ನಮ್ಮ ವಿರುದ್ಧ ಸುಳ್ಳು ಕೇಸ್‌:ಕೋರ್ಟ್‌ಗೆ ದರ್ಶನ್‌, ಪವಿತ್ರಾ

KannadaprabhaNewsNetwork | Published : May 20, 2025 11:51 PM
ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಗೌಡ ಮತ್ತು ಇತರ ಆರೋಪಿಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಗೌಡ ಮತ್ತು ಇತರ ಆರೋಪಿಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ.

ಮಂಗಳವಾರ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ, ನಿಮ್ಮ ವಿರುದ್ಧ ಐಪಿಸಿ ಕಲಂ 302, 34, 120(ಬಿ) ಸೇರಿ ವಿವಿಧ ಕಲಂಗಳ ಅಡಿ ಕೇಸ್ ದಾಖಲಾಗಿದೆ. ಇದನ್ನು ಒಪ್ಪಿಕೊಳ್ಳುವಿರಾ ಎಂದು ನ್ಯಾಯಾಧೀಶರು ಕೇಳಿದರು. ಆಗ, ನಮ್ಮ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಲಾಗಿದೆ ಎಂದು ಆರೋಪಿಗಳು ಹೇಳಿದರು.

ಮಂಗಳವಾರದ ವಿಚಾರಣೆಗೆ ಮೂರನೇ ಆರೋಪಿ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಮುಂದಿನ ವಿಚಾರಣೆ ವೇಳೆ ಎಲ್ಲ ಆರೋಪಿಗಳು ಹಾಜರಾಗಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಜು.10ಕ್ಕೆ ಮುಂದೂಡಿತು.

ಒಂದೆಡೆ ನಿಲ್ಲಲು ಸೂಚನೆ:

ಬೆಳಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದಾಗ ಪ್ರಕರಣದ ಸಂಖ್ಯೆ ಮತ್ತು ಆರೋಪಿಗಳ ಹಾಜರಾತಿಯನ್ನು ನ್ಯಾಯಾಲಯದ ಸಿಬ್ಬಂದಿ ಖಚಿತಪಡಿಸಿಕೊಂಡರು. ಪವಿತ್ರಗೌಡ ಅವರಿಂದ ದರ್ಶನ್ ದೂರ ನಿಂತಿದ್ದರು. ಆಗ, ಒಂದನೇ ಆರೋಪಿ ಪಕ್ಕದಲ್ಲಿ ನಿಲ್ಲುವಂತೆ ದರ್ಶನ್‌ಗೆ ನ್ಯಾಯಾಧೀಶರು ಸೂಚಿಸಿದರು.

ಏ.8ರಂದು ಇದೇ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆಗೆ ದರ್ಶನ್ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ನಿಗದಿತ ದಿನಾಂಕಗಳಂದು ಆರೋಪಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ದರ್ಶನ್ ಪರ ವಕೀಲರಿಗೆ ಸೂಚಿಸಿತು.

ಆರೋಪಪಟ್ಟಿ ಒದಗಿಸಲು ಸೂಚನೆ:

ಹೆಚ್ಚುವರಿ ಆರೋಪ ಪಟ್ಟಿಯನ್ನು ನಟ ದರ್ಶನ್‌ ಸೇರಿದಂತೆ ಎಲ್ಲ ಆರೋಪಿಗಳ ಪರ ವಕೀಲರಿಗೆ ಒದಗಿಸುವಂತೆ ತನಿಖಾಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿತು.

ಇದೇ ವೇಳೆ ತನಿಖೆಯ ಸಂದರ್ಭದಲ್ಲಿ ಜಪ್ತಿ ಮಾಡಿರುವ ಹಣ ಬಿಡುಗಡೆ ಕೋರಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಆದಾಯ ತೆರಿಗೆ ಇಲಾಖೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಜೂ.3ರಂದು ನ್ಯಾಯಾಲಯ ಮುಂದೂಡಿತು.

2024ರ ಜೂ.8ರಂದು ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿತ್ತು. ದರ್ಶನ್, ಪವಿತ್ರಾ ಸೇರಿದಂತೆ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.