ಹಾಸನದಲ್ಲಿ ಕೊಂಚ ತಗ್ಗಿದ ಮಳೆ

KannadaprabhaNewsNetwork |  
Published : Jul 23, 2024, 12:40 AM IST
22ಎಚ್ಎಸ್ಎನ್11ಎ : ಹೊಳೆನರಸೀಪುರ ತಾಲೂಕಿನ ಓಡನಹಳ್ಳಿಯಲ್ಲಿ ಪುಟ್ಟಮ್ಮ ತಿಮ್ಮಯ್ಯ ಕುಟುಂಬ ಸದಸ್ಯರು ಮಲಗಿದ್ದಾಗ ಗೋಡೆ ಕುಸಿದಿದೆ.  | Kannada Prabha

ಸಾರಾಂಶ

ಕಳೆದ ಹದಿನೈದು ದಿನಗಳ ಹಿಂದಿದ್ದ ವಾತಾವರಣ ಈಗಿಲ್ಲ. ಮಳೆ ಈಗ ಕೊಂಚ ಬಿಡುವು ನೀಡಿದೆ. ಆದರೆ ಹದಿನೈದು ದಿನಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಮುಸುಕಿನ ಜೋಳ, ಶುಂಠಿ, ಆಲೂಗಡ್ಡೆ ಬೆಳೆಗಳು ಹಲವು ರೋಗಗಳಿಗೆ ಸಿಲುಕಿ ಬಹುತೇಕ ಹಾನಿಗೀಡಾಗಿವೆ. ಇದರೊಂದಿಗೆ ಪುರ್ನವಸು ಮಳೆ ರೈತರ ತಲೆ ಮೇಲೆ ಚಪ್ಪಡಿ ಎಳೆದಿದೆ.

ಕನ್ನಡಪ್ರಭ ವಾರ್ತೆ ಹಾಸನ

"ರೈತರ ಬದುಕು ಮಾನ್ಸೂನ್‌ ಜತೆಗಿನ ಜೂಜಾಟ " ಎನ್ನುವ ಮಾತು ಅಕ್ಷರಶಃ ಸತ್ಯ. ಏಕೆಂದರೆ ಕಳೆದ ಹದಿನೈದು ದಿನಗಳ ಹಿಂದಿದ್ದ ವಾತಾವರಣ ಈಗಿಲ್ಲ. ಹದಿನೈದು ದಿನಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಮುಸುಕಿನ ಜೋಳ, ಶುಂಠಿ, ಆಲೂಗಡ್ಡೆ ಬೆಳೆಗಳು ಹಲವು ರೋಗಗಳಿಗೆ ಸಿಲುಕಿ ಬಹುತೇಕ ಹಾನಿಗೀಡಾಗಿವೆ. ಇದರೊಂದಿಗೆ ಪುರ್ನವಸು ಮಳೆ ರೈತರ ತಲೆ ಮೇಲೆ ಚಪ್ಪಡಿ ಎಳೆದಿದೆ.

ಕಳೆದ ಹದಿನೈದು ದಿನಗಳಿಂದ ಸಕಲೇಶಪುರ, ಆಲೂರು ತಾಲೂಕುಗಳಲ್ಲಿ ಹಾಗೂ ಹಾಸನ, ಅರಕಲಗೂಡು, ಬೇಲೂರು ತಾಲೂಕಿನ ಬಹುತೇಕ ಭಾಗಗಳಲ್ಲಿ ಎಡೆಬಿಡದೆ ಸುರಿದ ಮಳೆ ಸೋಮವಾರದಿಂದ ತಣ್ಣಗಾಗಿದೆ. ಭಾನುವಾರವಷ್ಟೇ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್‌. ಅಶೋಕ ಅವರು ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದನ್ನು ವೀಕ್ಷಣೆ ಮಾಡಿ ತೆರಳಿದ್ದರು. ಅದೇ ದಿನ ಸಂಜೆ ಅದೇ ಜಾಗದಲ್ಲಿ ಪೊಲೀಸರ ಹೈವೇ ಪಟ್ರೋಲ್‌ ವಾಹನದ ಮೇಲೆ ಗುಡ್ಡದ ಮಣ್ಣು ಕುಸಿದು ವಾಹನ ಕೆಸರಿನಲ್ಲಿ ಸಿಲುಕಿತ್ತು. ಜೆಸಿಬಿ ಸಹಾಯದಿಂದ ಕಾರನ್ನು ಹೊರಕ್ಕೆ ತರಲಾಯಿತು. ಹೊಳೆನರಸೀಪುರ ತಾಲೂಕಿನ ಓಡನಹಳ್ಳಿಯಲ್ಲಿ ಪುಟ್ಟಮ್ಮ ತಿಮ್ಮಯ್ಯ ಕುಟುಂಬ ಸದಸ್ಯರು ಮಲಗಿದ್ದಾಗ ಗೋಡೆ ಕುಸಿದಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ.

ಸೋಮವಾರ ಮಧ್ಯಾಹ್ನದಿಂದ ಮಳೆ ಬಿಡುವು ನೀಡಿದೆ. ಆದರೂ ಜಿಲ್ಲೆಯ ಪ್ರಮುಖ ನದಿ ಹೇಮಾವತಿಯಲ್ಲಿ ಹರಿವಿನ ಪ್ರಮಾಣ ಇಳಿದಿಲ್ಲ. ಸೋಮವಾರ ಕೂಡ ಅಣೆಕಟ್ಟೆಗೆ 23769 ಕ್ಯುಸೆಕ್‌ ನೀರು ಹರಿದುಬರುತ್ತಿದೆ. 2922 ಅಡಿ ಗರಿಷ್ಟ ಎತ್ತರ ಹೊಂದಿರುವ ಅಣೆಕಟ್ಟೆ ಭರ್ತಿಗೆ 1.80 ಅಡಿ ಮಾತ್ರವೇ ಬಾಕಿ ಇದೆ. ಒಳ ಹರಿವು ಹೆಚ್ಚಿರುವುದರಿಂದ ಎಡದಂಡೆ ನಾಲೆಗೆ 1000 ಕ್ಯುಸೆಕ್‌, ಬಲದಂಡೆ ನಾಲೆಗೆ 50 ಕ್ಯುಸೆಕ್, ನದಿಗೆ 14,374 ಕ್ಯುಸೆಕ್‌ ನೀರನ್ನು ಹರಿಬಿಡಲಾಗಿದೆ.

ಹಾನಿಯಂತೂ ನಿಂತಿಲ್ಲ: ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವಂತೆ ಮಳೆ ಕಡಿಮೆಯಾದರೂ ಮಳೆಯಿಂದ ಆಗುತ್ತಿರುವ ಹಾನಿಯಂತೂ ಇನ್ನೂ ಕಡಿಮೆ ಆಗಿಲ್ಲ. ಏಕೆಂದರೆ ಜಡಿ ಮಳೆಗೆ ಹಳೆ ಮನೆಗಳ ಗೋಡೆಗಳು ಶಿಥಿಲಗೊಂಡಿದ್ದವು. ಇದೀಗ ಮಳೆ ನಿಂತರೂ ಮನೆ ಗೋಡೆಗಳು ಕುಸಿಯುವುದು ನಿಂತಿಲ್ಲ. ಅತ್ತ ಸಕಲೇಶಪುರ ತಾಲೂಕಿನಲ್ಲಿ ಕೂಡ ಮಳೆ ಬಿಡುವು ನೀಡಿದೆ. ಆದರೆ, ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಕಾಫಿ ತೋಟಗಳು ಕೂಡ ಶೀತಪೀಡಿತವಾಗಿವೆ. ಹಾಗಾಗಿ ಬೆಳೆಗಾರರು ಕಾಫಿ ತೋಟದಲ್ಲಿ ಯಾವ ಕೆಲಸಗಳನ್ನೂ ಮಾಡಲಾಗುತ್ತಿಲ್ಲ.

ಇನ್ನು ಅರೆಮಲೆನಾಡು ತಾಲೂಕುಗಳಾದ ಆಲೂರು, ಹಾಸನ, ಅರಕಲಗೂಡು ಮತ್ತು ಬೇಲೂರುಗಳಲ್ಲಿ ಈಗೇನೋ ಮಳೆ ನಿಂತಿದೆ. ಆದರೆ, ಕಳೆದ ಹದಿನೈದು ದಿನಗಳಲ್ಲಿ ಸುರಿದ ಮಳೆಗೆ ಬಹುತೇಕ ಬೆಳೆಗಳೆಲ್ಲಾ ಅರೆಜೀವವಾಗಿವೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆ ಬಿತ್ತನೆಯೇ ಇತ್ತೀಚೆಗೆ ಕಡಿಮೆಯಾಗಿದೆ. ಆದಾಗ್ಯೂ ಹಾಸನ ತಾಲೂಕಿನ ಸಾಲಗಾಮೆ, ಶಾಂತಿಗ್ರಾಮ, ದುದ್ದ ಹೋಬಳಿಗಳಲ್ಲಿ ಅಲ್ಲಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಹೂ ಕುಡಿಗೆ ಬಂದಿದ್ದ ಆಲೂಗಡ್ಡೆಗೆ ಅತಿಯಾದ ಮಳೆಯಿಂದ ಕರಿಕಡ್ಡಿ ರೋಗ ಕಾಣಿಸಿಕೊಂಡಿದೆ. ಇನ್ನು ಈ ಬಾರಿ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಶುಂಠಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಶುಂಠಿಯ ಕೊಳೆರೋಗದ ವೈರಾಣುಗಳು ಮಣ್ಣಿನಲ್ಲಿ ಹರಡಿದ್ದು, ಹಲವು ಕಡೆಗಳಲ್ಲಿ ಕೊಳೆರೋಗದಿಂದ ಶುಂಠಿ ಹಾಳಾಗಿದೆ. ಅತಿಯಾದ ಮಳೆಗೆ ಚೆನ್ನಾಗಿದ್ದ ಬೆಳೆ ಕೂಡ ಕೊಳೆರೋಗಕ್ಕೆ ತುತ್ತಾಗುತ್ತಿದೆ.

ಜಿಲ್ಲೆಯ ಬಹುತೇಕ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಆಗುವುದು ಮುಸುಕಿನ ಜೋಳ. ಆದರೆ, ಈ ಬಾರಿ ಅತಿಯಾದ ಮಳೆಗೆ ಈ ಬೆಳೆ ಕೂಡ ಚೆನ್ನಾಗಿಲ್ಲ. ಶೀತಪೀಡಿತಗೊಂಡು ಬೆಳವಣಿಗೆ ಕುಂಠಿತವಾಗಿದೆ.

ಇನ್ನು ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ರೈತರು ಬತ್ತದ ಸಸಿಮಡಿಗಳನ್ನು ಸಿದ್ಧಪಡಿಸಿದ್ದರು. ಆದರೆ, ಅತಿಯಾದ ಮಳೆಯಿಂದಾಗಿ ಮೊಳಕೆ ಕಟ್ಟಿ ಬೆಳೆಸಿದ್ದ ಭತ್ತದ ಮಡಿಗಳು ಕೂಡ ನೀರು ನಿಂತು ಕರಗಿವೆ. ಹಾಗಾಗಿ ರೈತರು ಮತ್ತೆಮತ್ತೆ ಭತ್ತದ ಸಸಿಗಳನ್ನು ಬೆಳೆಸುವ ಪ್ರಯತ್ನದಲ್ಲಿ ಕೈಲಿರುವ ಹಣವನ್ನೆಲ್ಲಾ ಭೂಮಿಗೆ ಸುರಿಯಬೇಕಾಗಿದೆ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ