ಜಿಟಿ ಜಿಟಿ ಮಳೆಗೆ ವಾಹನ ಸವಾರರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸುಸ್ತೋ ಸುಸ್ತು

KannadaprabhaNewsNetwork | Published : May 20, 2025 11:52 PM
ಮಳೆಯಿಂದಾಗಿ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ರಸ್ತೆಗಳನ್ನು ಅಗೆದಿದ್ದು, ಸರಿಪಡಿಸದೇ ಅರ್ಧಂಬರ್ಧ ಕಾಮಗಾರಿ ಹಾಗೂ ಎಲ್ಲೆಂದರಲ್ಲಿ ಅಗೆದ ಹಳ್ಳಗಳಿಂದ ಕೆಸರು ಗದ್ದೆಯಂತಾಗಿವೆ. ರಸ್ತೆ ಕಾಮಗಾರಿ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
Follow Us

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆರಾಯನ ಆರ್ಭಟ ಮುಂದುವರಿದಿದೆ. ಮಳೆಯಿಂದಾಗಿ ಜನ ಮನೆ ಬಿಟ್ಟು ಹೊರಬರದಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರು ಹೈರಾಣಾಗಿದ್ದು, ಬೀದಿ ಬದಿ ವ್ಯಾಪಾರಸ್ಥರು ಮಳೆಯಿಂದಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ.

ಸಾರ್ವಜನಿಕರು ಹೈರಾಣ:

ಪಟ್ಟಣದಲ್ಲಿ ಮಳೆಯಿಂದ ರಸ್ತೆಗಳಲ್ಲಿ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು, ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ದಿನನಿತ್ಯದ ಕಾರ್ಯಗಳನ್ನು ನಡೆಸಲು ಅಡಚಣೆ ಉಂಟಾಗಿತ್ತು. ಕೊಂಚವೂ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯ ಕಾರಣ ಸಾರ್ವಜನಿಕರು ಹೈರಾಣಾಗಿದ್ದಾರೆ. ಬೆಳಗ್ಗೆಯಿಂದಲೇ ಆರಂಭಗೊಂಡ ಜಿಟಿ ಜಿಟಿ ಮಳೆಯಿಂದ ಕೆಲಸಕ್ಕೆ ತೆರಳುವವರಿಗೆ ಹಾಗೂ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗಿತ್ತು. ಸಂತೆ ಮಾರುಕಟ್ಟೆ, ಉದ್ಧಾನೇಶ್ವರ ವೃತ್ತ, ಶಿವಗಂಗೆ ವೃತ್ತದಲ್ಲಿ ವ್ಯಾಪಾರಸ್ಥರು ಹಾಗೂ ರೈತರ ವ್ಯಾಪಾರ ವಹಿವಾಟಿಗೆ ತೊಂದರೆ ಉಂಟಾಯಿತು.

ಕೆಸರು ಗದ್ದೆಯಾದ ಸಂತೆ ಮೈದಾನ:

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಟ್ಟಣದ ಕೆರೆಯ ಸಮೀಪವಿರುವ ಸಂತೆ ಮೈದಾನ ಕೆಸರುಗದ್ದೆಯಂತಾಗಿದ್ದು, ಎಲ್ಲಿ ಕಾಲಿಟ್ಟರೆ ಜಾರಿ ಬೀಳುತ್ತೇವೆಯೋ ಎಂಬ ಆತಂಕದಿಂದ ಜನರು ತರಕಾರಿ ಖರೀದಿಸಿದರು.

ವಾಹನ ಸವಾರರ ಆಕ್ರೋಶ:

ಮಳೆಯಿಂದಾಗಿ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ರಸ್ತೆಗಳನ್ನು ಅಗೆದಿದ್ದು, ಸರಿಪಡಿಸದೇ ಅರ್ಧಂಬರ್ಧ ಕಾಮಗಾರಿ ಹಾಗೂ ಎಲ್ಲೆಂದರಲ್ಲಿ ಅಗೆದ ಹಳ್ಳಗಳಿಂದ ಕೆಸರು ಗದ್ದೆಯಂತಾಗಿವೆ. ರಸ್ತೆ ಕಾಮಗಾರಿ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರನ ಎಡವಟ್ಟಿನಿಂದ ಕೆರೆ ನಿರ್ಮಾಣ:

ಇನ್ನು ಶಿವಗಂಗೆ ರಸ್ತೆಯಲ್ಲಿ ಹಾಗೂ ವೀರಸಾಗರದ ರಸ್ತೆಯಲ್ಲಿ ಮಳೆಯ ನೀರು ಕೆರೆಯಂತೆ ನಿಂತಿದ್ದು, ಈ ಹಿಂದೆ ಕಾಮಗಾರಿ ಮಾಡಿದ ಗುತ್ತಿಗೆದಾರನ ಎಡವಟ್ಟಿನಿಂದ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.