ಕಾರವಾರ: ಉತ್ತರ ಕನ್ನಡದ ಕರಾವಳಿಯಲ್ಲಿ ಗುರುವಾರ ಮಳೆಯ ಆರ್ಭಟ ಹೆಚ್ಚಿದೆ. ಬೆಳಗ್ಗೆಯಿಂದ ಮಧ್ಯಾಹ್ನ 3.30ರ ತನಕ ಭಾರಿ ಮಳೆ ನಿರಂತರವಾಗಿ ಸುರಿಯಿತು. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ಕೆಲವೆಡೆ ರಸ್ತೆಗಳ ಮೇಲೂ ನೀರು ನುಗ್ಗಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ಕಾರವಾರದಲ್ಲಿ ಭಾರಿ ಮಳೆ:
ಜಿಲ್ಲೆಯ ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು ರಾಷ್ಟ್ರೀಯ ಹೆದ್ದಾರಿ 66 ರ ರವೀಂದ್ರನಾಥ ಟ್ಯಾಗೋರ ಕಡಲತೀರದ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಪರದಾಡುವಂತಾಯಿತು.ಕರಾವಳಿಯಲ್ಲಿ ಬುಧವಾರ ಸಂಜೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಗುರುವಾರ ಕೂಡ ಮಳೆ ಮುಂದುವರಿದಿದೆ.
ಅದೇ ರೀತಿ ನಗರದ ರವೀಂದ್ರನಾಥ ಟ್ಯಾಗೋರ ಕಡಲತೀರದ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ಹರಿದುಹೋಗಲು ಅವಕಾಶವಿಲ್ಲದ ಕಾರಣ ನೀರು ರಸ್ತೆಯಲ್ಲಿಯೇ ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು.ಪ್ರತಿ ಬಾರಿ ಮಳೆ ಜೋರಾದಾಗಲೆಲ್ಲ ನೀರು ತುಂಬುತ್ತಿದ್ದರೂ ಇನ್ನು ಕೂಡ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿಲ್ಲ. ಇದರಿಂದ ಈ ಅವಾಂತರಕ್ಕೆ ಕಾರಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಗಮನ ಹರಿಸಿ ಸರಿಪಡಿಸಬೇಕು. ಇಲ್ಲವಾದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.