ಕನ್ನಡಪ್ರಭ ವಾರ್ತೆ ಬೆಳಗಾವಿ
ವಿವಾದಾತ್ಮಕ ಭಾಷಣ ವೈರಲ್
ಇತ್ತೀಚೆಗೆ ಶಿವಾನಂದ ನೀಲಣ್ಣನವರ್ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ನಮ್ಮ ಬಳಿ 15 ಸಾವಿರ ಬಂದೂಕುಗಳಿವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ, ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ ಎಂಬ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಇದೇ ಭಾಷಣದಲ್ಲಿ 2028ರಲ್ಲಿ ಒಂದೇ ಸಲ 224 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗುತ್ತೇನೆ ಎಂಬ ರಾಜಕೀಯ ಹೇಳಿಕೆಯೂ ವ್ಯಾಪಕ ಗಮನ ಸೆಳೆದಿತ್ತು. ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಭಾಷಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಮಾಡಲ್ಪಟ್ಟವೆಯೇ ಅಥವಾ ಅದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆಡಳಿತಾತ್ಮಕ ವಲಯದಲ್ಲೂ ಚರ್ಚೆ ಆರಂಭವಾಗಿತ್ತು.ಶಿವಾನಂದ ನೀಲಣ್ಣನವರ್ ನೇತೃತ್ವದಲ್ಲಿ ಮೇ 17ರಂದು ಸ್ವಚ್ಛ ಬೆಳಗಾವಿ ಸಂಭ್ರಮ ಹೆಸರಿನಲ್ಲಿ ಸುಮಾರು 25 ಸಾವಿರ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಸಲಾಗಿತ್ತು. ಸರ್ದಾರ್ಸ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದ್ದು, ನಗರಾದ್ಯಂತ ಭಾರೀ ಪ್ರಮಾಣದಲ್ಲಿ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಅಗತ್ಯ ಆಡಳಿತಾತ್ಮಕ ಅನುಮತಿ, ಭದ್ರತಾ ಕ್ರಮಗಳು ಹಾಗೂ ಕಾನೂನು ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತು. ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯೂ ಅನುಮತಿ ಇಲ್ಲದೇ ಅಳವಡಿಸಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿತು.
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಪ್ರಭಾವ, ದೊಡ್ಡ ಮಟ್ಟದ ಹಣಕಾಸು ವ್ಯವಹಾರ, ಸಾವಿರಾರು ಜನರನ್ನು ಸೇರಿಸುವ ಪ್ರಯತ್ನ ಹಾಗೂ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ಈಗ ಶಿವಂ ಅಸೋಸಿಯೇಟ್ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಸಹಕಾರ ಇಲಾಖೆ, ಜಿಲ್ಲಾಡಳಿತ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಹೂಡಿಕೆ ಸಂಗ್ರಹ ಕಾನೂನು ಬದ್ಧವಾಗಿತ್ತೇ?, ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ?, ಸಾರ್ವಜನಿಕರಿಗೆ ನೀಡಿದ ಭರವಸೆಗಳ ಸ್ವರೂಪ ಏನು? ಎಂಬ ಅಂಶಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಹಲವರಲ್ಲಿ ಈಗ ಆತಂಕ ಮನೆ ಮಾಡಿದೆ. ಕೆಲವು ಹೂಡಿಕೆದಾರರು ತಮ್ಮ ಹಣದ ಭದ್ರತೆ ಬಗ್ಗೆ ಪ್ರಶ್ನೆ ಕೇಳತೊಡಗಿದ್ದು, ಇನ್ನೂ ಕೆಲವರು ಪರಿಸ್ಥಿತಿ ಗಮನಿಸುತ್ತಿದ್ದಾರೆ. ಅಧಿಕಾರಿಗಳ ತನಿಖೆಯ ಬಳಿಕವೇ ಶಿವಂ ಅಸೋಸಿಯೇಟ್‌ನ ನಿಜಸ್ವರೂಪ ಮತ್ತು ಹಣಕಾಸು ಚಟುವಟಿಕೆಗಳ ಕುರಿತು ಸ್ಪಷ್ಟ ಚಿತ್ರಣ ಹೊರಬರುವ ಸಾಧ್ಯತೆ ಇದೆ.
ಹೆಚ್ಚಿನ ಬಡ್ಡಿದರದ ಆಮಿಷ