ಜನತಾದರ್ಶನದಲ್ಲಿ ದೂರುಗಳ ಸುರಿಮಳೆ..!

KannadaprabhaNewsNetwork | Updated : Oct 07 2023, 02:20 AM IST

ಸಾರಾಂಶ

ಜನತಾದರ್ಶನದಲ್ಲಿ ದೂರುಗಳ ಸುರಿಮಳೆ..!
ಸಮಸ್ಯೆ, ಕುಂದುಕೊರತೆಗಳ ಪರಿಹಾರಕ್ಕೆ ಜನತಾದರ್ಶನ ಸೂಕ್ತ ವೇದಿಕೆ: ಜಿಲ್ಲಾಧಿಕಾರಿ ಡಾ.ಕುಮಾರ ಕನ್ನಡಪ್ರಭ ವಾರ್ತೆ ನಾಗಮಂಗಲ ಜನ ಸಾಮಾನ್ಯರ ಸಮಸ್ಯೆ ಮತ್ತು ಕುಂದುಕೊರತೆ ಆಲಿಸಿ ಪರಿಹಾರ ಕಂಡು ಹಿಡಿಯಲು ಜನತಾ ದರ್ಶನ ಸೂಕ್ತ ವೇದಿಕೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು. ಪಟ್ಟಣದ ತಾಲೂಕು ಆಡಳಿತಸೌಧದ ಒಳಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಜನತಾ ದರ್ಶನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ನೀಡುವ ಯಾವುದೇ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ತ್ವರಿತ ಗತಿಯಲ್ಲಿ ಇತ್ಯರ್ಥ ಪಡಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಆ ಮೂಲಕ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. ತಾಲೂಕಿನ ಗ್ರಾಮವೊಂದರ ಚಲುವಯ್ಯನ ಮಗ ಬೆಟ್ಟಯ್ಯ ಎಂಬ ವೃದ್ಧ ರೈತ ತಾನು ಬದುಕಿರುವಾಗಲೇ ನನ್ನ ಮರಣ ಪ್ರಮಾಣ ಪತ್ರ ಪಡೆದು ನನ್ನದೇ ಹೆಸರಿನ ಬೇರೊಬ್ಬ ವ್ಯಕ್ತಿಗೆ ನನ್ನ ಜಮೀನನ್ನು ಖಾತೆ ಮಾಡಲಾಗಿದೆ. ಈ ಸಂಬಂಧ ಹಲವು ವರ್ಷಗಳಿಂದ ಕಚೇರಿಗೆ ಅಲೆಯುತ್ತಿದ್ದರೂ ಸಹ ನನಗೆ ನ್ಯಾಯ ದೊರಕಿಲ್ಲ ಎಂದು ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಪ್ರಕರಣ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಪರಿಶೀಲನೆ ನಡೆಸಿ ಸೂಕ್ತ ನ್ಯಾಯ ಒದಗಿಸುವಂತೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು. ತಾಲೂಕಿನ ಅಳೀಸಂದ್ರ ಗ್ರಾಮದ ನಂಜುಂಡೇಗೌಡ ಎಂಬ ವೃದ್ಧ ರೈತ ತಾನು ಕ್ರಯಕ್ಕೆ ಪಡೆದಿರುವ ಒಂದು ಎಕರೆ ಜಮೀನನ್ನು ಖಾತೆ ಮಾಡಿಸಿ ಕೊಡುವಂತೆ ನನ್ನ ಎರಡನೇ ಮಗ ಆನಂದ್ ನಿರಂತರ ಕಿರುಕುಳ ನೀಡುವುದಲ್ಲದೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ಇದರಿಂದ ನಮಗೆ ಪ್ರಾಣಭಯವಿದ್ದು ಸೂಕ್ತ ನ್ಯಾಯ ಮತ್ತು ರಕ್ಷಣೆ ನೀಡುವಂತೆ ಅಹವಾಲು ನೀಡಿದರು. ಈ ಸಂಬಂಧ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ವೃದ್ಧ ರೈತನಿಗೆ ಸಲಹೆ ನೀಡಿದರು. ಇಬ್ಬರಿಗೂ ನೋಟಿಸ್ ಜಾರಿಮಾಡಿ ವಿಚಾರಣೆ ನಡೆಸಿ ಹಿರಿಯ ನಾಗರೀಕರ ಕಾಯ್ದೆಯಡಿ ಮಗ ಆನಂದ್‌ನಿಂದ ತಂದೆ ನಂಜುಂಡೇಗೌಡಗೆ ಪ್ರತಿ ತಿಂಗಳು ಸೂಕ್ತ ಪರಿಹಾರ ಕೊಡಿಸಲು ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಎಸಿ ನಂದೀಶ್‌ಗೆ ನಿರ್ದೇಶನ ನೀಡಿದರು. ಹಲ್ಲೆ ನಡೆಸುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಡಿವೈಎಸ್‌ಪಿಗೆ ಸೂಚಿಸಿದರು. ತಾಲೂಕಿನ ಬೊಮ್ಮೇನಹಳ್ಳಿ ರಘು ಎಂಬ ರೈತ 11 ಇ-ಸ್ಕೆಚ್‌ಗೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದಿದ್ದರೂ ಸಹ ಕಡತ ವಿಲೇವಾರಿ ಮಾಡಿಲ್ಲ. ಆರ್‌ಆರ್‌ಟಿ ಶಾಖೆಯಲ್ಲಿ 6 ತಿಂಗಳಾದರೂ ಒಂದು ಕಡತ ವಿಲೇವಾರಿಯಾಗುವುದಿಲ್ಲ ಎಂದು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡೀಸಿ, ನಾಳೆಯೇ ಜಮೀನು ಅಳತೆ ಮಾಡಿಸಿ ಸರ್ವೇ ಪ್ರಕಾರ ಖಾತೆ ಮಾಡಿಕೊಡಲು ಕ್ರಮ ವಹಿಸುವಂತೆ ಮತ್ತು ತಾಲೂಕು ಭೂಮಾಪಕರ ವಿರುದ್ಧ ಸಾಕಷ್ಟು ದೂರು ಕೇಳೀಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಬದಲಾಯಿಸುವಂತೆ ಎಡಿಎಲ್‌ಆರ್‌ಗೆ ಸೂಚಿಸಿದರು. ಈ ವೇಳೆ ಜಿಪಂ ಸಿಇಒ ಶೇಖ್‌ತನ್ವೀರ್‌ ಆಸೀಫ್, ಪಾಂಡವಪುರ ಎಸಿ ನಂದೀಶ್, ತಹಸೀಲ್ದಾರ್ ನಯೀಂಉನ್ನೀಸಾ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸಿಪಿಐ ನಿರಂಜನ್, ಸೆಸ್ಕಾಂ ಎಇಇ ಮರಿಸ್ವಾಮಿ, ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಪುರಸಭೆ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನೂರಾರುಮಂದಿ ಸಾರ್ವಜನಿಕರು ಇದ್ದರು. ಬಾಕ್ಸ್‌... ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ..! ತಾಲೂಕಿನ ಎಲ್ಲ ಕೆರೆ-ಕಟ್ಟೆಗಳಿಗೆ ಹೇಮಾವತಿ ಜಲಾಶಯದ ನೀರು ತುಂಬಿಸುವ ಮೂಲಕ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಮೀಟಿಂಗ್ ನೆಪ ಹೇಳಿ ಹಳ್ಳಿಗಳಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ರೈತರಿಗೆ ಹೆಚ್ಚು ತೊಂದರೆಯಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬಿತ್ಯಾದಿ ಕುರಿತು ರೈತ ಸಂಘದ ಮುಖಂಡರು ಅಹವಾಲು ಸಲ್ಲಿಸಿದರು. ಗ್ರಾಮ ಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಕೇಂದ್ರ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಬದಲಿಗೆ ಪಟ್ಟಣ ಪ್ರದೇಶದಲ್ಲಿ ಖಾಸಗಿಯಾಗಿ ಕಚೇರಿ ಮಾಡಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಅವೈಜ್ಞಾನಿಕ ಕಾಮಗಾರಿಯಿಂದ ಪಟ್ಟಣದ ಚರಂಡಿಯಲ್ಲಿ ಹರಿದುಹೋಗುವ ಗಲೀಜು ನೀರು ಕೆರೆಗಳಿಗೆ ಸೇರುತ್ತಿದೆ. ಹಲವು ಕೆರೆಗಳ ನೀರು ಕಲುಶಿತಗೊಳ್ಳುತ್ತಿದೆ. ಜಾನುವಾರುಗಳೂ ಸಹ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರು ಹೇಳಿದರು. ಈ ಅವ್ಯವಸ್ಥೆ ಸರಿಪಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಸರ್ಕಾರಿ ದರಪಟ್ಟಿ ಫಲಕ ಅಳವಡಿಕೆಗೆ ಕ್ರಮವಹಿಸಿ ತಾಲೂಕು ಕಚೇರಿ, ನಾಡ ಕಚೇರಿ ಹಾಗೂ ಗ್ರಾಪಂ ಕಚೇರಿಗಳಲ್ಲಿ ಪೌತಿಖಾತೆ, ವಿಭಾಗ ಖಾತೆ, ಕ್ರಯ, ಇ-ಸ್ವತ್ತುಗಳ ಖಾತೆಗೆ ಅಗತ್ಯವಿರುವ ದಾಖಲೆ ಮತ್ತು ಅದಕ್ಕೆ ತಗಲುವ ಸರ್ಕಾರಿ ಶುಲ್ಕದ ದರಪಟ್ಟಿ ಫಲಕ ಅಳವಡಿಸಲು ಕ್ರಮವಹಿಸಬೇಕು. - ರಮೇಶ್‌ಗೌಡ ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಾಕ್ಸ್‌.... 96 ಅರ್ಜಿ ಸ್ವೀಕಾರ, 6 ಅರ್ಜಿ ಸ್ಥಳದಲ್ಲೇ ಇತ್ಯರ್ಥ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಜನತಾ ದರ್ಶನದಲ್ಲಿ ಸ್ವೀಕೃತವಾದ 96 ಅರ್ಜಿಗಳ ಪೈಕಿ ಆರ್‌ಟಿಸಿ ತಿದ್ದುಪಡಿಗೆ ಸಂಬಂಧಿಸಿದ 6 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿ ಆದೇಶ ಪತ್ರ ನೀಡಲಾಗಿದೆ. ನೆನಗುದಿಗೆ ಬಿದ್ದಿದ್ದ ತಾಲೂಕಿನ ಹಾಳಪ್ಪನಕೊಪ್ಪಲು ಗ್ರಾಮದ ಎನ್.ಎಸ್.ಚಂದ್ರ ಎಂಬ ರೈತ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪರಿಹಾರದ ಮಂಜೂರಾತಿ ಪತ್ರ ವಿತರಿಸಲಾಗಿದೆ. ಇನ್ನುಳಿದ ಎಲ್ಲ ಅರ್ಜಿಗಳನ್ನು ಕಾನೂನು ಪ್ರಕಾರ ನಿಯಮಾನುಸಾರ ಕ್ರಮವಹಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದರು. 6ಕೆಎಂಎನ್ ಡಿ11,12 ನಾಗಮಂಗಲ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಜನತಾದರ್ಶನ ಕಾರ್ಯಕ್ರಮದಲ್ಲಿ ಆರ್‌ಟಿಸಿ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅರ್ಹ ರೈತರಿಗೆ ಆದೇಶ ಪತ್ರ ನೀಡಿದರು.

Share this article