ಬಸವರಾಜ ಸರೂರ
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಕುಂಠಿತಗೊಂಡಿವೆ. ಕೃಷಿ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಮುನ್ಸೂಚನೆ ಕಾಣಿಸುತ್ತಿದೆ.
ಮಳೆಯ ಅಭಾವ:ತಾಲೂಕಿನ ಜೂನ್ ತಿಂಗಳಿನಲ್ಲಿ ವಾಡಿಕೆ ಮಳೆ 73.90 ಮಿ.ಮೀ. ಇದ್ದು, 63.95 ಮಿಮೀ ಮಾತ್ರ ಮಳೆಯಾಗಿದೆ. ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆ 98.10 ಮಿ.ಮೀ. ಇದ್ದು ಇದುವರೆಗೂ ಕೇವಲ 18.8 ಮಿಮೀ ಮಾತ್ರ ಮಳೆಯಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಒಣಗುತ್ತಿರುವ ಬಿತ್ತಿದ ಪೈರು: ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ಈಗಾಗಲೇ ಬಿತ್ತನೆ ಮಾಡಿರುವ ಕೃಷಿಭೂಮಿಯಲ್ಲಿ ಮೊಳಕೆಗಳು ಒಣಗುತ್ತಿವೆ. ವರುಣನ ನಿರೀಕ್ಷೆಯಲ್ಲಿ ರೈತರು ದಿನ ದೂಡುವಂತಾಗಿದೆ. ನೀರಾವರಿ ಸೌಲಭ್ಯ ಹೊಂದಿದವರು ಮಾತ್ರ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.
ಆರ್ಥಿಕ ನಷ್ಟದ ಭೀತಿ: ಬಿತ್ತನೆ ಬೀಜ, ಗೊಬ್ಬರ ಹಾಗೂ ಕೂಲಿಗಾಗಿ ಸಾವಿರಾರು ರುಪಾಯಿ ಸಾಲ ಮಾಡಿರುವ ರೈತರು ಈಗ ಕಂಗಾಲಾಗಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಕೆಲವು ಕಡೆಗಳಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿರುವ ರೈತರು ಇದೀಗ ಮಳೆ ಕೈಕೊಟ್ಟಿರುವುದರಿಂದ ಕಂಗಾಲಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹೇಳಿದರು.