ಭಾರಿ ಮಳೆಯ ಹಿನ್ನೆಲೆಯಲ್ಲಿ ನಗರದ ಶಾಲೆಗಳಿಗೆ ರಜೆ : ವಾರಾಂತ್ಯದಲ್ಲಿ ತರಗತಿ ನಡೆಸಲು ನಿರ್ಧಾರ

KannadaprabhaNewsNetwork |  
Published : Oct 25, 2024, 01:51 AM ISTUpdated : Oct 25, 2024, 11:01 AM IST
ಶಾಲೆ | Kannada Prabha

ಸಾರಾಂಶ

ಭಾರಿ ಮಳೆಯ ಹಿನ್ನೆಲೆಯಲ್ಲಿ ನಗರದ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಕಡಿತವಾಗಿರುವ ತರಗತಿಗಳನ್ನು ಸರಿದೂಗಿಸಲು ಮುಂದಿನ ಕೆಲವು ವಾರಗಳ ಕಾಲ ಶನಿವಾರ ಮತ್ತು ಭಾನುವಾರ ಇಡೀ ದಿನ ತರಗತಿ ನಡೆಸಲು ಬೆಂಗಳೂರಿನ ಖಾಸಗಿ ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸಿವೆ.

 ಬೆಂಗಳೂರು : ಭಾರಿ ಮಳೆಯ ಹಿನ್ನೆಲೆಯಲ್ಲಿ ನಗರದ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಕಡಿತವಾಗಿರುವ ತರಗತಿಗಳನ್ನು ಸರಿದೂಗಿಸಲು ಮುಂದಿನ ಕೆಲವು ವಾರಗಳ ಕಾಲ ಶನಿವಾರ ಮತ್ತು ಭಾನುವಾರ ಇಡೀ ದಿನ ತರಗತಿ ನಡೆಸಲು ಬೆಂಗಳೂರಿನ ಖಾಸಗಿ ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸಿವೆ.

ಮಳೆಯ ಕಾರಣ ಕಳೆದ ಸೋಮವಾರ, ಬುಧವಾರ ಸೇರಿದಂತೆ ಕೆಲ ದಿನಗಳಂದು ಇಡೀ ಜಿಲ್ಲೆಯ ಎಲ್ಲ ಮಾದರಿ ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು. 20 ದಿನಗಳ ದಸರಾ ರಜೆಯ ಬೆನ್ನಲ್ಲೇ ಮಳೆಯಿಂದ ರಜೆ ನೀಡಲಾಗಿದೆ. ಮುಂದೆ ದೀಪಾವಳಿ ಹಬ್ಬ, ಕ್ರಿಸ್‌ಮಸ್‌ ಹೀಗೆ ಸಾಕಷ್ಟು ರಜೆ ದಿನಗಳಿವೆ. ಆದ್ದರಿಂದ ಉಳಿಕೆ ಪಾಠಗಳ ಬೋಧನೆ ಪೂರ್ಣಗೊಳಿಸಲು ಸಮಯ ಸಾಲುವುದಿಲ್ಲ. ಹಾಗಾಗಿ ಅಕ್ಟೋಬರ್‌ ತಿಂಗಳ ಕೊನೆಯ ಶನಿವಾರ ಮತ್ತು ಭಾನುವಾರದ ಜೊತೆಗೆ ನವೆಂಬರ್‌ ತಿಂಗಳಲ್ಲಿ ಒಂದೆರಡು ವಾರಾಂತ್ಯದ ದಿನಗಳಲ್ಲೂ ಪೂರ್ಣ ದಿನ ತರಗತಿ ಚಟುವಟಿಕೆ ನಡೆಸಲು ತೀರ್ಮಾನಿಸಿರುವುದಾಗಿ ನಗರದ ವಿವಿಧ ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಆದರೂ ನಿಗದಿತ ಪಾಠಗಳ ಬೋಧನೆ ಪೂರ್ಣಗೊಳಿಸಲು ಸಾಧ್ಯವಾಗದೆ ಹೋದರೆ ಕ್ರಿಸ್‌ಮಸ್‌ ರಜೆ ಅವಧಿಯಲ್ಲಿ ಕೆಲ ದಿನಗಳ ಕಡಿತ ಮಾಡುವ ಆಲೋಚನೆಯೂ ಇದೆ ಎಂದು ಹೇಳಿದ್ದಾರೆ.

ಮಳೆಯಿಂದಾಗಿ ಸಾಮೂಹಿಕವಾಗಿ ಎಲ್ಲ ಶಾಲೆಗಳಿಗೂ ಜಿಲ್ಲಾಧಿಕಾರಿಗಳು ರಜೆ ಘೋಷಿಸುವುದು ಸರಿಯಲ್ಲ. ಮಳೆಯಿಂದ ಯಾವ ಶಾಲೆಗಳಿಗೆ ಸಮಸ್ಯೆಯಾಗುತ್ತದೆಯೋ ಅಂತಹ ಶಾಲೆಗಳಿಗೆ ಮಾತ್ರ ರಜೆ ನೀಡಬೇಕು. ಅಥವಾ ಇಂತಹ ಸಂದರ್ಭದಲ್ಲಿ ರಜೆಯ ನಿರ್ಧಾರವನ್ನು ಆಯಾ ಶಾಲಾ ಆಡಳಿತ ಮಂಡಳಿಗೆ ಬಿಡಬೇಕೆಂದು ಕ್ಯಾಮ್ಸ್‌ ಸೇರಿದಂತೆ ಮತ್ತಿತರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಇದಕ್ಕೆ ಪೋಷಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ನಿರ್ಧಾರ ಸರಿಯಾಗಿದೆ. ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ಶಾಲೆಗಳು ಹೊಣೆ ಹೊರುತ್ತವೆಯೇ ಎಂದು ಪ್ರಶ್ನಿಸಿದ್ದರು.

ಮಳೆಯಿಂದ ರಜೆಗಳು ಹೆಚ್ಚಾಗಿದೆ. ಮುಂದಿನ ವಾರದಲ್ಲಿ ದೀಪಾವಳಿ ರಜೆ ಬರಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯಲ್ಲಿ ಪಾಠ ಪ್ರವಚನ ಪೂರ್ಣಗೊಳಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ವಾರಾಂತ್ಯ ತರಗತಿ ನಡೆಸುವುದು ಅನಿವಾರ್ಯವಾಗಿದೆ.

-ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್ ಸಂಘಟನೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ