ಭಟ್ಕಳ ತಾಲೂಕಿನಾದ್ಯಂತ ಶುಕ್ರವಾರ ಮಳೆ ಪ್ರಮಾಣ ಇಳಿಕೆ ಕಂಡಿದೆ
ಭಟ್ಕಳ: ತಾಲೂಕಿನಾದ್ಯಂತ ಶುಕ್ರವಾರ ಮಳೆ ಪ್ರಮಾಣ ಇಳಿಕೆ ಕಂಡಿದೆ. ಶುಕ್ರವಾರ ಬೆಳಿಗ್ಗೆ ವರೆಗೆ 260.4 ಮಿಮಿ ಮಳೆಯಾದ ಬಗ್ಗೆ ವರದಿಯಾಗಿದೆ.
ತಾಲೂಕಿನಲ್ಲಿ ಬುಧವಾರ ಮತ್ತು ಗುರುವಾರ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಎಲ್ಲಿ ನೋಡಿದರೂ ನೀರೇ ನೀರು ಎನ್ನುವಂತಾಗಿತ್ತು. ಶುಕ್ರವಾರ ಆಗಾಗ ತುಂತುರು ಮಳೆ ಸುರಿದಿದ್ದು ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಸುರಿಯಲಿಲ್ಲ. ಎರಡು ದಿನಗಳ ಭಾರೀ ಮಳೆಗೆ ಜನರು ಆತಂಕಗೊಂಡಿದ್ದರು. ಹಲವು ಕಡೆ ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಪಟ್ಟಣದ ಹಲವು ರಸ್ತೆಗಳು ಜಲಾವೃತಗೊಂಡು ಸಂಚರಿಸಲು ತೊಂದರೆ ಉಂಟಾಗಿತ್ತು. ಶುಕ್ರವಾರ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದಲ್ಲಿ ಶೇಕರಣೆಯಾಗಿದ್ದ ನೀರು ಇಳಿದು ಹೋಗಿದೆ. ಪಟ್ಟಣದ ಸಂಶುದ್ದೀನ ವೃತ್ತ ಮತ್ತು ರಂಗಿನಕಟ್ಟೆ ಹೆದ್ದಾರಿ ಗುರುವಾರದ ಭಾರೀ ಮಳೆಗೆ ಹೊಳೆಯಾಗಿ ಸಂಚರಿಸಲು ತೊಂದರೆ ಉಂಟಾಗಿದ್ದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಎರಡು ಪ್ರದೇಶದಲ್ಲಿ ನೀರು ತುಂಬಿದ ವಿಡಿಯೋ ಹಾಕಿ ಟ್ರೋಲ್ ಮಾಡಿ ಆಡಳಿತ ವರ್ಗಕ್ಕೆ ಬಿಸಿ ಮುಟ್ಟಿಸಲಾಗಿದೆ. ಪಟ್ಟಣದ ತಾಪಂ ಕಚೇರಿ ಎದುರು ಶುಕ್ರವಾರ ಐಆರ್‌ಬಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಗಟಾರ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಕಳೆದ ಮೂರು ದಿನಗಳಲ್ಲಿ ತಾಲೂಕಿನಲ್ಲಿ 450ಕ್ಕೂ ಅಧಿಕ (45 ಸೆಂ.ಮೀ.) ಮಿ.ಮೀ. ಮಳೆ ಸುರಿದಿದೆ. ವ್ಯಾಪಕ ಮಳೆಗೆ ಹೊಳೆ, ಕೆರೆ, ಬಾವಿ ತುಂಬಿ ತುಳುಕುತ್ತಿದೆ. ಜೂ.17ರವವರೆಗೂ ಹೆಚ್ಚಿನ ಮಳೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದರಿಂದ ತಾಲೂಕು ಆಡಳಿತ ಮಳೆ ಸಮಸ್ಯೆ ಎದುರಿಸಲು ಸನ್ನದ್ಧವಾಗಿದೆ. ಮಳೆಯಿಂದ ಯಾವುದೇ ರೀತಿಯ ಸಮಸ್ಯೆ ಉಂಟಾದರೂ ತಕ್ಷಣ ತಹಸೀಲ್ದಾರ ಕಚೇರಿಯ ಕಂಟ್ರೋಲ್ ರೂಮಿಗೆ ಕರೆ ಮಾಡುವಂತೆ ತಿಳಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.