ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಆರೇಳು ವರ್ಷಗಳಿಂದ ಸೋನೆ ಮಳೆ ಶುರುವಾಗುತ್ತಿದ್ದುದೇ ಜೂನ್ ಮಧ್ಯ ಇಲ್ಲವೇ ಜೂನ್ ಅಂತ್ಯದಲ್ಲಿ. ಕೆಲವೊಮ್ಮೆ ಸೋನೆ ಮಳೆಯೇ ಕೈಕೊಟ್ಟ ಉದಾಹರಣೆಯೂ ಇದೆ. ಸಾಮಾನ್ಯವಾಗಿ ಮುಂಗಾರು ಎಂದರೆ ಮಾರ್ಚ್ ತಿಂಗಳಲ್ಲಿ ಮೊದಲ ಮಳೆಯಾಗುತ್ತದೆ. ಮಲೆನಾಡು ಭಾಗದಲ್ಲಿ ಆಗುವ ಈ ಮಳೆಯನ್ನು ಹೂ ಮಳೆ ಎನ್ನುತ್ತಾರೆ. ಏಕೆಂದರೆ ಈ ಮಳೆ ಬಂದ ನಂತರವೆ ಕಾಫಿ ತೋಟಗಳು ಹೂವಾಗುತ್ತವೆ. ಈ ಮಳೆ ಆಗದಿದ್ದರೆ ನೀರಿನ ಮೂಲಗಳಿಂದ ತೋಟಗಳಿಗೆ ನೀರು ಸಿಂಪರಣೆ ಮಾಡಬೇಕಾಗುತ್ತದೆ. ಮಾರ್ಚ್‌ನಿಂದ ಆರಂಭವಾಗುವ ಅಡ್ಡ ಮಳೆ (ಬಿರುಸಿನಿಂದ ಕೂಡಿದ ಮಳೆ) ಗಳು ಕೆರೆ ಕಟ್ಟೆಯನ್ನು ತುಂಬಿಸುತ್ತವೆ. ಮಾರ್ಚ್‌ನಿಂದ ಜೂನ್ ಮಧ್ಯ ಭಾಗದವರೆಗೂ ಈ ಅಡ್ಡ ಮಳೆಗಳು ಕೆರೆಕಟ್ಟೆ ಹಾಗೈ ಜಲಾಶಯಗಳನ್ನು ಭರ್ತಿಗೊಳಿಸುತ್ತವೆ. ಇದಾದ ನಂತರದಲ್ಲಿ ಸೋನೆ ಮಳೆ ಶುರುವಾಗುತ್ತವೆ. ಕೆರೆಕಟ್ಟೆಗಳು ಭರ್ತಿಯಾಗಿರುತ್ತವೆ. ಜತೆಗೆ ಸೋನೆ ಮಳೆ ಜಿನುಗುವುದರಿಂದ ಭತ್ತದ ನಾಟಿಗೆ ಅನುಕೂಲವಾಗುತ್ತದೆ. ಈ ಸೋನೆ ಮಳೆಯಲ್ಲಿಯೇ ಭೂಮಿ ಚೆನ್ನಾಗಿ ನೀರು ಕುಡಿಯುತ್ತದೆ. ಅಂರ್ತಜಲ ಹೆಚ್ಚುತ್ತದೆ. ಆದರೆ, ಈ ಬಾರಿ ಅಡ್ಡ ಮಳೆಗಳೇ ಸರಿಯಾಗಿ ಆಗಿಲ್ಲ. ಯಾವ ಕೆರೆಕಟ್ಟೆಗಳಿಗೂ ನೀರು ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೋನೆ ಮಳೆ ಶುರುವಾಗಿದೆ. ಇದರ ನೇರ ಪರಿಣಾಮ ಭತ್ತದ ಬೆಳೆಯ ಮೇಲಾಗುತ್ತದೆ. ಏಕೆಂದರೆ ಕೆರೆಕಟ್ಟೆಗಳೇ ಭರ್ತಿಯಾಗದೆ ಸೋನೆ ಮಳೆಯ ಜಿನುಗುವ ನೀರಿಗೆ ಭತ್ತ ನಾಟಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ವರ್ಷ ಬತ್ತದ ಉತ್ಪಾದನೆ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಜೋಳ ಬಿತ್ತನೆ ಮೇಲೂ ಪರಿಣಾಮ:ಕಳೆದ ಕೆಲ ವರ್ಷಗಳಿಂದ ಮೇ ಅಂತ್ಯದಲ್ಲಿ ಹಾಗೂ ಜೂನ್ ಆರಂಭದಲ್ಲಿ ಮುಸುಕಿನ ಜೋಳದ ಬಿತ್ತನೆ ಕಾರ್ಯ ನಡೆಯುತ್ತಿತ್ತು. ಆದರೆ, ಈ ವರ್ಷ ಮೇ ತಿಂಗಳಲ್ಲೇ ಸೋನೆಯ ವಾತಾವರಣ ನಿರ್ಮಾಣವಾಗಿರುವುದರಿಂದ ಮುಸುಕಿನ ಜೋಳದ ಬಿತ್ತನೆ ಮೇಲೆ ಪರಿಣಾಮ ಬೀರಿದೆ.