork | Published : Mar 19, 2025 12:33 AM

ಸಾರಾಂಶ

ನಾಲ್ಕು ನಾಡು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಮಂಗಳವಾರ ಒಂದು ಇಂಚಿಗೂ ಅಧಿಕ ಮಳೆ ಸುರಿದಿದೆ. ಗುಡುಗು ಸಹಿತ ಮಳೆ ಭೂಮಿಗೆ ತಂಪೆರೆದಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಲ್ಕು ನಾಡು ಸುತ್ತ ಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಮಂಗಳವಾರ ಒಂದು ಇಂಚಿಗೂ ಅಧಿಕ ಮಳೆ ಸುರಿದಿದೆ.

ಸೋಮವಾರ ರಾತ್ರಿ ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿತ್ತು. ಮಂಗಳವಾರ ಮಧ್ಯಾಹ್ನ ಮೇಲೆ ನಾಪೋಕ್ಲು ಪಟ್ಟಣ ಸೇರಿದಂತೆ ಬೇತು, ಅಯ್ಯಂಗೇರಿ, ದೊಡ್ಡಪುಲಿಕೋಟು, ಬಲ್ಲಮಾವಟಿ ನೆಲಜಿ, ಕೊಳಕೇರಿ, ಎಮ್ಮೆಮಾಡು, ಚೋನಕೆರೆ, ಕೊಟ್ಟ ಮುಡಿ ಸೇರಿದಂತೆ ಹಲವು ಕಡೆ 20, 30 ಸೆಂ.ಮೀ. ನಿಂದ ಒಂದು ಇಂಚಿಗೂ ಅಧಿಕ ಗುಡುಗು ಸಹಿತ ಗಾಳಿ ಮಳೆಯಾಗಿ ಭೂಮಿ ತಂಪೆರೆದಿದೆ.

ನಾಪೋಕ್ಲು ಜಿಎಂಪಿ ಶಾಲೆಯ ಸಮೀಪ ರಸ್ತೆಗೆ ಸಮರ್ಪಕವಾದ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆ ನೀರು ರಸ್ತೆಯಲ್ಲಿ ಹೊಳೆಯಂತೆ ಹರಿವು ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕಳೆದ ಬುಧವಾರ ವರ್ಷದ ಪ್ರಥಮ ಮಳೆಯಾಗಿತ್ತು. ಈ ವರ್ಷದ 4ನೇ ಮಳೆಯಾಗಿ ಕಾಫಿ ಬೆಳೆಗಾರರ ಮುಖದಲ್ಲಿ ಸಂತಸ ವ್ಯಕ್ತಪಡಿಸಿದೆ. ಕಾಫಿ ಫಸಲಿನ ಕೊಯ್ಲು ಮುಗಿದಿದ್ದು ಬಹುತೇಕ ಕಡೆ ಕಾಫಿ ಬೆಳೆಗಾರರು ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿ ಕಾಫಿ ಹೂವು ಅರಳಿಸುವ ಪ್ರಯತ್ನದಲ್ಲಿ ಮುಂದಾಗಿದ್ದರು. ಇದೀಗ ಬರುತ್ತಿರುವ ಮಳೆ ಕಾಫಿ ತೋಟ ಗಳಿಗೆ ಪೂರಕವಾಗಿದ್ದು ವೆಚ್ಚವನ್ನು ಕಡಿಮೆಗೊಳಿಸಿದೆ.

ಕೊಡಗಿನ ಕೆಲವೆಡೆ ಮಳೆ

ಮಡಿಕೇರಿ : ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ಹಾಗೂ ಮಡಿಕೇರಿ ತಾಲೂಕಿನ ವ್ಯಾಪ್ತಿಯಲ್ಲಿ ಮಂಗಳವಾರವೂ ಮಳೆಯಾಗಿದ್ದು, ಕಾಫಿ ಬೆಳೆಗಾರರಿಗೆ ಖುಷಿ ನೀಡಿದೆ. ಜಿಲ್ಲೆಯ ನಾಪೋಕ್ಲು, ಕುರ್ಚಿ, ಬಲ್ಯಮಂಡೂರು, ಅರಪಟ್ಟು, ಹೆರವನಾಡು, ಬೆಟ್ಟಗೇರಿ, ಬೀರುಗ, ನೆಲಜಿ ಕಕ್ಕಬೆ, ಹೊದ್ದೂರು, ಬಲ್ಲಮಾವಟಿ ಮತ್ತಿತರ ಕಡೆಗಳಲ್ಲಿ ಮಳೆಯಾಯಿತು. ಮಾ.21ರ ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯಾದ್ಯಂತ ಕಾಫಿ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

Share this article